ಇದು, ನಾಡಿನ ಹಿರಿಯ ಸಾಹಿತಿ- ಕಲಾವಿದರಾದ ಗೋಪಾಲ ಕೃಷ್ಣ ಅಡಿಗ, ಎಂ.ಕೆ. ಇಂದಿರಾ, ವಾಣಿ, ಜಿ.ವಿ. ಅಯ್ಯರ್, ದೇ.ಜವರೇಗೌಡ, ಟಿ. ಸುನಂದಮ್ಮ, ಬಿ.ಎಸ್. ರಂಗಾ ಹಾಗೂ ಪ್ರೊಫೆಸರ್ ಬಿ. ಚಂದ್ರಶೇಖರ್ ಅವರ ಜನ್ಮಶತಮಾನೋತ್ಸವ ವರ್ಷ. ಈ ಹಿರಿಯರನ್ನು, ಅವರ ಸಾಧನೆಗಳ ಜೊತೆಜೊತೆಗೇ ನೆನಪಿಸಿಕೊಳ್ಳುವ ಸದಾಶಯದಿಂದ “ಭಾಗವತರು’ ಸಾಂಸ್ಕೃತಿಕ ಸಂಘಟನೆಯು “ಶತಮಾನೋತ್ಸವ ಸಂಭ್ರಮದಲ್ಲಿ ಅಷ್ಟದಿಗ್ಗಜರು’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಅಂಗವಾಗಿ ವಿಚಾರ ಸಂಕಿರಣ, ಗಾಯನ, ಪುಸ್ತಕ ಬಿಡುಗಡೆ, ನಾಟಕ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮವನ್ನು ನಾಡೋಜ ಕೆ.ಎಸ್. ನಿಸಾರ್ ಅಹಮದ್ ಉದ್ಘಾಟಿಸಲಿದ್ದು, ಅಷ್ಟದಿಗ್ಗಜರ ಕುರಿತ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಕುರಿತು ಹಿರಿಯ ಲೇಖಕ, ಸಾಹಿತಿ ಕೆ. ಸತ್ಯನಾರಾಯಣ ಮಾತಾಡಲಿದ್ದಾರೆ. ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ವೀರಪ್ಪ ಮೊಯಿಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ.
ಅಂದು ಮಧ್ಯಾಹ್ನ ಅಷ್ಟದಿಗ್ಗಜರ ವ್ಯಕ್ತಿತ್ವ-ಸಾಧನೆ ಕುರಿತ ಎರಡು ವಿಚಾರಸಂಕಿರಣಗಳು ನಡೆಯಲಿವೆ. ಹಿರಿಯ ನಟ ಎಚ್.ಜಿ. ಸೋಮಶೇಖರ ರಾವ್ ಹಾಗೂ ವಿಮರ್ಶಕಿ ಎಂ.ಎಸ್. ಆಶಾದೇವಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ವಿ.ಅಯ್ಯರ್ ಹಾಗೂ ಬಿ.ಎಸ್. ರಂಗಾ ಅವರನ್ನು ಕುರಿತು ಗಂಗಾಧರ್ ಮೊದಲಿಯಾರ್, ಲೇಖಕಿಯರಾದ ಎಂ.ಕೆ. ಇಂದಿರಾ, ವಾಣಿ ಅವರನ್ನು ಕುರಿತು ಟಿ. ಸಿಂಧೂರಾವ್, ಶಿಕ್ಷಣ ತಜ್ಞ ದೇಜಗೌ, ಹಾಸ್ಯಲೇಖಕಿ ಟಿ. ಸುನಂದಮ್ಮ ಅವರನ್ನು ಕುರಿತು ಡಾ. ವತ್ಸಲಾ ಮೋಹನ್ ಹಾಗೂ ಗೋಪಾಲಕೃಷ್ಣ ಅಡಿಗರನ್ನು ಕುರಿತು ಜಿ.ಬಿ. ಹರೀಶ್ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹೆಸರಾಂತ ಗಾಯಕರಾದ ನಗರ ಶ್ರೀನಿವಾಸ ಉಡುಪ, ರಮೇಶ್ ಚಂದ್ರ, ಅರ್ಚನಾ ಉಡುಪ, ಆನಂದ ಮೊದಲಗೆರೆ ಮುಂತಾದವರಿಂದ ಅಷ್ಟದಿಗ್ಗಜರ ಗೀತೆಗಳ ಗಾಯನವೂ ನಡೆಯಲಿದೆ. ಡಾ.ಬಿ.ವಿ.ರಾಜಾರಾಂ ನಿರ್ದೇಶನ, ಕಲಾಗಂಗೋತ್ರಿ ತಂಡದವರು ಅಭಿನಯಿಸುವ “ಪರಹಿತ ಪಾಶಾಣ’ ನಾಟಕದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಎಲ್ಲಿ?: ನಯನ ಸಭಾಂಗಣ, ಜೆ.ಸಿ. ರಸ್ತೆ
ಯಾವಾಗ?: ನ. 12, ಭಾನುವಾರ ಬೆ.10-8