ಲಕ್ನೋ: ಉತ್ತರ ಪ್ರದೇಶದಲ್ಲಿ ಅಟಲ್ ವಸತಿ ಶಾಲೆಗಳು ಜುಲೈನಿಂದ ಆರಂಭವಾಗಲಿವೆ. ಈ ಶಾಲೆಗಳಲ್ಲಿ ಕಾರ್ಮಿಕರ ಮಕ್ಕಳು ಮತ್ತು ಕೋವಿಡ್ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ದೊರೆಯಲಿದೆ. ಬಿಜೆಪಿ ಹಿರಿಯ ಮುತ್ಸದ್ಧಿ, ಭಾರತರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನೂತನವಾಗಿ ಉತ್ತರ ಪ್ರದೇಶದ 18 ಸ್ಥಳಗಳಲ್ಲಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ಆರನೇ ತರಗತಿಯಿಂದ 12ನೇ ತರಗತಿವರೆಗೆ ವಸತಿ, ಆಹಾರ ಸಹಿತ ಉಚಿತ ಶಿಕ್ಷಣ ಸೌಲಭ್ಯ ಪಡೆಯಬಹುದಾಗಿದೆ. ರಾಜ್ಯದ ಪ್ರತಿ ಆಡಳಿತ ವಿಭಾಗದಲ್ಲಿ ಈ ಶಾಲೆಯ ಪ್ರವೇಶಾತಿಗಾಗಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಕನಿಷ್ಠ ಮೂರು ವರ್ಷಗಳ ಹಳೆಯ ಇ-ಶ್ರಮಿಕ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳು ಮತ್ತು ಕೋವಿಡ್ ಸಮಯದಲ್ಲಿ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡ ಮಕ್ಕಳು ಈ ಉಚಿತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಉತ್ತರಪ್ರದೇಶ ಕಾರ್ಮಿಕ ಇಲಾಖೆ ಈ ಶಾಲೆಗಳನ್ನು ನಿರ್ವಹಿಸಲಿದೆ.