Advertisement

ಅತನೂರ ಗ್ರಾಮದಲ್ಲಿ ಜಲಕ್ಷಾಮ-ನಿಲ್ಲದ ಜನರ ಪರದಾಟ

09:56 AM Jul 25, 2019 | Team Udayavani |

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಬೇಸಿಗೆ ಕಳೆದು ಮಳೆಗಾಲ ಶುರುವಾಗಿ ಎರಡು ತಿಂಗಳವಾದರೂ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ. ಮಳೆ ಕೊರತೆಯಿಂದಾಗಿ ತಾಲೂಕಿನ ಅತನೂರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ಇಲ್ಲದಂತಾಗಿದೆ.

Advertisement

ಅತನೂರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಜನರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿರುವ ಬಹುತೇಕ ಜಲ ಮೂಲಗಳಲ್ಲಿ ಅಂತರ್ಜಲ ಕೊರತೆಯಿಂದಾಗಿ ನೀರು ಬತ್ತಿ ಹೋಗಿದ್ದರಿಂದ ಈಗಲೂ ಮೈಲುಗಟ್ಟಲೇ ಅಲೆದಾಡಿ ನೀರು ಹೊತ್ತು ತರಬೇಕಾದ ಸಂದರ್ಭ ಎದುರಾಗಿದೆ. ಅದರಲ್ಲೂ ಎತ್ತಿನ ಬಂಡಿ ಮತ್ತು ಪಿಕ್‌ಅಪ್‌ಗ್ಳನ್ನು ಬಳಸಿ ಜನ ನೀರು ತರುತ್ತಿದ್ದಾರೆ. ಅನುಕೂಲಸ್ಥರು ವಾಹನ, ಎತ್ತಿನ ಬಂಡಿ ಬಳಸಿ ನೀರು ತರುತ್ತಾರೆ. ಆದರೆ ಅನುಕೂಲವಿಲ್ಲದವರು, ನಿರ್ಗತಿಕರು, ವೃದ್ಧರು ಎಲ್ಲಿಂದ ನೀರು ತರಬೇಕು?.

ನೀರಿಗಾಗಿ ಕಾದು ಕುಳಿತ ಮಹಿಳೆ: ಅತನೂರ ಗ್ರಾಮದಲ್ಲಿ ಸದ್ಯ ನೀರಿನ ಸಮಸ್ಯೆ ಕಾಡುತ್ತಿದ್ದು, ನಲ್ಲಿಗಳು, ಕೊಳವೆ ಬಾವಿಗಳ ಬಳಿ ನೀರಿಗಾಗಿ ನಿತ್ಯ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಅತನೂರ ಗ್ರಾಮದಲ್ಲಿ 15 ಕೊಳವೆ ಬಾವಿಗಳು, 5 ತೆರೆದ ಬಾವಿಗಳಿವೆ. ಎಲ್ಲದರಲ್ಲೂ ನೀರಿನ ಪ್ರಮಾಣ ಕ್ಷೀಣವಾಗಿದೆ. ಅಲ್ಲದೆ ಗ್ರಾಮದ ಸುತ್ತಲೂ ಸಹ ಯಾವ ಖಾಸಗಿಯವರ ಹೊಲ ಗದ್ದೆಗಳಲ್ಲೂ ನೀರಿನ ಮೂಲಗಳು ಇಲ್ಲ. ಹೀಗಾಗಿ ಗ್ರಾಮದಿಂದ ಐದಾರು ಕಿ.ಮೀ. ಅಲೇದಾಡಿ ನೀರು ಹೊತ್ತು ತರಬೇಕಾಗಿದೆ.

8 ದಿನಕ್ಕೊಮ್ಮೆ ಹಳ್ಳದ ನೀರು ಪೂರೈಕೆ: ಸದ್ಯ ಗ್ರಾಮದಲ್ಲಿ 8 ದಿನಕ್ಕೊಮ್ಮೆ ಹಳ್ಳದ ನೀರನ್ನು ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ನಂತರ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಅತನೂರ ಗ್ರಾಮದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಇನ್ನಾದರೂ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸಂಬಂಧಪಟ್ಟವರು ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ಅತನೂರ ಗ್ರಾಪಂ ವ್ಯಾಪ್ತಿಯ ಭೋಗನಳ್ಳಿಯಲ್ಲಿ ಖಾಸಗಿಯವರಿಂದ ನೀರು ಖರೀದಿ ಮಾಡಲಾಗಿದ್ದು, ಅಲ್ಲಿ ನೀರಿನ ಅಷ್ಟೊಂದು ಸಮಸ್ಯೆ ಇಲ್ಲ. ಅತನೂರ ಗ್ರಾಮದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಗ್ರಾಮದ ಸುತ್ತಮುತ್ತ ನೀರು ಖರೀದಿ ಮಾಡಲು ಅಂತರ್ಜಲ ಇಲ್ಲದಂತಾಗಿದೆ.
ಚಿದಾನಂದ ಅಲೇಗಾಂವ, ಪಿಡಿಒ

Advertisement

ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಅಂತರ್ಜಲ ಮಟ್ಟ ಕುಸಿದು ಸಾಕಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ ಸದ್ಯ 8 ದಿನಕ್ಕೊಮ್ಮೆ ಹಳ್ಳದ ನೀರನ್ನು ಓವರ್‌ ಹೆಡ್‌ ಟ್ಯಾಂಕ್‌ಗೆ ಏರಿಸಿ ಸರಬರಾಜು ಮಾಡಲಾಗುತ್ತಿದೆ.
ಕಲ್ಯಾಣಿ ದೇವಣಗಾಂವ ಅತನೂರ ಗ್ರಾಪಂ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next