ಹೊಸದಿಲ್ಲಿ; ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಆತ್ಮನಿರ್ಭರತೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ 101 ವಸ್ತುಗಳ ಆಮದಿಗೆ ನಿಷೇಧ ಹೇರಲಿದ್ದು, ಅವುಗಳನ್ನು ಭಾರತದಲ್ಲೇ ಉತ್ಪಾದಿಸಲಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಕ್ಷಣಾ ವಲಯದಲ್ಲಿ ವಿದೇಶಿ ಆಮದನ್ನು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದನೆ ಮಾಡಿ ಆತ್ಮ ನಿರ್ಭರತೆ ಸಾಧಿಸಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಸರ್ಕಾರ ಈಗಾಗಲೇ 101 ರಕ್ಷಣಾ ವಲಯದ ಉತ್ಪನ್ನಗಳನ್ನು ಪಟ್ಟಿ ಮಾಡಿದೆ. ಆಧುನಿಕ ತಂತ್ರಜ್ಞಾನದ ಆರ್ಟಿಲರಿ ಗನ್ಸ್, ರೈಫಲ್ಸ್, ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ಗಳು, ರಾಡಾರ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ರಕ್ಷಣಾ ವಲಯದಲ್ಲಿ ಆಮದು ಕಡಿಮೆ ಮಾಡುವ ಸಂಬಂಧ 2020ರಿಂದ 2024ರ ನಡುವೆ ಹೆಚ್ಚಿನ ಉತ್ಪಾದನೆ ಮಾಡಲು ಒತ್ತು ನೀಡಲಾಗುವುದು. ಈ ಅವಧಿಯಲ್ಲಿ ಭೂ ಸೇನೆ ಮತ್ತು ವಾಯುಸೇನೆಗೆ 1,30,000 ಕೋಟಿ. ರೂ ಮತ್ತು ನೌಕಾ ಸೇನೆಗೆ 1,40,000 ಕೋಟಿ ರೂ ಮೀಸಲಿಡುವುದಾಗಿ ಸಚಿವರು ಘೋಷಿಸಿದರು.
ಸೇನಾ ಪಡೆಗಳು, ಸಾರ್ವಜನಿಕ ಮತ್ತು ಖಾಸಗಿಯ ಎಲ್ಲ ಷೇರುದಾರರ ಜತೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ರಕ್ಷಣಾ ಇಲಾಖೆ ಸಾಮಾಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ 6 ರಿಂದ 7 ವರ್ಷ ದೇಶೀಯ ಉದ್ಯಮದ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಒಪ್ಪಂದಗಳನ್ನು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.