ಗುವಾಹಟಿ: ಭದ್ರತಾ ಪಡೆಗಳು ಮತ್ತು ಇತರರು ಸುತ್ತಲೂ ಸೇರಿದ್ದ ಸಮಯದಲ್ಲಿ ಕಾಂಗ್ರೆಸ್ ಶಾಸಕನ ಮೇಲೆ ಅಚಾನಕ್ ಗುಂಡಿನ ದಾಳಿ ನಡೆಸಿದ ಘಟನೆ ಅಸ್ಸಾಂ- ನಾಗಾಲ್ಯಾಂಡ್ ಗಡಿ ಭಾಗದಲ್ಲಿ ನಡೆದಿದೆ. ಜೊರ್ಹಾಟ್ ಜಿಲ್ಲೆಯ ಅರಣ್ಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಮೂವರು ಪತ್ರಕರ್ತರು ಗಾಯಗೊಂಡಿದ್ದಾರೆ.
ಮರಿಯಾನಿ ಶಾಸಕ ರೂಪ್ ಜ್ಯೋತಿ ಕುರ್ಮಿ ಅವರು ದೆಸ್ಸಾಯ್ ಕಣಿವೆ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿಕ್ರಮಣದ ಬಗ್ಗೆ ಪರಿಶೀಲನೆಗೆಂದು ತೆರಳಿದ್ದರು. ಶಾಸಕರ ಜೊತೆ ಅವರ ಭದ್ರತಾ ಪಡೆ, ಪತ್ರಕರ್ತರು ಮತ್ತು ಹಲವು ಬೆಂಬಲಿಗರಿದ್ದರು. ಆದರೆ ಈ ವೇಳೆ ಅಚಾನಕ್ ಆಗಿ ಗುಂಡಿನ ದಾಳಿ ನಡೆದಿದ್ದು, ಎಲ್ಲರೂ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗಾಲ್ಯಾಂಡ್ ಗಡಿ ಭಾಗದಿಂದ ಗುಂಡಿನ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಅವರು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ತಿಳಿಸಿದ್ದಾರೆ.
ಇದನ್ನೂ ಓದಿ:ನಿರ್ಭಯಾ ಪ್ರಕರಣ ನೆನಪಿಸಿದ ಘಟನೆ : ಸಾಮೂಹಿಕ ಅತ್ಯಾಚಾರ: ವೀಡಿಯೋ ವೈರಲ್; ಸೆರೆ
ಅಸ್ಸಾಂ ರಾಜ್ಯವು ನಾಗಾಲ್ಯಾಂಡ್ ಜೊತೆ ಐದು ಜಿಲ್ಲೆಗಳಲ್ಲಿ ಗಡಿ ಹಂಚಿಕೊಂಡಿದೆ. ಚರೈಡಿಯೊ, ಶಿವಸಾಗರ್, ಜೋರ್ಹತ್, ಗೋಲಾಘಾಟ್ ಮತ್ತು ಕಾರ್ಬಿ ಆಂಗ್ಲಾಂಗ್ ಗಳಲ್ಲಿ ಉಭಯ ರಾಜ್ಯಗಳು ಗಡಿ ಹಂಚಿಕೊಂಡಿದೆ. ನಾಗಾಲ್ಯಾಂಡ್ ಕಡೆಯಿಂದ ಅತಿಕ್ರಮಣವಾಗುವ ಕಾರಣದಿಂದ ಕಳೆದ ಎರಡು ದಶಕಗಳಿಂದ ಈ ಜಿಲ್ಲೆಗಳಲ್ಲಿ ಹಿಂಸಾಚಾರಗಳು ನಡೆಯುತ್ತಿದೆ.