Advertisement
ವರದಿಗೆ ಮರುಜೀವ
Related Articles
Advertisement
ವರದಿ ಬಗ್ಗೆ ಪರ-ವಿರೋಧದ ಅಲೆ
ಆಯಾ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಲು ಜಾತಿಗಣತಿ ಅಗತ್ಯ ಇರಬಹುದು. ಆದರೆ ಈ ವರದಿ ಸಿದ್ಧಗೊಂಡ ಬೆನ್ನಲ್ಲೇ ನಡೆದ ಬೆಳವಣಿಗೆಗಳು, ಕೇಳಿಬಂದ ಅಪಸ್ವರಗಳು ಹಲವು ಬಾರಿ ಪರ-ವಿರೋಧದ ಅಲೆ ಎಬ್ಬಿಸಿವೆ. ಇದೇ ಕಾರಣಕ್ಕೆ ಆರು ವರ್ಷಗಳಿಂದ ಯಾರೊಬ್ಬರೂ ವರದಿ ಸ್ವೀಕರಿಸುವ ಗೊಡವೆಗೆ ಹೋಗಿಲ್ಲ. ಈ ಮಧ್ಯೆ ಒಂದೂವರೆಯಿಂದ ಎರಡು ವರ್ಷ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಕೂಡ ಇತ್ತು.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪ್ರಕಟಿಸಿರುವ ಈ ನಿರ್ಧಾರವು ಮುಂಬರುವ ದಿನಗಳಲ್ಲಿ ಅದೇ ಪಕ್ಷದ ಒಳಗೆ ಮತ್ತು ಹೊರಗೆ ರಾಜಕೀಯ ಸುಂಟರಗಾಳಿ ಎಬ್ಬಿಸುವ ಸಾಧ್ಯತೆ ಸಾಧ್ಯತೆಯೂ ಇದೆ. ಯಾಕೆಂದರೆ ವರದಿ ಬಹಿರಂಗಗೊಂಡ ಮೇಲೆ ಅದಕ್ಕೆ ಅನುಗುಣವಾಗಿ ರಾಜಕೀಯ ಬಲಾಬಲವೂ ಬದಲಾಗಲಿದೆ. ಈಗ ಎಲ್ಲ ರಾಜಕೀಯ ಪಕ್ಷಗಳಲ್ಲಿ ಪ್ರಬಲವಾಗಿರುವ ಜಾತಿಗಳು ತಮ್ಮ ಅಧಿಕಾರವನ್ನು ಬೇರೆ ಜಾತಿಗಳಿಗೆ ಬಿಟ್ಟುಕೊಡಲು ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ಇದು ಜೇನುಗೂಡಿಗೆ ಕಲ್ಲು ಎಸೆಯುವ ಸಾಹಸ ಎಂದೂ ವಿಶ್ಲೇಷಿಸಲಾಗುತ್ತಿದೆ.
2004ರಲ್ಲೇ ಸಮೀಕ್ಷೆಗೆ ಇಂಗಿತ
ಹಾಗೆ ನೋಡಿದರೆ, ಜಾತಿಗಣತಿಯು ಸಿದ್ದರಾಮಯ್ಯ ಅವರ ದಶಕಗಳ ಕನಸು. 2004ರಲ್ಲಿ ಮೊದಲ ಬಾರಿಗೆ ಅವರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ, ತಾವು ಉಪ ಮುಖ್ಯಮಂತ್ರಿ ಆಗಿದ್ದಾಗ ಹಣ ಕೂಡ ಮೀಸಲಿಟ್ಟಿದ್ದರು. ಹಲವು ಕಾರಣಗಳಿಂದ ಅದು ಅಲ್ಲಿಯೇ ನಿಂತಿತು. ಇದಾದ ಮೇಲೆ ಅದಕ್ಕೆ ಚಾಲನೆ ದೊರಕಿದ್ದು ದಶಕದ ಅನಂತರ. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ವರದಿ ಸಿದ್ಧಗೊಂಡಿತು. ಆದರೆ ಸ್ವೀಕಾರ ಆಗಲಿಲ್ಲ. ಈಗ ಅದಕ್ಕೆ ಮತ್ತೆ ಕಾಲ ಕೂಡಿಬಂದಂತಿದೆ.
