ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಶನಿವಾರ (ಜೂನ್ 18) ಬೆಳಗ್ಗೆ ಎರಡು ಬಾಂಬ್ ಸ್ಫೋಟ ಸಂಭವಿಸಿದ್ದು, ಈ ಸಂದರ್ಭದಲ್ಲಿ ಗುಂಡಿನ ದಾಳಿಯೂ ನಡೆದಿರುವುದಾಗಿ ವರದಿ ತಿಳಿಸಿದೆ. ಘಟನೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ
ಕಾಬೂಲ್ ನ ಗುರುದ್ವಾರ ಸಮೀಪ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ವೇಳೆ ಗುರುದ್ವಾರದಲ್ಲಿ ಅಂದಾಜು 16 ಮಂದಿ ಭಕ್ತರು ಹಾಜರಿದ್ದರು. ಆದರೆ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ ವರದಿಯಾಗಿಲ್ಲ.
ಗುರುದ್ವಾರದ ಸಮೀಪದ ರಸ್ತೆ ಜನನಿಬಿಡವಾಗಿದ್ದು, ಈ ಸ್ಥಳದಲ್ಲಿಯೇ ಸ್ಫೋಟ ಸಂಭವಿಸಿದ್ದರಿಂದ ಹಲವಾರು ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.
ಬಾಂಬ್ ಸ್ಫೋಟ ನಡೆಸಿದ್ದು ಯಾರು ಮತ್ತು ಸಾವು, ನೋವಿನ ಬಗ್ಗೆ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ಅಫ್ಘಾನಿಸ್ತಾನದ ಟೋಲೊ ನ್ಯೂಸ್ ಟ್ವೀಟ್ ಮಾಡಿದೆ. ಕಾಬೂಲ್ ನಲ್ಲಿ ಪವಿತ್ರ ಗುರುದ್ವಾರದ ಮೇಲೆ ದಾಳಿ ನಡೆಸಿರುವ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಫ್ಘಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಘಟನೆ ಕುರಿತು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.
ಜೂನ್ 11ರಂದು ಕಾಬೂಲ್ ನಲ್ಲಿ ಸ್ಫೋಟ ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು. ಮೇ 25ರಮದು ಸಂಭವಿಸಿದ್ದ ಮೂರು ಬಾಂಬ್ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ನಡೆದಿತ್ತು.