ಗಜೇಂದ್ರಗಡ: ನೇಪಾಳದಲ್ಲಿ ನಡೆದ ಏಳನೇ ಇಂಡೊ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ದಿಂಡೂರ ಗ್ರಾಮದ ಯುವಕ ಪ್ರಶಾಂತ್ ಬಿದ್ನಾಳ ಚಿನ್ನದ ಪದಕಕ್ಕೆ ಮುತ್ತಿಟ್ಟು, ಭಾರತದ ಬಾವುಟ ಹಾರಿಸಿದ್ದಾರೆ.
ನೇಪಾಳದ ಪೊಖ್ರಾ ನಗರದ ರಂಗಶಾಲಾ ಕ್ರೀಡಾಂಗಣದಲ್ಲಿ ನಡೆದ ಇಂಡೊ-ನೇಪಾಳ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 25 ವರ್ಷದೊಳಗಿನ
ವಿಭಾಗದ ತ್ರಿವಿಧ ಜಿಗಿತದಲ್ಲಿ 13.02 ಮೀ. ಜಿಗಿದು ದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಾಂತ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಗ್ರಾಮೀಣ ಪ್ರತಿಭೆ: ಬಾಲ್ಯದಿಂದಲೇ ಕ್ರೀಡೆಯಲ್ಲಿ ಅದಮ್ಯ ಆಸಕ್ತಿ. ಬಿಡದೇ ಸಾಧಿಸುವ ಛಲ. ಬಡತನದ ನಡುವೆಯೂ ಆಸಕ್ತಿಗೆ ಪೋಷಕರು ನೀರೆರೆದು ಬೆಳೆಸಿ, ಹತ್ತು ಹಲವಾರು ಸವಾಲುಗಳ ಮಧ್ಯೆಯೂ ನಿರಂತರ ಶ್ರಮದ ಫಲವಾಗಿ ಇಂದು ಇಡೀ ದೇಶವೇ ಮೆಚ್ಚುವಂತಹ ಸಾಧನೆ ಮಾಡಿ, ಗ್ರಾಮೀಣ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಪ್ರಶಾಂತ ಬಿದ್ನಾಳ ಅವರ ತಂದೆ ನಾಗಪ್ಪ ಅವರು ಕೃಷಿ ವೃತ್ತಿ ಮಾಡಿಕೊಂಡಿದ್ದಾರೆ.
ಪ್ರೋತ್ಸಾಹ ಬೇಕು: ಬಡತನದ ಮಧ್ಯೆಯೇ ಸಾಧನೆಯ ಶಿಖರ ಏರಲು ಹಂಬಲಿಸುತ್ತಿರುವ ಪ್ರಶಾಂತ್ ಮುಂದಿನ ಕನಸು ಏಷ್ಯನ್ ಗೇಮ್ಸ್‌ನಲ್ಲಿ ರಾಷ್ಟ್ರ ಪ್ರತಿನಿ
ಧಿಸುವುದಾಗಿದೆ. ಆದರೆ ಈ ಪ್ರತಿಭೆಗೆ ಆರ್ಥಿಕ ಹೊರೆ ಜತೆಗೆ ಸಮರ್ಪಕ ತರಬೇತಿ ಕೊರತೆ ಕಾಡುತ್ತಿದೆ. ಸೂಕ್ತ ಸೌಲಭ್ಯಗಳು ದೊರೆತಲ್ಲಿ ತಾಲೂಕಿನ ಕೀರ್ತಿ, ದೇಶದ ವಿಜಯ ಪತಾಕೆ ಹಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಅಥ್ಲೆಟಿಕ್‌ನಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕೆಂದು ಕೊಂಡಿದ್ದೇನೆ. ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಅವಕಾಶ ಪಡೆಯಲು ನನಗೆ ಸೂಕ್ತ ತರಬೇತಿ ಅವಶ್ಯಕತೆ ಇದೆ. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದೇನೆ. ದೇಶವನ್ನು ಪ್ರತಿನಿಧಿಸುವುದೇ ನನ್ನ ಗುರಿ ಹಾಗೂ ಕನಸಾಗಿದೆ.
ಪ್ರಶಾಂತ್ ಬಿದ್ನಾಳ, ಚಿನ್ನದ ಪದಕ ವಿಜೇತ ಕ್ರೀಡಾಪಟು