Advertisement

ನಗದು ವರ್ಗಕ್ಕೆ ಹೊರಟವರು 7.5 ಕೋಟಿಯೊಂದಿಗೆ ಪರಾರಿಯಾದರು!

01:29 AM May 13, 2017 | Karthik A |

ಮಂಗಳೂರು/ಹುಣಸೂರು: ಕರಾವಳಿ ನಗರ ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆ್ಯಕ್ಸಿಸ್‌ ಬ್ಯಾಂಕಿನ ಕರೆನ್ಸಿ ಚೆಸ್ಟ್‌ನಿಂದ ಬೆಂಗಳೂರಿನಲ್ಲಿರುವ ಬ್ಯಾಂಕಿನ ಕೋರಮಂಗಲ ಶಾಖೆಗೆ 7.5 ಕೋಟಿ ರೂ. ನಗದು ಸಾಗಿಸುತ್ತಿದ್ದ ನಾಲ್ವರು ಹಣ ಸಹಿತ ನಾಪತ್ತೆಯಾಗಿದ್ದು, ವಾಹನವು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಅನಾಥವಾಗಿ ಪತ್ತೆಯಾಗಿದೆ. ಈ ಹಣವನ್ನು ಎಸ್‌ಐಎಸ್‌ ಪ್ರೊಸೆಕ್ಯುರ್‌ ಹೋಲ್ಡಿಂಗ್ಸ್‌ ಕಂಪೆನಿ ಮೂಲಕ ಸಾಗಿಸಲಾಗುತ್ತಿತ್ತು. ಈ ವಾಹನದಲ್ಲಿ ಚಾಲಕ, ಗನ್‌ಮ್ಯಾನ್‌ ಸಹಿತ ಒಟ್ಟು ನಾಲ್ಕು ಮಂದಿ ಇದ್ದರು. ದಾರಿ ಮಧ್ಯೆ 7.5 ಕೋಟಿ ರೂ. ಹಣ ಸಹಿತ ವಾಹನ ಚಾಲಕ ಕರಿಬಸವ, ಬೆಂಗಾವಲು ರಕ್ಷಕ ಪರಶುರಾಮ, ಗನ್‌ ಮ್ಯಾನ್‌ಗಳಾದ ಬಸಪ್ಪ ಮತ್ತು ಪೂವಣ್ಣ  ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಹಣ ಸಾಗಿಸುತ್ತಿದ್ದ ವಾಹನವನ್ನು ಮೈಸೂರಿನ ಹುಣಸೂರಿನಲ್ಲಿ ಪತ್ತೆ ಮಾಡಿದ್ದಾರೆ. ಆದರೆ ವಾಹನದಲ್ಲಿದ್ದ ಹಣವನ್ನು ಪೂರ್ತಿ ದೋಚಲಾಗಿದೆ.  

Advertisement

ಘಟನೆಯ ವಿವರ: ಆ್ಯಕ್ಸಿಸ್‌ ಬ್ಯಾಂಕಿನ ಯೆಯ್ಯಾಡಿ ಶಾಖೆಯಿಂದ ಹಣವನ್ನು ಹೊತ್ತ ನಾಲ್ವರು ಬೊಲೇರೊ ವಾಹನದಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಹೊರಟಿದ್ದರು. ಆದರೆ ಈ ವಾಹನ ನಿಗದಿತ ಅವಧಿಯಲ್ಲಿ ಬೆಂಗಳೂರಿಗೆ ತಲುಪಲಿಲ್ಲ. ಇದರಿಂದ ಸಂಶಯಗೊಂಡು ಎಸ್‌ಐಎಸ್‌ ಪ್ರೊಸೆಕ್ಯುರ್‌ ಹೋಲ್ಡಿಂಗ್ಸ್‌ ಕಂಪೆನಿಯ ಮೇಲುಸ್ತುವಾರಿ ವಹಿಸಿಕೊಂಡಿರುವ ಸಚಿನ್‌ ವಿಚಾರಿಸಿದಾಗ ಹಣ ಸಹಿತ ವಾಹನದೊಂದಿಗೆ ಕಂಪೆನಿ ಸಿಬಂದಿ ನಾಪತ್ತೆಯಾಗಿರುವುದು ಗಮನಕ್ಕೆ ಬಂತು. ಬಳಿಕ ಸಚಿನ್‌ ಅವರು, ಹಣವನ್ನು ಬ್ಯಾಂಕಿಗೆ ಪಾವತಿಸದೆ ನಂಬಿಕೆ ದ್ರೋಹ ಎಸಗಿ ವಂಚಿಸಿ ಪರಾರಿಯಾಗಿದ್ದಾರೆ ಹಾಗೂ ಅವರೆಲ್ಲರೂ ಪತ್ತೆಯಾಗಿದ್ದಾರೆ ಎಂದು ಅವರು ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ಏತನ್ಮಧ್ಯೆ ಹಣ ಸಾಗಿಸಿದ ಬೊಲೇರೊ ವಾಹನ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಅರಸುಕಲ್ಲಳಿ ಎಂಬಲ್ಲಿ ಶುಕ್ರವಾರ ಅನಾಥವಾಗಿ ಪತ್ತೆಯಾಗಿದೆ. ಪರಾರಿಯಾಗಿರುವವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕಂಕನಾಡಿ ನಗರ ಠಾಣೆಯ ಪೊಲೀಸರು ಹೇಳಿದ್ದಾರೆ. 

