Advertisement

ಅಟಲ್‌ ಟಿಂಕರಿಂಗ್‌ ಲ್ಯಾಬ್‌:ಯುವ ವಿಜ್ಞಾನಿಗಳ ತಯಾರಿಗೆ ಯೋಜನೆ 

02:59 PM Jul 04, 2018 | |

ಬಜಪೆ: ಕೇಂದ್ರ ಸರಕಾರದ ‘ನೀತಿ ಆಯೋಗ’ ಪ್ರಾಯೋಜಿತ ‘ಅಟಲ್‌ ಇನ್ನೋವೇಷನ್‌ ಮಿಷನ್‌’ ಅಡಿಯಲ್ಲಿ ‘ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಆ. 30ರೊಳಗೆ ಬಜಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಸುಮಾರು 20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಈ ಲ್ಯಾಬ್‌ ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕುರಿತು ಆಸಕ್ತಿ ಬೆಳೆಸಿ, ಪೋಷಿಸಿ, ಮಕ್ಕಳಲ್ಲಿ ಸೃಜನಾತ್ಮಕ ವಿಜ್ಞಾನ ಬೆಳವಣಿಗೆ ಮಾಡಿ ಯುವ ವಿಜ್ಞಾನಿಗಳ ತಯಾರಿ ಕೇಂದ್ರ ಸರಕಾರದ ಈ ಯೋಜನೆಯ ಉದ್ದೇಶ. ಸುಸಜ್ಜಿತ ಪ್ರಯೋಗಾಲಯ ಸ್ಥಾಪಿಸಲು ಬೇಕಾದ ವಿಜ್ಞಾನ ಉಪಕರಣಗಳಿಗೆ ಹಾಗೂ ನಿರ್ವಹಣೆಗೆ ಈ ಧನ ಸಹಾಯ ಕೇಂದ್ರ ಸರಕಾರ ನೀಡಲಿದೆ.

Advertisement

ದೇಶಾದ್ಯಂತ 25,000ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಅರ್ಜಿಗಳು ಸಲ್ಲಿಸಿದ್ದವು. ಇದರಲ್ಲಿ 1,500 ವಿದ್ಯಾಸಂಸ್ಥೆಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯಿಂದ 25 ಶಿಕ್ಷಣ ಸಂಸ್ಥೆಗಳು ಆಯ್ಕೆ ಮಾಡಲಾಗಿತ್ತು. 7 ಶೈಕ್ಷಣಿಕ ವಲಯದಲ್ಲಿ ಮಂಗಳೂರು ಉತ್ತರ ವಲಯದಿಂದ ನಾಲ್ಕು ಶಿಕ್ಷಣ ಸಂಸ್ಥೆಗಳಾದ ಬಜಪೆಯ ಹೋಲಿ ಫ್ಯಾಮಿಲಿ ಪ್ರೌಢಶಾಲೆ, ಎಸ್‌ಡಿಪಿಟಿ ಪ್ರೌಢಶಾಲೆ ಕಟೀಲು, ಮೂಲ್ಕಿಯ ವ್ಯಾಸ ಮಹರ್ಷಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುರತ್ಕಲ್‌ ವಿದ್ಯಾಧಾಯಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಯ್ಕೆಯಾಗಿದೆ.

