Advertisement

ವರ್ಷಾರಂಭದಲ್ಲಿ ನಮ್ದೇನಿಲ್ವಾ ಗುರು

10:20 AM Jan 11, 2020 | mahesh |

“ನಮ್‌ ಸ್ಟಾರ್ ಎಲ್ಲಾ ಎಲ್ಲಿದ್ದಾರೆ, ಯಾವಾಗ ನಮ್ಗೆ ದರ್ಶನ ಕೊಡ್ತಾರೆ …’
– ಹೊಸ ವರ್ಷ ಆರಂಭವಾಗಿದೆ. ಮತ್ತೆ ಕನಸುಗಳು ಶುರುವಾಗಿವೆ. ಸಿನಿಮಾ ಪ್ರೇಮಿ, ಒಂದೊಂದೇ ಸಿನಿಮಾವನ್ನು ಎಣಿಸುತ್ತಿದ್ದಾನೆ. ಅದರಲ್ಲೂ ಸ್ಟಾರ್‌ಗಳ ಸಿನಿಮಾ ಮೇಲೆ ನಿರೀಕ್ಷೆ ಈ ಬಾರಿ ಹೆಚ್ಚೇ ಇದೆ. ಆದರೆ, ಸ್ಟಾರ್ ಸಿನಿಮಾಗಳು ಯಾವಾಗ ತೆರೆಕಾಣುತ್ತವೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಈ ಪ್ರಶ್ನೆ ಕಾಡಲು ಕಾರಣ ವರ್ಷಾರಂಭದಲ್ಲಿನ ಪರಭಾಷಾ ಸ್ಟಾರ್‌ಗಳ ಅಬ್ಬರ. ನೀವು ಸುಮ್ಮನೆ ಒಮ್ಮೆ ಪಕ್ಕದ ರಾಜ್ಯಗಳ ಚಿತ್ರರಂಗದತ್ತ ಕಣ್ಣು ಹಾಯಿಸಿದರೆ ಅಲ್ಲಿ ವರ್ಷಾರಂಭದ ಸಡಗರ ಜೋರಾಗಿ ಕಾಣುತ್ತಿವೆ. ಬಿಗ್‌ಸ್ಟಾರ್ ಸಿನಿಮಾಗಳು ಅದ್ಧೂರಿಯಾಗಿ ತೆರೆಗೆ ಬರಲು ಅಣಿಯಾಗಿವೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ವರ್ಷದ ಮೊದಲ ತಿಂಗಳು ತುಂಬಾ ನೀರಸವಾಗಿದೆ ಎಂದರೆ ತಪ್ಪಲ್ಲ. ಏಕೆಂದರೆ ಜನವರಿಯ ಕೊನೆಯವರೆಗೂ ಯಾವುದೇ ಸ್ಟಾರ್‌ ಅಥವಾ ಹೊಸಬರ ನಿರೀಕ್ಷಿತ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ. ಒಂದೆರಡು ಸಿನಿಮಾಗಳು ಬಂದರೂ ಆ ಸಿನಿಮಾಗಳ ಭವಿಷ್ಯ ತೆರೆಕಂಡ ಮೇಲಷ್ಟೇ ಗೊತ್ತಾಗಲಿದೆ. ಇತ್ತೀಚಿನ ವರ್ಷಗಳನ್ನು ಗಮನಿಸಿಕೊಂಡು ಬಂದರೆ ವರ್ಷದ ಕೊನೆ ಚಿತ್ರರಂಗದ ಮಟ್ಟಿಗೆ ಅದ್ಧೂರಿಯಾಗಿದ್ದರೆ, ವರ್ಷಾರಂಭ ಸ್ವಲ್ಪ ನಿಧಾನಗತಿಯಲ್ಲೇ ಸಾಗುತ್ತದೆ ಎಂದರೆ ತಪ್ಪಲ್ಲ.

