Advertisement

ಒಂದು ಮೀನಿನ ಕಥೆ!

06:05 AM Oct 05, 2017 | |

ಕುತೂಹಲಕರ ಜೀವನಚಕ್ರ ಹೊಂದಿರುವ ಜೀವಿಗಳಲ್ಲಿ ಸಾಲ್ಮನ್‌ ಸಲಾರ್‌ (Salmon salar) ಮೀನಿನ ಪ್ರಭೇದ ಸಹ ಒಂದು. ಬಾಲ್ಯಾವಸ್ಥೆಯನ್ನು ಸಿಹಿನೀರಿನ  ನದಿಗಳಲ್ಲಿ ಕಳೆದು, ವಯಸ್ಕ ಜೀವನವನ್ನು ಸಮುದ್ರದಲ್ಲಿ ಕಳೆಯುವ ಸಾಲ್ಮನ್‌ಗಳು ಆಹಾರಕ್ಕಾಗಿ ಸಾವಿರಾರು ಕಿಲೋಮೀಟರುಗಳಷ್ಟು ದೂರವನ್ನು ಕ್ರಮಿಸುತ್ತವೆ! ಸಮುದ್ರದಲ್ಲಿ ಪ್ರಯಾಣಿಸುವಾಗ ಎಷ್ಟೇ ಪರಿಣತ ನಾವಿಕನಾಗಿದ್ದರೂ ದಿಕ್ಸೂಚಿ, ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳ ಸಹಾಯವನ್ನು ಪಡೆಯದೇ ಇರಲಾರ. ಆದರೆ ಸಾಲ್ಮನ್‌ಗಳು ಯಾವ ಉಪಕರಣಗಳ ಸಹಾಯವಿಲ್ಲದೆ ಸರಿಯಾದ ದಾರಿಯಲ್ಲಿ ಸಾವಿರಗಟ್ಟಲೆ ಕಿ.ಮೀ ದೂರವನ್ನು ಕ್ರಮಿಸುವುದು ಆಶ್ಚರ್ಯವೇ ಸರಿ!
    
16,000 ಮೊಟ್ಟೆಗಳು!
ಸಿಹಿನೀರಿನಲ್ಲಿ ಇಟ್ಟ ಸಾಲ್ಮನ್‌ ಮೊಟ್ಟೆಗಳು ಕೇಸರಿ ಬಣ್ಣದ್ದಾಗಿದ್ದು, ಬಟಾಣಿ ಕಾಳಿನ ಗಾತ್ರದ್ದಾಗಿರುತ್ತವೆ. ನೀರಿನ ಉಷ್ಣತೆಗೆ ಅನುಗುಣವಾಗಿ ಮೊಟ್ಟೆಗಳು ವಸಂತ ಮಾಸದಲ್ಲಿ ಒಡೆದು ಮರಿಗಳು ಹೊರಬರುತ್ತವೆ. ಹೆಣ್ಣು ಸಾಲ್ಮನ್‌ ಸುಮಾರು 16,000 ಮೊಟ್ಟೆಗಳನ್ನಿಟ್ಟರೂ, ಅದರಲ್ಲಿ ಶೇ.1ರಷ್ಟು ಮಾತ್ರ ಬದುಕಿ ಉಳಿಯುತ್ತವೆ. ಆಗಷ್ಟೇ ಮೊಟ್ಟೆಯೊಡೆದು ಹೊರಬಂದ ಮರಿಯನ್ನು ಅಲ್ವಿನ್ಸ್‌ಎನ್ನುತ್ತಾರೆ. ಅವಕ್ಕೆ 8 ರೆಕ್ಕೆಗಳಿರುತ್ತವೆ. 