ಆಯ್ಕೆ ಹೇಗೆ?
ಕಳೆದ 5 ವರ್ಷಗಳ ಶಾಲೆಯ ವಿಜ್ಞಾನ ಸಾಧನೆ, ವಿಜ್ಞಾನ ಗೋಷ್ಠಿ, ವಸ್ತು ಪದರ್ಶನ, ರಸಪ್ರಶ್ನೆ, ವಿಜ್ಞಾನ ಜಾಗೃತಿ ಕಾರ್ಯಕ್ರಮ. ನವೀನ ಸಂಶೋಧನೆ, ಎಸೆಸೆಲ್ಸಿ ಫಲಿತಾಂಶ, ಶಾಲೆಯ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯ ಬಗ್ಗೆ ವರದಿಯನ್ನು ಆಗಸ್ಟ್‌ 2017ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಆಧಾರದ ಮೇಲೆ ಈ ಶಾಲೆಗಳು ಆಯ್ಕೆಯಾಗಿವೆ. ಈ ಲ್ಯಾಬ್‌ನಲ್ಲಿ 2 ಕೊಠಡಿಗಳಿವೆ. ವಿಜ್ಞಾನ ಪ್ರಯೋಗಾಲಯ ಮತ್ತು ಪೊಜೆಕ್ಟರ್‌ ಬಳಸಿ ಪಾಠ ಮಾಡುವುದು. ಶಬ್ದವೇದಿ
ಉಪಕರಣ, ಉಷ್ಣಾಂಶ ಏರಿಳಿತ ಪತ್ತೆ ಹಚ್ಚುವ ಉಪಕರಣ, ನೈಸರ್ಗಿಕ ಅನಿಲ ಸೋರಿಕೆ ಪತ್ತೆ ಹಚ್ಚುವ ಉಪಕರಣ, ಕಂಪನಗಳು, ಮೆಕ್ಯಾನಿಕಲ್‌ , ಎಲೆಕ್ಟ್ರಾನಿಕ್‌ ಉಪಕರಣಗಳು, 30 ಬಗೆಯ ಮಾದರಿಗಳು ಮತ್ತು 3ಡಿ ಪ್ರಿಂಟರ್‌, 3 ಆಯಾಮಗಳ ಮುದ್ರಣಗಳಿರುವ ಚಿತ್ರಣ ಹಾಗೂ ಮಾದರಿ ರಚನೆ ಇದರಲ್ಲಿದೆ. ಕೇಂದ್ರ ಸರಕಾರದ ನೀತಿ ಆಯೋಗದಿಂದ ಅಧಿಕೃತವಾಗಿ ಆಯ್ಕೆಗೊಂಡವರು ಈ ಪ್ರಯೋಗಾಲಯದಲ್ಲಿ ವಿಜ್ಞಾನ ಪ್ರಯೋಗದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, ಅಳವಡಿಕೆಯ ಕ್ರಮ ಮತ್ತು ನಿರ್ವಹಣೆಯನ್ನು ಶಿಕ್ಷಕರಿಗೆ ತಿಳಿಸುತ್ತಾರೆ. ‘ಅಟಲ್‌ ಟಿಂಕರಿಂಗ್‌ ಲ್ಯಾಬ್‌’ ಅನ್ನು ಪರಿಸರದ ಶಾಲಾ ಮಕ್ಕಳು ಬಂದು ಪ್ರಯೋಗಾಲಯದ ಸದುಪಯೋಗ ಮಾಡಬಹುದಾಗಿದೆ. ಗ್ರಾಮೀಣ ಪ್ರದೇಶದ ಶಾಲೆಗೆ ಇದು ಹೆಚ್ಚು ಸಹಕಾರಿ ಯಾಗಲಿದೆ. ಬೆಳಗ್ಗೆ 9ರಿಂದ ಸಂಜೆ 4ರ ತನಕ ಇದನ್ನು ಉಪಯೋಗಿಸಬಹುದು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಲಾಭ
ಹೊಸ ತಂತ್ರಜ್ಞಾನ ಉಪಕರಣಗಳ ಜತೆಗೆ ವಿಜ್ಞಾನದ ಬಗ್ಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಸಕ್ತಿ ಮೂಡಿಸುವುದರ ಜತೆಗೆ ಹೊಸ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ, ಯುವ ವಿಜ್ಞಾನಿಯನ್ನು ಸೃಷ್ಟಿ ಮಾಡುವ ಕೇಂದ್ರ ಸರಕಾರದ ಉದ್ದೇಶವಾಗಿದ್ದು ಇದರ ಪ್ರಯೋಜನವನ್ನು ಪಡೆಯಬೇಕಾಗಿದೆ. ನಮ್ಮ ಶಾಲೆಯಲ್ಲಿ ಆ. 30ರೊಳಗೆ ಈ ಲ್ಯಾಬ್‌ನ್ನು ಉದ್ಘಾಟನೆ ಮಾಡಲಾಗುವುದು.
ಭಗಿನಿ ಲೊಲಿಟಾ, ಮುಖ್ಯೋಪಾಧ್ಯಾಯಿನಿ

Advertisement

Udayavani is now on Telegram. Click here to join our channel and stay updated with the latest news.

Next