ಇನ್ನೋರ್ವ ಆರೋಪಿ ಭಾಗಿ?
ಆರೋಪಿ ಪೂವಣ್ಣನ ಕಿರಿಯ ಸಹೋದರ ಭೀಮಯ್ಯನೂ ಇದರಲ್ಲಿ ಭಾಗಿಯಾಗಿರುವ ಸಂಶಯವಿದೆ. ಇವರಿಬ್ಬರು ಆರೋಪಿ ಬಸಪ್ಪನ ಸಂಬಂಧಿಕರು. ಭೀಮಯ್ಯ ಗುರುವಾರದಿಂದಲೇ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾನೆ.

ತನಿಖಾ ತಂಡ ರಚನೆ 
ಪ್ರಕರಣದ ತನಿಖೆಗಾಗಿ ದಕ್ಷಿಣ ವಿಭಾಗದ ಎಸಿಪಿ ಶ್ರುತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ತಂಡದಲ್ಲಿ ಸಿಸಿಆರ್‌ಬಿ ಎಸಿಪಿ ವೆಲೆಂಟೈನ್‌ ಡಿ’ಸೋಜಾ, ಇನ್ಸ್‌ಪೆಕ್ಟರ್‌ಗಳಾದ ರವೀಶ್‌ ನಾಯಕ್‌ (ಉರ್ವ), ಮಹಮದ್‌ ಶರೀಫ್‌ (ಮಂಗಳೂರು ಗ್ರಾಮಾಂತರ), ಶಾಂತಾರಾಮ್‌ (ಬಂದರು), ಕೆ.ಯು. ಬೆಳ್ಳಿಯಪ್ಪ (ಪಾಂಡೇಶ್ವರ), ರವಿ ನಾಯ್ಕ (ಕಂಕನಾಡಿ ನಗರ), ಸಿಸಿಬಿ ಪಿಎಸ್‌ಐ ಶ್ಯಾಂ ಸುಂದರ್‌, ಹೆಡ್‌ಕಾನ್‌ಸ್ಟೆಬಲ್‌ಗ‌ಳಾದ ರಾಜೇಂದ್ರ ಪ್ರಸಾದ್‌, ಗಂಗಾಧರ, ದಯಾನಂದ, ಶೀನಪ್ಪ, ಚಂದ್ರಶೇಖರ, ಜಬ್ಟಾರ್‌, ದಾಮೋದರ, ರಿಜಿ ಇದ್ದಾರೆ. 

ಬ್ಯಾಂಕಿನ ಹೇಳಿಕೆ 
ಬ್ಯಾಂಕಿನ ನಗದು ವರ್ಗಾವಣೆ ವ್ಯವಸ್ಥೆ ಮತ್ತು ಪ್ರಕ್ರಿಯೆ ಸದೃಢವಾಗಿದ್ದು, ಬ್ಯಾಂಕಿಂಗ್‌ ನಿಯಮಾವಳಿಯಂತೆ ನಡೆಯುತ್ತವೆ. ಈ ಪ್ರಕರಣದಲ್ಲಿ ಎಸ್‌ಐಎಸ್‌ ಪ್ರೊಸೆಕ್ಯುರ್‌ ಹೋಲ್ಡಿಂಗ್ಸ್‌ ಸಂಸ್ಥೆಯು ನಗದು ವರ್ಗಾವಣೆಯನ್ನು ನಿರ್ವಹಿಸಿತ್ತು. ಬ್ಯಾಂಕಿನ ಯಾವುದೇ ಸಿಬಂದಿ ಅಥವಾ ವಾಹನ ಇದರಲ್ಲಿ ಭಾಗಿಯಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಅವರಿಗೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next