Advertisement

ಇವು “ಪರಿಶುದ್ಧ’ ಜೀವಿಗಳು
ಇವು ನೀರಿನಲ್ಲಿ ಈಜುವಾಗ ನೀರಿನ ಹರಿವಿನ ವಿರುದ್ಧ ದಿಕ್ಕಿಗೆ ಈಜುತ್ತಿರುತ್ತವೆ. ಈ ಹಂತದಲ್ಲಿ ಬದುಕುಳಿಯುವ ಸಾಧ್ಯತೆ ನೀರಿನ ಉಷ್ಣಾಂಶವನ್ನು ಅವಲಂಬಿಸಿರುತ್ತದೆ. ಅಲ್ಲದೇ ಇವು ಕಲುಷಿತ ನೀರಿನಲ್ಲಿ ಬದುಕಿ ಉಳಿಯುವುದಿಲ್ಲ. ಹಾಗಾಗಿ ಸಿಹಿನೀರಿನಲ್ಲಿ ಸಾಲ್ಮನ್‌ ಮೀನುಗಳಿವೆ ಎಂದರೆ ನೀರು ಶುದ್ಧವಾಗಿದೆ ಎಂದರ್ಥ. 

ಹೆದರಿಸುವ ಚುಕ್ಕೆಗಳು!
ದೊಡ್ಡದಾಗಿ ಬೆಳೆದ ಮೇಲೆ ಇವುಗಳ ಮೈ ಮೇಲೆ ಅಡ್ಡಡ್ಡ ಪಟ್ಟೆಗಳು, ಶತ್ರುಗಳನ್ನು ಹೆದರಿಸಲು ಅಲ್ಲಲ್ಲಿ ಕಪ್ಪು ಚುಕ್ಕೆಗಳು ಮೂಡುತ್ತವೆ. ಈ ಹಂತವನ್ನು “ಪಾರ್‌’ಎನ್ನುತ್ತಾರೆ. ಈ ಹಂತದಲ್ಲಿ ಸಿಹಿನೀರಿನಲ್ಲಿ ತನ್ನ ಗಡಿಯನ್ನು ಸ್ಥಾಪಿಸಿಕೊಂಡು, ನೀರಿನಲ್ಲಿರುವ ಕೀಟಗಳನ್ನು ತಿಂದು ಬದುಕುತ್ತವೆ. ನೀರು ಹರಿವಿನ ಜೊತೆಯಲ್ಲೇ ಈಜುವುದನ್ನು ಕಲಿಯುತ್ತದೆ. ಮುಂದಿನ ಪಯಣ ಸಮುದ್ರದೆಡೆಗೆ. ಆದ್ದರಿಂದ ಇವುಗಳ ದೇಹದಲ್ಲಿ ಉಪ್ಪಿನ ನೀರಿಗೆ ಹೊಂದಿಕೊಳ್ಳುವಂಥ ಬದಲಾವಣೆಗಳಾಗುತ್ತದೆ.

ಅಟ್ಲಾಂಟಿಕ್‌ ಮಹಾಸಾಗರ
ಮತ್ತೆ ವಸಂತ ಮಾಸದ ಆರಂಭದಲ್ಲಿ ಸಾಲ್ಮನ್‌ಗಳು ನೀರು ಹರಿದುಹೋಗುವ ದಿಕ್ಕಿನಲ್ಲಿ ಈಜಲಾರಂಭಿಸುತ್ತವೆ. ಈ ಹಂತವನ್ನು ಸ್ಮಾಲ್ಟ್(Smolt) ಎನ್ನುತ್ತಾರೆ. ಐರಿಶ್‌ ನದಿಯನ್ನು ತೊರೆದು ಅಟ್ಲಾಂಟಿಕ್‌ ಸಾಗರದ ಕಡೆ ಸಾಗುತ್ತವೆ. ಅಧಿಕ ಆಹಾರ ಸಿಗುವ ನಾರ್ವೆ ಸಮುದ್ರವನ್ನು ದಾಟಿ ಅಟ್ಲಾಂಟಿಕ್‌ ಮಹಾಸಾಗರವನ್ನು ಬಂದು ಸೇರುತ್ತವೆ. ಇಲ್ಲಿ ಇವು ಚಿಕ್ಕ ಚಿಕ್ಕ ಕೆಪಿಲಿನ್‌ (capelin)ಹಾಗೂ ಮರಳು ಈಲ್‌ (sand eel)ಗಳನ್ನು ತಿಂದು ಬದುಕುತ್ತವೆ. ಸಮುದ್ರಕ್ಕೆ ಬಂದು ಒಂದು ವರ್ಷದ ನಂತರ ಇವು ವಯಸ್ಕ ಹಂತವನ್ನು ತಲುಪುತ್ತವೆ. ಆಗ 1-ರಿಂದ 4 ಕೆ.ಜಿ ತೂಗುತ್ತವೆ. 

