Advertisement

ಮೃತ ಯೋಧರ ಕುಟುಂಬದ ನೆರವಿಗೆ ಧಾವಿಸಿದ ಕ್ರೀಡಾಪಟುಗಳು

12:30 AM Feb 17, 2019 | Team Udayavani |

ಹೊಸದಿಲ್ಲಿ: ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರು ಹುತಾತ್ಮರಾದ ನಂತರ, ಇಡೀ ದೇಶದ ಜನ ಯೋಧರ ಕುಟುಂಬಗಳ ಬೆನ್ನಿಗೆ ನಿಂತಿದ್ದಾರೆ. ಅವರ ಕುಟುಂಬವನ್ನು ಸಾಕುವ ಹೊಣೆ ತಮ್ಮದು ಎಂಬ ಅಭಿಮಾನ ತೋರಿದ್ದಾರೆ. ಇಂತಹ ನೋವಿನ ಸಂದರ್ಭದಲ್ಲಿ ದೇಶದ ಕ್ರೀಡಾಪಟುಗಳೂ ಯೋಧರ ಕುಟುಂಬಗಳಿಗೆ ತಮ್ಮದೇ ರೀತಿಯಲ್ಲಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. 

Advertisement

ಯೋಧರ ಮಕ್ಕಳಿಗೆ ಸೆಹವಾಗ್‌ರಿಂದ ಉಚಿತ ಶಿಕ್ಷಣ
ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಮಹತ್ವದ ಘೋಷಣೆ ಮಾಡಿದ್ದಾರೆ. ಎಲ್ಲ ಮೃತ ಯೋಧರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದಾಗಿ ಅವರು ಹೇಳಿದ್ದಾರೆ. ದಿಲ್ಲಿಯ ಜಜ್ಜರ್‌ನಲ್ಲಿ ಸೆಹವಾಗ್‌ ಮಾಲಕತ್ವದ ಅಂತಾರಾಷ್ಟ್ರೀಯ ಶಾಲೆಯಿದೆ. ಈ ಶಾಲೆಯಲ್ಲಿ ಪುಲ್ವಾಮದಲ್ಲಿ ಮೃತಪಟ್ಟ ಮಕ್ಕಳು ಉಚಿತ ಶಿಕ್ಷಣ ಪಡೆಯಲು ಸಾಧ್ಯವಿದೆ.

ತಿಂಗಳ ವೇತನ ನೀಡಿದ ವಿಜೇಂದರ್‌ 
ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಭಾರತದ ವಿಶ್ವ ವಿಖ್ಯಾತ ಬಾಕ್ಸರ್‌ ವಿಜೇಂದರ್‌ ಸಿಂಗ್‌,  ತಮ್ಮ ಒಂದು ತಿಂಗಳ ವೇತನವನ್ನು ಯೋಧರ ಕುಟುಂಬಕ್ಕೆ ಅರ್ಪಿಸಿದ್ದಾರೆ. ಎಲ್ಲರೂ ಯೋಧರ ನೆರವಿಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.

ಪ್ರಶಸ್ತಿ ಪ್ರಧಾನ ಮುಂದೂಡಿದ ವಿರಾಟ್‌ ಕೊಹ್ಲಿ
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಫೌಂಡೇಶನ್‌ ಕಡೆಯಿಂದ ಪ್ರತಿವರ್ಷ, ದೇಶದ ಖ್ಯಾತ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡುತ್ತಾರೆ. ರವಿವಾರ ರಾತ್ರಿ ನಡೆಯಬೇಕಿದ್ದ ಈ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮೃತ ಯೋಧರ ಸ್ಮರಣಾರ್ಥ ಕೊಹ್ಲಿ ಮುಂದೂಡಿದ್ದಾರೆ.

ಯೋಧರ ನೆನಪಲ್ಲಿ ಮುಂಬೈ ಮ್ಯಾರಥಾನ್‌
ಮುಂಬಯಿಯಲ್ಲಿ ರವಿವಾರ ತ್ರಿಧಾಟು ನವಿ ಮುಂಬೈ ಹಾಫ್ ಮ್ಯಾರಥಾನ್‌ ನಡೆಯಲಿದೆ. ಮ್ಯಾರಥಾನ್‌ ಪದಕಗಳ ಅನಾವರಣದಲ್ಲಿ ಭಾಗವಹಿಸಿದ್ದ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಯೋಧರ ನೆನಪಲ್ಲಿ ಓಡಿ ಎಂದು ಓಟಗಾರರಿಗೆ ಕರೆ ನೀಡಿದ್ದಾರೆ. ಆದ್ದರಿಂದ ರವಿವಾರದ ಹಾಫ್ ಮ್ಯಾರಥಾನ್‌, ಯೋಧರ ಸ್ಮರಣಾರ್ಥ ಓಟವಾಗಿ ಮಾರ್ಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next