Advertisement

ಈ ವರ್ಷದ ಜನವರಿ ಮೊದಲ ವಾರವನ್ನೇ ತೆಗೆದುಕೊಳ್ಳಿ. ಕೇವಲ ಎರಡು ಸಿನಿಮಾಗಳಷ್ಟೇ ಬಿಡುಗಡೆಯಾಗಿವೆ. ಹಾಗಂತ ಆ ಸಿನಿಮಾಗಳೇನು ಸದ್ದು ಮಾಡುತ್ತಿಲ್ಲ. ಆದರೆ, ಈ ವಾರ ಕನ್ನಡ ಚಿತ್ರರಂಗ ಸಂಪೂರ್ಣ ನೀರಸವಾಗಿದೆ. ಅದಕ್ಕೆ ಕಾರಣ ಯಾವುದೇ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಚಿತ್ರರಂಗ ಎಂದ ಮೇಲೆ ಅಲ್ಲಿ ಸೋಲು-ಗೆಲುವು, ಸಮಸ್ಯೆ ಸಹಜ. ಇವೆಲ್ಲದರ ನಡುವೆ ಶುಕ್ರವಾರ ಬಂತೆಂದರೆ ಸಿನಿಮಂದಿಗೊಂದು ಸಿನಿಮಾ ಬಿಡುಗಡೆಯ ಸಂಭ್ರಮ. ಆದರೆ, ಈ ವಾರ ಯಾವುದೇ ಕನ್ನಡ ಚಿತ್ರ ಬಿಡುಗಡೆಯಾಗುತ್ತಿಲ್ಲ. ಇದಕ್ಕೆ ಕಾರಣ ಪರಭಾಷಾ ಅಬ್ಬರ. ಪರಭಾಷೆಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ತಮ್ಮ ಸಿನಿಮಾ ಬಿಡುಗಡೆಗೆ ರೆಡಿ ಇದ್ದರೂ ನಿರ್ಮಾಪಕ, ನಿರ್ದೇಶಕರು ಯಾವುದೇ ರಿಸ್ಕ್ ತೆಗೆದುಕೊಂಡಿಲ್ಲ. ಪರಿಣಾಮವಾಗಿ ಈ ವಾರ ಖಾಲಿ ಖಾಲಿ, ಕನ್ನಡ ಸಿನಿಮಾ ಬಿಡುಗಡೆಯ ಸಂಭ್ರಮವಿಲ್ಲ. ರಜನಿಕಾಂತ್‌ ಅಭಿನಯದ “ದರ್ಬಾರ್‌’ ಸಿನಿಮಾ ಮೂಲಕ ಪರಭಾಷೆ ಅಬ್ಬರ ಶುರುವಾಗಿದೆ. ಅದರ ಬೆನ್ನಿಗೆ ಅಂದರೆ, ಜನವರಿ 10ಕ್ಕೆ ಮಹೇಶ್‌ ನಟನೆಯ “ಸರಿಲೇರು ನೀಕೆವರು’, ಜನವರಿ 12ಕ್ಕೆ ಅಲ್ಲು ಅರ್ಜುನ್‌ ನಟನೆಯ “ಅಲಾ ವೈಕುಂಠಪುರಂಲೋ’ ಹಾಗೂ ಜನವರಿ 16ಕ್ಕೆ ಧನುಶ್‌ ಅಭಿನಯದ “ಪಟ್ಟಾಸ್‌’ ಚಿತ್ರಗಳು ಮುಖ್ಯವಾಗಿ ಬಿಡುಗಡೆಯಾಗುತ್ತಿವೆ. ಈ ಎಲ್ಲಾ ಚಿತ್ರಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದರಿಂದ ಬಹುತೇಕ ಚಿತ್ರಮಂದಿರಗಳನ್ನು ಈ ಎಲ್ಲಾ ಚಿತ್ರಗಳು ಆವರಿಸಿಕೊಳ್ಳಲಿದೆ. ಹಾಗಾದರೆ ಕನ್ನಡದಿಂದ ಸ್ಟಾರ್‌ ನಟರ ಚಿತ್ರಗಳು ಯಾವಾಗಿನಿಂದ ಬಿಡುಗಡೆಯಾಗಲಿವೆ ಎಂದರೆ ಫೆಬ್ರವರಿಯಿಂದ ಎನ್ನಬಹುದು.

ಶಿವರಾಜಕುಮಾರ್‌ ಅವರ “ದ್ರೋಣ’ ಫೆಬ್ರವರಿಯಲ್ಲಿ ಬರುವ ಸಾಧ್ಯತೆ ಇದೆ. ಧ್ರುವ “ಪೊಗರು’ ಮಾರ್ಚ್‌, ಪುನೀತ್‌ “ಯುವರತ್ನ’ ಹಾಗೂ ಜಗ್ಗೇಶ್‌ “ತೋತಾಪುರಿ’ ಏಪ್ರಿಲ್‌ನಲ್ಲಿ ಬರುವ ಸಾಧ್ಯತೆ ಇದೆ. ಈ ಮೂಲಕ ಅಭಿಮಾನಿಗಳಿಗೆ ಸಿನಿಹಬ್ಬವಾಗಲಿದೆ. ಸದ್ಯ ಕನ್ನಡದಲ್ಲಿ ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸದ್ಯ ಕನ್ನಡ ಪ್ರೇಕ್ಷಕ ನಿರೀಕ್ಷಿತ ಸಿನಿಮಾಗಳ ಟ್ರೇಲರ್‌, ಟೀಸರ್‌ ಹಾಡುಗಳನ್ನು ಎಂಜಾಯ್‌ ಮಾಡುತ್ತಿದ್ದಾನೆ. ಈಗಾಗಲೇ ದುನಿಯಾ ವಿಜಯ್‌ ನಿರ್ದೇಶನದ “ಸಲಗ’ ಚಿತ್ರದ “ಸೂರಿಯಣ್ಣ…’ ಹಾಡು ದೊಡ್ಡ ಹಿಟ್‌ ಆಗಿದೆ. ಈ ನಡುವೆಯೇ ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ವುನ್‌’ ಟ್ರೇಲರ್‌, “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದ ಟೀಸರ್‌, “ಕೆಜಿಎಫ್’, “ಯುವರತ್ನ’ ಹೊಸ ಸ್ಟಿಲ್ಸ್‌ … ಹೀಗೆ ಒಂದಷ್ಟು ಸಿನಿಮಾಗಳು ತಮ್ಮ ಸಿನಿಮಾದ ತುಣುಕನ್ನು ರಿಲೀಸ್‌ ಮಾಡಿ, ಸಿನಿಪ್ರೇಮಿಗಳ ಕುತೂಹಲ ಹೆಚ್ಚಿಸಿವೆ. ಹಾಗೆ ನೋಡಿದರೆ ಏಪ್ರಿಲ್‌ನಿಂದ ಒಂದೊಂದೇ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗಲಿವೆ. ಈ ಮೂಲಕ ಕನ್ನಡ ಚಿತ್ರರಂಗ ವರ್ಷದ ಕೊನೆಯವರೆಗೂ ರಂಗೇರುತ್ತಲೇ ಸಾಗಲಿದೆ.

ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next