ಬೆಂಗಳೂರು: ಕೊಲ್ಲಾಪುರ ಬ್ರ್ಯಾಂಡ್‌ನಂತೆಯೇ ರಾಜ್ಯದಲ್ಲಿ ಅಥಣಿ ಬ್ರ್ಯಾಂಡ್‌ನಲ್ಲಿ ಚರ್ಮದ ಉತ್ಪನ್ನಗಳು ಬರಲಿವೆ ಎಂದು ಡಾ| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ| ಎನ್.ಲಿಂಗಣ್ಣ ತಿಳಿಸಿದ್ದಾರೆ. ರಾಜ್ಯದ ಚರ್ಮ ಕರಕುಶಲಕರ್ಮಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿರುವ ಚರ್ಮ ಕುಶಲಕರ್ಮಿಗಳು ಕೊಲ್ಲಾಪುರ ಚಪ್ಪಲಿ ಉತ್ಪನ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೊಲ್ಲಾಪುರವು ಪ್ರಾದೇಶಿಕವಾಗಿ ಮಹಾರಾಷ್ಟ್ರಕ್ಕೆ ಸೇರಲಿದೆ. ಭೌಗೋಳಿಕ ಸೂಚಕ (ಜಿಐ) ಟ್ಯಾಗ್ ಆ ರಾಜ್ಯಕ್ಕೆ ದೊರೆಯಲಿದೆ. ಪಕ್ಕದ ರಾಜ್ಯದ ಬ್ರ್ಯಾಂಡ್ ಹೊಂದಿರುವ ಸಂಸ್ಥೆಗೆ ನಮ್ಮ ರಾಜ್ಯದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಬದಲಾಗಿ ಕರ್ನಾಟಕದ್ದೇ ಆದ ಬ್ರ್ಯಾಂಡ್ ಅನ್ನು ಬೆಳೆಸಬೇಕೆಂಬ ಉದ್ದೇಶದಿಂದ “ಅಥಣಿ’ ಬ್ರ್ಯಾಂಡ್ ಆರಂಭಿಸಲಾಗಿದೆ ಎಂದು ಲಿಂಗಣ್ಣ ತಿಳಿಸಿದರು.
ಉತ್ತಮ ಗುಣಮಟ್ಟ:
ಕೊಲ್ಲಾಪುರದ ಚಪ್ಪಲಿಗಳಿಗಿಂತ ಗುಣಮಟ್ಟದಲ್ಲಿ ಮತ್ತು ಶೈಲಿಯಲ್ಲಿ ಹೊಸ ಕಲ್ಪನೆ ತರಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನೂತನ ಶೈಲಿಯಲ್ಲಿ ಚಪ್ಪಲಿಗಳನ್ನು ತಯಾರಿಸಲಾಗುತ್ತಿದೆ. ದೇಶಾದ್ಯಂತ ಕೊಲ್ಲಾಪುರ ಚಪ್ಪಲಿಗಳು ಪ್ರಸಿದ್ಧಿ ಹೊಂದಿದ್ದು, ಅಥಣಿ ಬ್ರ್ಯಾಂಡ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದುವಂತೆ ಮಾಡಲು ನಿಗಮ ನಿರ್ಧರಿಸಿದೆ ಎಂದರು.
ಇದಕ್ಕೆ ಶುಕ್ರವಾರದಿಂದ ಬೆಂಗಳೂರಿನ ಅರಮನೆ ಮೈದಾನ ದಲ್ಲಿ ಆರಂಭವಾಗುವ ಚರ್ಮ ಕುಶಲಕರ್ಮಿಗಳ ಸಮಾವೇಶದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣ ಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ನಿಗಮದ ಉತ್ಪನ್ನಗಳನ್ನು ರಾಜ್ಯ ಸರಕಾರದ ಎಲ್ಲ ಇಲಾಖೆಗಳು ಖರೀದಿಸಲು 4ಜಿ ರಿಯಾಯತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಮೇಳದಲ್ಲಿ ಘೋಷಣೆ ಮಾಡಲಿದ್ದಾರೆ. –
ಪ್ರೊ| ಎನ್. ಲಿಂಗಣ್ಣ, ಅಧ್ಯಕ್ಷರು, ಡಾ| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