ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ “ಅತಿರುದ್ರ ಮಹಾಯಾಗ”ದ ಪ್ರಯುಕ್ತ ಜ. 29ರ ಬೆಳಗ್ಗೆ ಶ್ರೀ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆಯ ಅಂಗವಾಗಿ ಗುರುವಾರ ದೇಗುಲದ ಸಭಾಂಗಣದಲ್ಲಿ ಪೂರ್ವ ಸಿದ್ಧತೆ ಸಭೆ ನಡೆಸಲಾಯಿತು.
ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಅವರು, ಯಾಗದ ಪೂರ್ವ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ನೀಡಿ, ಸಮಾಜದ ಸರ್ವರೂ ಒಗ್ಗಟ್ಟಿನಿಂದ ಈ ಮಹಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸೂಚಿಸಿದರು.
ದೇಗುಲ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಕಾರ್ಯಕ್ರಮದ ಸಂಘಟನೆ ಮತ್ತು ಅತೀ ಅಗತ್ಯ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಸ್ಥಾನಿಕ ಬ್ರಾಹ್ಮಣ ಸಂಘಟನೆ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯಕರ ಕೋಟ್ಯಾನ್, ನಗರಸಭೆ ಸದಸ್ಯೆ ವಿಜಯಲಕ್ಷ್ಮೀ, ಹಿಂಜಾವೇ ಪ್ರಾಂತ ಸಹಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ದೇಗುಲದ ಮೊಕ್ತೇಸರರಾದ ಶುಭಕರ ಸಾಮಂತ್, ದಿನೇಶ್ ಪ್ರಭು, ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಸಂಜಯ್ ಪ್ರಭು ಅಗತ್ಯ ಸಲಹೆಗಳನ್ನು ನೀಡಿದರು.
35ಕ್ಕೂ ಹೆಚ್ಚು ಸಮುದಾಯದ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವುದಾಗಿ ತಿಳಿಸಿದರು. ದೇಗುಲದಲ್ಲಿ ಫೆ. 22ರಿಂದ ಮಾ. 5ರ ವರೆಗೆ ಸಂಪನ್ನಗೊಳ್ಳಲಿರುವ ಅತಿರುದ್ರ ಮಹಾಯಾಗಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ.