ನವದೆಹಲಿ: ದೇಶಕಂಡ ಅಪ್ರತಿಮ ರಾಜಕಾರಣಿ, ಅಜಾತಶತ್ರು, ಕವಿ, ಶ್ರೇಷ್ಠ ವಾಗ್ಮಿ, ದಾರ್ಶನಿಕ, ಹೆಸರಾಂತ ಪತ್ರಕರ್ತ, ನಿಸ್ವಾರ್ಥ ರಾಜಕಾರಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93)ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಅಸ್ತಗಂತರಾಗಿರುವುದಾಗಿ ಏಮ್ಸ್ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದೆ.
ಹೃದಯ, ಕಿಡ್ನಿ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5.05ಕ್ಕೆ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 11ರಂದು ವಾಜಪೇಯಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಾಜಪೇಯಿ ನಿವಾಸಕ್ಕೆ ಎಸ್ ಪಿಜಿ ತಂಡ:
ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ನಿವಾಸಕ್ಕೆ ಎಸ್ ಪಿಜಿ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ, ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದರು. ಸಂಜೆ 7.15ಕ್ಕೆ ಭೇಟಿ ನೀಡಿದ್ದ ಮೋದಿ ಅವರು ಸುಮಾರು 50 ನಿಮಿಷಗಳ ಕಾಲ ವಾಜಪೇಯಿ ಅವರ ಬಳಿ ಕಾಲ ಕಳೆದಿದ್ದರು. ವಾಜಪೇಯಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಮೋದಿ ಅವರು ನಾಲ್ಕು ಬಾರಿ ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತೀಗಣ್ಯರ ಭೇಟಿ:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ವಿಷಯ ತಿಳಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆಸ್ಪತ್ರೆಗೆ ದೌಡಾಯಿಸಿದ್ದರು.