ಮರಳಿ ಗೂಡಿಗೆ
ಒಂದು ವರ್ಷದ ನಂತರ ತಮ್ಮ ಹುಟ್ಟಿದ ಸ್ಥಳಕ್ಕೆ ಸಂತಾನೋತ್ಪತ್ತಿಗೆಂದು ಮರಳುತ್ತವೆ. ಅಚ್ಚರಿ ಎಂದರೆ ಇವು ಭೂಮಿಯ ಗುರುತ್ವಾಕರ್ಷಣೆ, ತಾವು ಹುಟ್ಟಿದ ನದಿಯ ರಾಸಾಯನಿಕದ ವಾಸನೆ ಹಾಗೂ ಸ್ವಜಾತಿಯ ಮೀನುಗಳು ಹೊರಸೂಸುವ ರಾಸಾಯನಿಕಗಳ ಜಾಡು ಹಿಡಿದು ಸಾವಿರಾರು ಕಿ.ಮೀ. ಈಜಿ ಜನ್ಮಸ್ಥಳಕ್ಕೆ ವಾಪಸಾಗುತ್ತವೆ. ಇದನ್ನು ಹೋಮಿಂಗ್‌ ಇನ್‌ಸ್ಟಿಂಕ್ಟ್ (homing instinct) ಎನ್ನುತ್ತಾರೆ. 

Advertisement

ಸಿಹಿನೀರಿಗೆ ಬಂದಮೇಲೆ ಆಹಾರ ತಿನ್ನುವುದನ್ನು ನಿಲ್ಲಿಸುತ್ತವೆ. ದೇಹದಲ್ಲಿ ಶೇಖರಣೆಯಾದ ಕೊಬ್ಬಿನಿಂದಲೇ ಜೀವನ ಸಾಗಿಸುತ್ತವೆ. ಹೆಣ್ಣು ಸಾಲ್ಮನ್‌ 10-30 ಸೆ.ಮೀ. ಆಳದ ಗುಂಡಿ ತೆಗೆದು ಅದರಲ್ಲಿ 15-16 ಸಾವಿರ ಮೊಟ್ಟೆಗಳನ್ನಿಡುತ್ತದೆ. ಗಂಡು ಮೀನುಗಳು ಮೊಟ್ಟೆಗಳನ್ನು ಫ‌ಲವತ್ತಾಗಿಸುತ್ತವೆ. 

ಸಾವಿರಾರು ಮೈಲಿ ಈಜಿದ್ದರಿಂದ ಇವುಗಳು ನಿತ್ರಾಣವಾಗುತ್ತವೆ. ಆ ಹಂತದಲ್ಲಿ ಇವು ರೋಗಗಳಿಗೆ ಹಾಗೂ ಬೇರೆ ಪ್ರಾಣಿಗಳಿಗೆ ಬಲಿಯಾಗುತ್ತವೆ. ಆದರೆ ಕೆಲವೊಂದು ಸಾಲ್ಮನ್‌ಗಳು ಮೊಟ್ಟೆ ಇಟ್ಟ ನಂತರವೂ ಮತ್ತೆ ಸಮುದ್ರಕ್ಕೆ ಪ್ರಯಾಣಿಸಿ, ಮತ್ತೆ ವಾಪಸ್‌ ಬಂದು ಮೊಟ್ಟೆ ಇಟ್ಟ ದಾಖಲೆಯೂ ಇದೆ. 

-ಪ್ರಕಾಶ್‌ ಕೆ. ನಾಡಿಗ್‌, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next