ಕುಂದಾಪುರ: ಮೀನು ಸಾಗಾಟದ ಇನ್ಸುಲೇಟರ್ ಅಡ್ಡ ಹಾಕಿದ ಐವರು ದುಷ್ಕರ್ಮಿಗಳ ತಂಡವೊಂದು ಚಾಲಕನಿಗೆ ಹಲ್ಲೆಗೈದು, ಚೂರಿಯಿಂದ ಇರಿದು ಹಣ ಲೂಟಿಗೈದ ಘಟನೆ ತಮಿಳುನಾಡಿನ ಸೇಲಂ ಸಮೀಪದ ಉಳನ್ದೂರು ಎಂಬಲ್ಲಿ ಸಂಭವಿಸಿದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಇನ್ಸುಲೇಟರ್ ಚಾಲಕ ಕೇರಳ ಮೂಲದ ಬಶೀರ್ (35) ಅವರು ವಾಹನವನ್ನು ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ನಿಲ್ಲಿಸಿ, ರೈಲು ಹತ್ತಿ ಕುಂದಾಪುರಕ್ಕೆ ಬಂದು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ:
ಇನ್ಸುಲೇಟರ್ ಚಾಲಕ ಬಶೀರ್ ಅವರು ಜು. 2ರಂದು ಅಪರಾಹ್ನ 3 ಗಂಟೆಯ ಸುಮಾರಿಗೆ ಚೆನ್ನೈನ ಪುಲಿಕಾಟ್ ಎಂಬಲ್ಲಿಂದ ಮೀನನ್ನು ಲೋಡು ಮಾಡಿಕೊಂಡು ಕೇರಳದ ಕ್ಯಾಲಿಕಟ್‌ಗೆ ಹೊರಟಿದ್ದರು. ದಾರಿ ಮಧ್ಯೆ ಸೇಲಂನ ಉಳನೂªರು ಎಂಬಲ್ಲಿ 3 ಬೈಕ್‌ಗಳಲ್ಲಿ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಐವರು ದುಷ್ಕರ್ಮಿಗಳ ತಂಡ ಅಡ್ಡ ಹಾಕಿದ್ದಾರೆ. ಅದರಲ್ಲಿ ಒಬ್ಬ ಕೆನ್ನೆಗೆ ಹೊಡೆದಿದ್ದು, ಇನ್ನೊಬ್ಬ ಹಣೆಗೆ ಚೂರಿಯಿಂದ ಇರಿದು, ಗಾಯಗೊಳಿಸಿದ್ದಾನೆ. ಅಲ್ಲಿಂದ ಬಶೀರ್ ಅವರು ಸ್ವಲ್ಪ ಮುಂದೆ ವಾಹನ ಚಲಾಯಿಸಿಕೊಂಡು ಹೋಗಿದ್ದು, ಮತ್ತೆ ಬಂದ ಆ ತಂಡ ಬಶೀರ್ ಅವರ ಬಳಿಯಿದ್ದ 15 ಸಾವಿರ ರೂ. ಹಾಗೂ ಇವರ ಬಳಿ 1,200 ರೂ. ಹಾಗೂ ಮೀನಿನ ಪಾರ್ಟಿಯವರಲ್ಲಿ 10 ಸಾವಿರ ರೂ. ಹಣವನ್ನು ಗೂಗಲ್ ಪೇ ಮೂಲಕ ಹಾಕಿಸಿಕೊಂಡು ಜೀವ ಬೆದರಿಕೆ ಹಾಕಿ ತೆರಳಿದ್ದಾರೆ. ಗಾಯಗೊಂಡಿದ್ದ ಬಶೀರ್ ಅವರು ಈ ಘಟನೆಯಿಂದ ಭಯಭೀತರಾಗಿ ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ಇನ್ಸುಲೇಟರ್ ವಾಹನ ಇಟ್ಟು, ರೈಲಿನ ಮೂಲಕ ಕುಂದಾಪುರಕ್ಕೆ ಬಂದು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಶೀರ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಘಟನೆ ತಮಿಳುನಾಡಿನ ಸೇಲಂನಲ್ಲಿ ಆಗಿರುವುದರಿಂದ ಇಲ್ಲಿನ ಪೊಲೀಸರು ಕೇಸು ದಾಖಲಿಸಿಕೊಂಡು ಅಲ್ಲಿನ ಠಾಣೆಗೆ ವರ್ಗಾಯಿಸಲಿದ್ದಾರೆ.