ಪ್ರಯಾಗ್‌ರಾಜ್: ಯುಪಿಎ ಅಧಿಕಾರವಧಿಯಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಸೋನಿಯಾ ಗಾಂಧಿ ಅವರ ಸಂಬಂಧಿಯ ಆಸ್ತಿಯನ್ನೇ ಕಬಳಿಸಲು ಮಾಫಿಯಾ ಡಾನ್ ಅತೀಕ್ ಅಹ್ಮದ್ ಯತ್ನಿಸಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.
ಸೋನಿಯಾ ಗಾಂಧಿ ಅವರ ಮಾವ ಫಿರೋಜ್ ಗಾಂಧಿ ಕುಟುಂಬದ ವೀರಾ ಗಾಂಧಿ ಪ್ರಯಾಗ್‌ರಾಜ್‌ನ ನಿವಾಸಿ. ನಗರದ ಐಷಾರಾಮಿ ಸಿವಿಲ್ ಲೈನ್ಸ್ ಪ್ರದೇಶದ ಎಂ.ಜಿ.ಮಾರ್ಗ್‌ನಲ್ಲಿರುವ ಪ್ಯಾಲೇಸ್ ಥಿಯೇಟರ್‌ನ ಮಾಲೀಕರಾಗಿದ್ದರು. ಇದು ಅವರಿಗೆ ಕುಟುಂಬದ ಪಾಲಿನಿಂದ ಬಂದ ಆಸ್ತಿಯಾಗಿತ್ತು.
2007ರಲ್ಲಿ ಈ ಆಸ್ತಿಯ ಮೇಲೆ ಅತೀಕ್ ಕಣ್ಣಿಟ್ಟಿದ್ದ. ತನ್ನ ಸಹಚರರಿಂದ ಈ ಆಸ್ತಿಯನ್ನು ವಶಪಡಿಸಿ ಕೊಂಡು, ಥಿಯೇಟರ್‌ಗೆ ಬೀಗ ಜಡಿದಿದ್ದ.
ಈ ಸಂಬಂಧ ವೀರಾ ಗಾಂಧಿ ಸ್ಥಳೀಯ ಪೊಲೀಸರು ಮತ್ತು ಆಡಳಿತದ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ. ಅಂತಿಮವಾಗಿ ಅವರು ಸೋನಿಯಾ ಗಾಂಧಿ ಅವರಿಗೆ ಈ ವಿಚಾರವನ್ನು ಮುಟ್ಟಿಸಿದ್ದರು. ಈ ವೇಳೆ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದರು. ನಂತರ ಸ್ಥಳೀಯ ಜಿಲ್ಲಾಡಳಿತದ ಮೂಲಕ ಪುನಃ ಈ ಆಸ್ತಿಯು ವೀರಾ ಗಾಂಧಿ ಅವರ ಕೈಸೇರಿತು. ಕೆಲ ವರ್ಷಗಳ ನಂತರ ವೀರಾ ಗಾಂಧಿ ಅವರು ಪ್ರಯಾಗ್‌ರಾಜ್‌ನಲ್ಲಿರುವ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ.
ಗುಡ್ಡು ಗೆ ಹುಡುಕಾಟ: ಅತೀಕ್ ಸಹಚರ ಗುಡ್ಡು ಮುಸ್ಲಿಂ ಪತ್ತೆಗಾಗಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಒಡಿಶಾದಲ್ಲಿ ಬೀಡುಬಿಟ್ಟಿದೆ. ಈ ಸಂಬಂಧ ಬಾರ್ಗಾಡ್‌ನಲ್ಲಿ ವ್ಯಕ್ತಿಯೊಬ್ಬನನ್ನು 2 ದಿನಗಳ ಹಿಂದೆ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಅಸದ್ ಕಾಲಿಯಾ ಬಂಧನ
ಅತೀಕ್‌ನ ಬಲಗೈ ಬಂಟ ಅಸದ್ ಕಾಲಿಯಾನನ್ನು ಪ್ರಯಾಗ್‌ರಾಜ್‌ನಲ್ಲಿ ಉತ್ತರ ಪ್ರದೇಶ ಪೊಲೀ ಸರು ಬಂಧಿಸಿದ್ದು, ಆತನಿಂದ ದೇಸಿ ಬಂದೂಕು ಮತ್ತು ಸಜೀವ ಗುಂಡುಗಳನ್ನು ವಶಪಡಿಸಿ ಕೊಂಡಿದ್ದಾರೆ. ಈತ ಅತೀಕ್‌ನ ಎಲ್ಲ ರಿಯಲ್ ಎಸ್ಟೇಟ್ ದಂಧೆಗಳನ್ನು ನೋಡಿಕೊಳ್ಳುತ್ತಿದ್ದ. ಈತನ ತಲೆಗೆ ಉತ್ತರ ಪ್ರದೇಶ ಪೊಲೀಸರು 50,000 ರೂ. ಬಹುಮಾನ ಘೋಷಿಸಿದ್ದರು.