Advertisement
ಹೇಳದೇ ಕೇಳದೆ ಯಾರೂ ಕಾಲಿಡದ ನನ್ನದೆಯ ಸ್ವಚ್ಛಂದದ ಗರ್ಭಗುಡಿಯಲ್ಲಿ ದೇವಮಾನವನಂತೆ ಬಂದು ಕುಳಿತು, ಒಂಟಿತನದ ಕದತಟ್ಟಿ, ಪ್ರಣಯದ ಸುಮಧುರ ಸಂಗೀತದ ಪಲ್ಲವಿ ಹಾಡುತ್ತಾ, ಪ್ರೀತಿ ಎಂಬ ಎರಡಕ್ಷರದ ಸುಂದರ ಭಾವನೆ ನನ್ನಲ್ಲಿ ಹುಟ್ಟಿ, ಮೊಗ್ಗಾಗಿ, ಹೂವಾಗಿ ಅರಳಿ ಬಾಡದಂತೆ ಮೋಡಿ ಮಾಡಿದ ಜಾದುಗಾರ ನೀನು.
ನಿನ್ನ ಹೃದಯ ಕದಿಯುವ ತಪ್ಪಿಗೆ ಕಾನೂನಿನಲ್ಲಿ ಶಿಕ್ಷೆ ಇಲ್ಲವೇ? ನಿನ್ನ ವಿರುದ್ಧ ಸಾಕ್ಷಿ ಹೇಳಲು ನನ್ನ ಭಾವನೆಗಳು ತಯಾರಾಗಿವೆ. ಹೋಗಲಿ ಬಿಡು, ನಿನ್ನ ಈ ಕಳ್ಳಾಟಕೆ ನಿನ್ನಷ್ಟೇ ಮುದ್ದಾದ ಈ ಸುಂದರ ತಪ್ಪಿಗೆ ನಾ ಕೊಡುವ ಶಿಕ್ಷೆ. ನನ್ನ ಅಳತೆ ಮೀರಿದ ಪ್ರೀತಿಯಿಂದ ನಿನ್ನನ್ನು ಬಂಧಿಸಿ ಪ್ರೇಮ ಖೈದಿಯನ್ನಾಗಿಸುವ ಜೀವಾವಧಿ ಶಿಕ್ಷೆ. ಸೋಲಲೇಬಾರದೆಂದುಕೊಂಡಿದ್ದೆ. ಆದರೆ, ಅಂಗೈಯ ಗಾತ್ರವಿರುವ ಈ ಹೃದಯಕೆ ಹೇಳಿ ಹೇಳಿ ಸಾಕಾಗಿದೆ. ನೀ ಎದುರಿಗೆ ಬಂದಾಗ ಅದರ ಬಡಿತದ ವೇಗವನ್ನು ಜಾಸ್ತಿ ಮಾಡಿ ಕೊಳ್ಳಬೇಡ ಎಂದು. ಹೃದಯಕೆ ಕಿವಿಯಿಲ್ಲ ಹೇಗೆ ಹೇಳಲಿ? ನನ್ನ ತುಟಿಗಳಿಗೆ ಬೈದು ಬುದ್ದಿ ಹೇಳಿದ್ದೇನೆ, ನೀನು ನನ್ನಡೆಗೆ ನೋಡಿ ನಕ್ಕಾಗ, ನನ್ನ ಕಂಗಳು ನಾಚಿದರೂ ತುಟಿಗಳು ಮಂದಹಾಸ ಬೀರಬಾರದೆಂದು. ಅದರಗಳೂ ಅದರಿಷ್ಟದಂತೆ ನಡೆದು ಕೊಳ್ಳುತ್ತಿವೆ. ಏನು ಮಾಡಲಿ? ನನ್ನ ಮನಸ್ಸಂತೂ ಎಲ್ಲೇ ಮೀರಿ ಹೋಗಿದೆ. ಅದೆಷ್ಟು ದಿನಗಳ ಹುನ್ನಾರ ನಿನ್ನದು? ಪ್ರೀತಿಯೆಂಬ ವಿಷಯಕ್ಕೆ ಮಾತ್ರ ಕರಗಬಾರದೆಂದು ನಿರ್ಧರಿಸಿದ್ದ, ಕಲ್ಲಿನಂತೆ ಮಂಜುಗಡ್ಡೆಯಂತಿದ್ದ ನನ್ನ ಮನಸ್ಸನ್ನು ನಿನ್ನ ಸುಮಧುರ ಪ್ರೇಮದ ಶಾಖದಿಂದ ಕರಗಿಸಿಬಿಟ್ಟೆ. ಶಹಬ್ಟಾಶ್! ಮೆಚ್ಚಲೇ ಬೇಕು ನಿನ್ನ !
Related Articles
Advertisement
ಸೌಮ್ಯಶ್ರೀ ಸುದರ್ಶನ್ ಹಿರೇಮಠ್