ನವದೆಹಲಿ: ಭಾರತದ ಕ್ರೀಡಾರಂಗದಲ್ಲಿ ಮತ್ತೂಂದು ದುರಂತ ಸಂಭವಿಸಿದೆ. 18 ವರ್ಷದ ಅಂತಾರಾಷ್ಟ್ರೀಯ ಯುವ ಅಥ್ಲೀಟ್, ಉತ್ತರಪ್ರದೇಶದ ಅಲಿಗಢಕ್ಕೆ ಸೇರಿದ ಪಲಿಂದರ್ ಚೌಧರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಮಂಗಳವಾರ ಸಂಜೆ ಫ್ಯಾನ್‌ಗೆ ನೇಣು ಬಿಗಿದುಕೊಂಡ ಪಲಿಂದರ್‌ರನ್ನು ಆಸ್ಪತ್ರೆಗೆ ಸಾಗಿಸಿದರೂ, ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ದೆಹಲಿಯ ಸಫªರ್‌ಜಂಗ್ ಆಸ್ಪತ್ರೆಗೆ ಸಾಗಿಸುವಾಗಲೇ ಅಥ್ಲೀಟ್ ಮೆದುಳು ನಿಷ್ಕ್ರಿಯವಾಗಿತ್ತು. ಆದ್ದರಿಂದ ಬದುಕಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ಅಚ್ಚರಿಯೆಂದರೆ ಮಂಗಳವಾರ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರೂ ಎಲ್ಲಿಯೂ ನೋವನ್ನಾಗಲೀ, ಇನ್ಯಾವುದೇ ರೀತಿಯ ಭಾವನೆಗಳನ್ನಾಗಲೀ ಪಲಿಂದರ್ ತೋರ್ಪಡಿಸಿಕೊಂಡಿರಲಿಲ್ಲ. ಸಂಜೆ ಮಾತ್ರ ದಿಢೀರೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆಗಿದ್ದೇನು?: ಘಟನೆಯ ಬಗ್ಗೆ ಸಾಯ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿ, ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಮಗೆ ಗೊತ್ತಿಲ್ಲ. ಮೃತನ ಕೊಠಡಿಯಲ್ಲಿ ಯಾವುದೇ ಪತ್ರಗಳೂ ದೊರೆತಿಲ್ಲ ಎಂದು ತಿಳಿಸಿದ್ದಾರೆ. ಸಾಯ್‌ನ ಪ್ರಧಾನ ಕಾರ್ಯದರ್ಶಿ ನೀಲಂ ಕಪೂರ್ ಪ್ರತಿಕ್ರಿಯಿಸಿ, ಘಟನೆ ನಮ್ಮ ಸಂಸ್ಥೆ ಆವರಣದಲ್ಲಿ ನಡೆದಿದೆ. ಇನ್ನೊಂದು ವಾರದೊಳಗೆ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲಾಗುವುದು ಎಂದಿದ್ದಾರೆ.
ಮಂಗಳವಾರ ಬೆಳಗ್ಗೆ ಪಲಿಂದರ್ ತಮ್ಮ ತಂದೆ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆ ವೇಳೆ ಹಣಕಾಸಿಗೆ ಸಂಬಂಧಿಸಿದಂತೆ ಏನೋ ವಾಗ್ವಾದಗಳಾಗಿವೆ. ಇದಾದ ನಂತರ ಸಂಜೆಯಷ್ಟೊತ್ತಿಗೆ ಪಲಿಂದರ್‌ರನ್ನು ಭೇಟಿ ಮಾಡಲು ಸಂಜೆ ಸಹೋದರಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಸಹೋದರಿಯೆದುರಿಗೇ ಆತ್ಮಹತ್ಯೆ ಮುಂದಾದರು. ತಕ್ಷಣ ಕೂಗಿಕೊಂಡು ಹೊರಬಂದ ಸಹೋದರಿ, ಘಟನೆಯ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಸಾಯ್ ಸಿಬ್ಬಂದಿ ಬಂದು ಪಲಿಂದರ್‌ರನ್ನು ಫ್ಯಾನ್‌ಗೆ ಬಿಗಿದುಕೊಂಡಿದ್ದ ನೇಣಿನಿಂದ ಕೆಳಗಿಳಿಸಿದರು. ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೆದುಳು ನಿಷ್ಕ್ರಿಯವಾಗಿತ್ತು.
ಪಲಿಂದರ್ ಸಾಧನೆ: ಪಲಿಂದರ್ 2016ರಿಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ದೆಹಲಿ ಶಾಖೆಯಲ್ಲಿ ತರಬೇತಿ ನಡೆಸುತ್ತಿದ್ದರು. ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿರುವ ಸಾಯ್ ನಿವಾಸದ 69ನೇ ಸಂಖ್ಯೆಯ ಕೊಠಡಿಯಲ್ಲಿದ್ದರು. 100 ಮೀ., 200 ಮೀ. ಓಟದಲ್ಲಿ ಅಭ್ಯಾಸ ನಡೆಸುತ್ತಿದ್ದರು. 2017ರಲ್ಲಿ ಏಷ್ಯಾ ಯುವ ಕೂಟದಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದರು. ಜುಲೈನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಪಾಲ್ಗೊಂಡಿದ್ದರು.
ಸಾಯ್‌ನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳು
ಸಾಯ್ ವ್ಯಾಪ್ತಿಯಲ್ಲಿ ಕಳೆದ ಕೆಲ ವರ್ಷಗಳಿಂದ ಪದೇ ಪದೇ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಮೊನ್ನೆ ಅಕ್ಟೋಬರ್‌ನಲ್ಲಿ ಕರ್ನಾಟಕ ಸಾಯ್‌ನಲ್ಲಿ ಕಬಡ್ಡಿ ತರಬೇತುದಾರರಾಗಿದ್ದ ರುದ್ರಪ್ಪ ಹೊಸಮನಿ, ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದರು.
2015ರಲ್ಲಿ ಕೇರಳದ ಅಲಪ್ಪುಳದಲ್ಲಿ ಅನಾಹುತಕಾರಿ ಪ್ರಕರಣವೊಂದು ಸಂಭವಿಸಿತ್ತು. ಇಲ್ಲಿನ ಸಾಯ್ ಆವರಣದಲ್ಲಿ ನಾಲ್ವರು ಯುವತಿಯರು ಸಾಯ್‌ನ ತರಬೇತುದಾರರೊಬ್ಬರು ಕಿರುಕುಳ ನೀಡುತ್ತಿದ್ದಾರೆಂಬ ಬೇಸರದಲ್ಲಿ ವಿಷಪೂರಿತ ಹಣ್ಣು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದರಲ್ಲಿ ಒಬ್ಬ ಯುವತಿ ತೀರಿಕೊಂಡಿದ್ದರೆ, ಉಳಿದ ಮೂವರು ಬಚಾವಾಗಿದ್ದರು. ಪ್ರಕರಣ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.