Advertisement

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ: ಯಂತ್ರೋಪಕರಣ ವಶ

12:19 AM Jun 19, 2020 | Sriram |

ಮಹಾನಗರ: ನಗರದ ಅಡ್ಯಾರ್‌ನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಎರಡು ಸ್ಥಳಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಮರಳುಗಾರಿಕೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಮತ್ತು ಪೊಲೀಸ್‌ ಇಲಾಖೆಯ ನಿಗ್ರಹದಳದ ಅಧಿಕಾರಿಗಳನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳು ಅಡ್ಯಾರುಕಟ್ಟೆ ಬಳಿ ನೇತ್ರಾವತಿ ನದಿ ಪಾತ್ರದಲ್ಲಿ ಅನಧಿಕೃತವಾಗಿ ಮರಳುಗಾರಿಕೆ, ಸಾಗಾಣಿಕೆ, ದಾಸ್ತಾನು ಮಾಡುತ್ತಿದ್ದ ಪ್ರದೇಶಗಳಿಗೆ ಜೂ. 16ರಂದು ದಾಳಿ ನಡೆಸಿದ್ದಾರೆ.

ಈ ವೇಳೆ 1 ಟಾಟಾ ಹಿಟಾಚಿ, 1 ಜೆ.ಸಿ.ಬಿ., 11 ಕಬ್ಬಿಣದ ಪೈಪ್‌ಗ್ಳು (20 ಅಡಿ ಉದ್ದ, 6 ಇಂಚು ಅಗಲ), 18 ಡ್ರಮ್‌ಗಳು, 9 ಪ್ಲಾಸ್ಟಿಕ್‌ ಪೈಪುಗಳು, 3 ಫೈಬರ್‌ ಬಾಕ್ಸ್‌ ಗಳು, ಮರಳು ತುಂಬಿದ 2 ಟಿಪ್ಪರ್‌ ವಾಹನಗಳು ಹಾಗೂ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 700 ಮೆಟ್ರಿಕ್‌ ಟನ್‌ ಮರಳನ್ನು ವಶಕ್ಕೆ ಪಡೆದುಕೊಂಡು ಜಿಲ್ಲಾಡಳಿತದಿಂದ ನಿರ್ಮಿಸಿರುವ ಮಳಲಿ ಸ್ಟಾರ್ಕ್‌ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ.ಇನ್ನೊಂದು ಪ್ರಕರಣದಲ್ಲಿ ಮಳವೂರು ಡ್ಯಾಂನ ರೈಲ್ವೇ ಹಳಿ ಸೇತುವೆ ಬಳಿ ಅನಧಿಕೃತವಾಗಿ ಮರಳು ತೆಗೆಯಲು ಬಳಸಿದ್ದ 1 ಡ್ರೆಜ್ಜಿಂಗ್‌ ಯಂತ್ರವನ್ನು ವಶಕ್ಕೆ ಪಡೆದು ಕಾವೂರು ಪೊಲೀಸ್‌ ಠಾಣೆಯ ಸುಪರ್ದಿಗೆ ನೀಡಲಾಗಿದೆ. ಇಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 50 ಮೆಟ್ರಿಕ್‌ ಟನ್‌ ಮರಳನ್ನು ಇಲಾಖೆಯ ವಶಕ್ಕೆ ಪಡೆದುಕೊಳ್ಳಲಾಗಿದೆ.

ಅಕ್ರಮ ಮರಳುಗಾರಿಕೆ ತಡೆಗೆ ಪ್ರತ್ಯೇಕ ತಂಡ
ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಣ ಕುರಿತು ಜಿಲ್ಲಾ ಮರಳು ಸಮಿತಿ ಸಭೆ ಬುಧವಾರ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಕ್ರಮ ಮರಳುಗಾರಿಕೆ ಹಾಗೂ ಸಾಗಾಣಿಕೆ ನಿಯಂತ್ರಣ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಂತೆ ತಂಡಗಳನ್ನು ರಚಿಸಲಾಯಿತು. ಈ ತಂಡಗಳು ಕಾನೂನು ಕ್ರಮ ಕೈಗೊಳ್ಳಲು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ತಿದ್ದುಪಡಿ ನಿಯಮ 2016 ರಂತೆ ಅಧಿಕಾರವನ್ನು ನಿಯೋಜಿಸಲಾಗಿದೆ. ಈ ತಂಡಗಳು ಕ್ಷಿಪ್ರವಾಗಿ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next