ಕೊರೊನಾ ಬಿಕ್ಕಟ್ಟಿನ ನಡುವೆಯೇ ಬಂದಿರುವ ಈ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ಎಲ್ಲಕ್ಕಿಂತಲೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಯೋಜನೆ(ನ್ಯಾಷನಲ್ ಹೆಲ್ತ್ ಮಿಷನ್)ಯ ಜೊತೆಗೆ ಹೆಚ್ಚುವರಿಯಾಗಿ ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯನ್ನು ಘೋಷಿಸಲಾಗಿದೆ.
ಈ ಯೋಜನೆಯ ಅನ್ವಯ, 17,788 ಗ್ರಾಮೀಣ ಮತ್ತು 11,024 ನಗರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳಿಗೆ ನೆರವು ನೀಡಲಾಗುತ್ತದೆ. 11 ರಾಜ್ಯಗಳ ಎಲ್ಲ ಜಿಲ್ಲೆಗಳು ಹಾಗೂ 3382 ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳಲ್ಲಿ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
602 ಜಿಲ್ಲೆಗಳು ಹಾಗೂ 12 ಕೇಂದ್ರೀಯ ಸಂಸ್ಥೆಗಳಲ್ಲಿ ತುರ್ತು ಸೇವಾ ಆಸ್ಪತ್ರೆಗಳ ಸ್ಥಾಪನೆ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್‌ಸಿಡಿಸಿ) ಮತ್ತು ಅದರ 5 ಪ್ರಾದೇಶಿಕ ಶಾಖೆಗಳು ಹಾಗೂ 20 ಮೆಟ್ರೋಪಾಲಿಟನ್ ಆರೋಗ್ಯ ನಿಗಾ ಘಟಕಗಳ ಬಲಿಷ್ಠಗೊಳಿಸುವಿಕೆ, ಎಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಂತೆ ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್‌ನ ವಿಸ್ತರಣೆ, 17 ಹೊಸ ಸಾರ್ವಜನಿಕ ಆರೋಗ್ಯ ಘಟಕಗಳ ಕಾರ್ಯಾರಂಭಕ್ಕೂ ನಿರ್ಧರಿಸಲಾಗಿದೆ.
ಇದನ್ನೂ ಓದಿ:ಕೇಂದ್ರ ಬಜೆಟ್ : ಚಿನ್ನ, ಬೆಳ್ಳಿ ಸುಂಕ ಇಳಿಕೆ ; ಎನ್ಆರ್‌ಐಗಳಿಗೆ ಅನುಕೂಲ
ದೇಶ ಪ್ರವೇಶಿಸುವ ಎಂಟ್ರಿ ಪಾಯಿಂಟ್‌ಗಳಲ್ಲಿ ಅಂದರೆ 32 ವಿಮಾನ ನಿಲ್ದಾಣಗಳು, 11 ಬಂದರುಗಳು ಹಾಗೂ 7 ಲ್ಯಾಂಡ್ ಕ್ರಾಸಿಂಗ್‌ಗಳಲ್ಲಿ ಈಗಾಗಲೇ ಇರುವಂತಹ 33 ಸಾರ್ವಜನಿಕ ಆರೋಗ್ಯ ಘಟಕಗಳ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಾಗಿಯೂ ಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಜೊತೆಗೆ, ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯನ್ವಯ 15 ಆರೋಗ್ಯ ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳು ಮತ್ತು 2 ಸಂಚಾರಿ ಆಸ್ಪತ್ರೆಗಳನ್ನು ಸ್ಥಾಪಿಸಲೂ ನಿರ್ಧರಿಸಲಾಗಿದೆ.