2015ರ ಎಪ್ರಿಲ್ 15ರಿಂದ ಮೇ 15ರ ಅವಧಿಯಲ್ಲಿ ನಡೆದ ಜಾತಿ ಗಣತಿ ವ್ಯಾಪ್ತಿಗೆ ರಾಜ್ಯದ ಸುಮಾರು 6 ಕೋಟಿ ಜನ ಒಳಪಟ್ಟಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳು ನೂರಕ್ಕೆ ನೂರರಷ್ಟು ಸಮೀಕ್ಷೆ ವ್ಯಾಪ್ತಿಗೆ ಬಂದಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಶೇ. 85-90ರಷ್ಟು ಜನ “ಕವರ್’ ಆಗಿದ್ದಾರೆ. ಸರಕಾರಿ ಸಿಬಂದಿ, ಉಪಕರಣಗಳನ್ನು ಬಳಸಿಕೊಂಡು ಮಾಡಿದ ಈ ಪ್ರಕ್ರಿಯೆಯಲ್ಲಿ 1.65 ಲಕ್ಷ ಗಣತಿದಾರರು ಕೆಲಸ ಮಾಡಿದ್ದರು. ವರದಿಯಲ್ಲಿ ಪ್ರತೀ ಕುಟುಂಬದ ಮುಖ್ಯಸ್ಥ, ಸದಸ್ಯರು, ಲಿಂಗ, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಾನಮಾನ, ಪೂರ್ಣಗೊಂಡ ವಯಸ್ಸು ಹೀಗೆ ಒಟ್ಟು 55 ಅಂಶಗಳ ಮಾಹಿತಿ ಸಂಗ್ರಹಿಸಲಾಗಿದೆ.
ಸರಕಾರ ಈ ಸಮೀಕ್ಷೆಗೆ 2014-2015ರಿಂದ 2016-17ರ ವರೆಗೆ ಒಟ್ಟು 206.84 ಕೋಟಿ ರೂ. ನಿಗದಿಪಡಿಸಿ, ಅದರಲ್ಲಿ 192.79 ಕೋಟಿ ರೂ. ಬಿಡುಗಡೆ ಮಾಡಿತ್ತು. ವರದಿ ಸಿದ್ಧಪಡಿಸಲು 158.47 ಕೋ.ರೂ. ವೆಚ್ಚ ಮಾಡಲಾಗಿದೆ. ಜಾತಿಗಣತಿಯ ಗಣಕೀಕರಣಕ್ಕೆ ಬಿಇಎಲ್ (ಭಾರತ್ ಅರ್ತ್‌ಮೂವರ್ ಲಿ.,) ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದಕ್ಕೆ 43.09 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು.
ಸಾವಿರಾರು ಜನ ರಾಜ್ಯಾದ್ಯಂತ ತಿರುಗಿ ಸಮೀಕ್ಷೆ ನಡೆಸಿದ್ದ ಸಲ್ಲಿಸಿದ್ದ ವರದಿ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಅದಕ್ಕೆ ಮರುಜೀವ ಸಿಗುತ್ತಿರುವುದು ಖುಷಿಯ ಸಂಗತಿ. ಇದರಿಂದ ಸರಕಾರವು ಆಯಾ ಸಮುದಾಯಗಳ ಸ್ಥಿತಿಗತಿಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲು ಅನುಕೂಲ ಆಗುತ್ತದೆ. ಆ ಮೂಲಕ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ.
ಎಚ್. ಕಾಂತರಾಜ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ
500 ಜಾತಿಗಳ ಸೇರ್ಪಡೆ!
ಪರಿಶಿಷ್ಟ ಜಾತಿಯಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರಕಾರ ಗುರುತಿಸಿರುವ 816 ಇತರ ಹಿಂದುಳಿದ ಜಾತಿಗಳು (ಒಬಿಸಿ) ಸೇರಿ ಒಟ್ಟು 1,351 ಜಾತಿಗಳ ಕುರಿತು 55 ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಸಮೀಕ್ಷೆ ಬಳಿಕ 500 ಜಾತಿಗಳನ್ನು ಹೊಸದಾಗಿ ಗುರುತಿಸಿ ಪಟ್ಟಿ ಮಾಡಲಾಗಿದೆ. ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ವಲಸೆ ಬಂದು 60-70 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿದವರು ತಮ್ಮ ಜಾತಿ ನಮೂದಿಸಿ¨ªಾರೆ ಎಂದು ಕೆ.ಎನ್. ಲಿಂಗಪ್ಪ ಮಾಹಿತಿ ನೀಡಿದರು.
ಸಮೀಕ್ಷೆಗೇ ವಿರೋಧ ಇತ್ತು
ಸಮೀಕ್ಷೆ ಬಗ್ಗೆಯೇ ಪ್ರಬಲ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಶೇಷವಾಗಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಜನಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದ್ದು, ಉಳಿದ ಸಮುದಾಯಗಳು ಪ್ರಬಲವಾಗಿವೆ ಎಂದು ಬಿಂಬಿಸುವುದು. ಆ ಮೂಲಕ ಪ್ರಮುಖ ಸಮುದಾಯಗಳ ಪ್ರಾಬಲ್ಯ ಕುಂದಿಸುವ ಪ್ರಯತ್ನಗಳು ಇದರ ಹಿಂದಿವೆ ಎಂಬ ಆರೋಪ ಕೇಳಿಬಂದಿತ್ತು.
ಇದೇ ಕಾರಣಕ್ಕೆ ಸಮೀಕ್ಷೆ ಸ್ಥಗಿತಗೊಳಿಸಬೇಕು ಎಂಬ ಒತ್ತಾಯ ಆಗ ತೀವ್ರವಾಗಿತ್ತು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮಾಹಿತಿಗಳನ್ನು ನೀಡದಿರುವಂತೆಯೂ ಕೆಲವರು ಕರೆ ನೀಡಿದರು. ಆದಾಗ್ಯೂ ಸಮೀಕ್ಷೆ ಕಾರ್ಯ ಮುಂದುವರಿದಾಗ, “ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಹೀಗೇ ನಮೂದಿಸಬೇಕು’ ಎಂದು ತಮ್ಮ ಸಮುದಾಯ ಬಾಂಧವರಿಗೆ ಆಯಾ ಮುಖಂಡರು ಅಭಿಯಾನದ ರೂಪದಲ್ಲಿ ಜಾಗೃತಿ ಮೂಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.
“ಸೋರಿಕೆ” ಆರೋಪ
ಈ ನಡುವೆ ವರದಿ ಬಗ್ಗೆ ಮತ್ತೂಂದು ಅಪಸ್ವರದ ಅಲೆ ಎದ್ದಿತು. ವರದಿಯ ಹಲವು ಅಂಶಗಳು “ಸೋರಿಕೆ’ ಆಗಿವೆ ಎಂಬುದು. ಅದರಂತೆ ರಾಜ್ಯದಲ್ಲಿ 1.08 ಕೋಟಿ ಪರಿಶಿಷ್ಟ ಜಾತಿ, 42 ಲಕ್ಷ ಪರಿಶಿಷ್ಟ ಪಂಗಡ, 75 ಲಕ್ಷ ಮುಸ್ಲಿಂ, 73 ಲಕ್ಷ ವೀರಶೈವ-ಲಿಂಗಾಯತ, 70 ಲಕ್ಷ ಒಕ್ಕಲಿಗರು, ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಇ¨ªಾರೆ. ಸಮೀಕ್ಷೆಯಲ್ಲಿ ಕುರುಬ ಸಮುದಾಯವನ್ನು ಅತ್ಯಂತ ಹಿಂದುಳಿದ ಸಮುದಾಯ ಎಂದು ಘೋಷಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದು ಸಮೀಕ್ಷೆಯನ್ನೇ ವಿರೋಧಿಸಿದ್ದ ಕೆಲವು ರಾಜಕೀಯ ಶಕ್ತಿಗಳಿಗೆ ಪುಷ್ಟಿ ನೀಡಿತು.
ಯಾವುದೇ ಅಂಕಿ-ಅಂಶಗಳು ಸೋರಿಕೆ ಆಗಿಲ್ಲವೆಂದು ಹಿಂದುಳಿದ ವರ್ಗಗಳ ಆಯೋಗ ಸ್ಪಷ್ಟಪಡಿಸಿತು. ಆದರೆ ಅದನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲ ಸಿಗಲಿಲ್ಲ. ಪರಿಣಾಮ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಗೆ ಗ್ರಹಣ ಹಿಡಿಯಿತು. ಇದರ ಬೆನ್ನಲ್ಲೇ ಬಹಿರಂಗವಾಗಿ ಮತ್ತು ಪತ್ರಿಕಾ ಹೇಳಿಕೆಗಳ ಮೂಲಕ ಸಮೀಕ್ಷೆ ಬಗ್ಗೆಯೇ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸಿದರು.
ವಿಜಯಕುಮಾರ ಚಂದರಗಿ