ಚಿಕ್ಕಮಗಳೂರು: ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬಿಂಡಿಗ ದೇವೀರಮ್ಮನ ಬೆಟ್ಟ ವನ್ನು ಶನಿವಾರ ರಾತ್ರಿ ವೇಳೆ ಹತ್ತುವುದು ಸುರಕ್ಷಿತವಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಬಿಂಡಿಗ ದೇವೀರಮ್ಮ ದರ್ಶನಕ್ಕಾಗಿ ಪ್ರತಿ ದೀಪಾವಳಿ ಯಲ್ಲಿ ನರಕ ಚತುರ್ದಶಿಯ ಹಿಂದಿನ ದಿನ ರಾತ್ರಿಯಿಂದಲೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬೆಟ್ಟ ಹತ್ತಲು ಆರಂಭಿಸುವುದು ವಾಡಿಕೆ. ಆದರೆ, ಈ ವರ್ಷ ನಿರಂತರ ಮಳೆಯಾಗಿದ್ದು, ಜೊತೆಗೆ ಕಳೆದ ಎರಡು ದಿನಗಳಿಂದ ಗಾಳಿ ಸಹ ಅಧಿಕವಾಗಿದೆ.
ಈ ಹಿನ್ನೆಲೆಯಲ್ಲಿ ಬೆಟ್ಟವನ್ನು ಭಾನುವಾರ ಬೆಳಗ್ಗೆಯಿಂದ ಹತ್ತಬೇಕು ಎಂದು ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್ ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ. ಮಳೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಹಾಗೂ ಬೆಟ್ಟ ಅತ್ಯಂತ ಕಡಿದಾದ ಎತ್ತರವಾದ ಇಳಿಜಾರು ಪ್ರದೇಶ ವಾಗಿರುವ ಕಾರಣ ಜನಸಂದಣಿ ಹೆಚ್ಚಾಗಿ ಇಳಿಜಾರು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಂಭವವಿದೆ.
ಹಿರಿಯ ಭೂ ವಿಜ್ಞಾನಿಗಳು ಸಹ ಶುಕ್ರವಾರ ಸ್ಥಳ ತನಿಖೆ ನಡೆಸಿ ವರದಿ ನೀಡಿದ್ದು, ಅವರು ಸಹ ಈ ಅಂಶವನ್ನು ದೃಢೀಕರಿಸಿ ಬೆಟ್ಟದ ತಪ್ಪಲಿನಿಂದ ತುದಿಯವರೆಗೆ ಕಡಿದಾದ ದಾರಿಯಿದೆ. ಬಲಭಾಗದಲ್ಲಿ ಪ್ರಪಾತವಿದೆ. 400 ರಿಂದ 500 ಮೀ.ದೂರದವರೆಗೆ ಎರಡು ಕೈಗಳ ಸಹಾಯದಿಂದ ಬೆಟ್ಟ ಹತ್ತಬೇಕಾಗಿರುವುದರಿಂದ ಈ ಪರಿಸ್ಥಿತಿಯಲ್ಲಿ ಅದು ಸುರಕ್ಷಿತವಲ್ಲ ಎಂದು ತಿಳಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾಲುದಾರಿಯಲ್ಲಿ ಬೆಟ್ಟದಲ್ಲಿ ಸಾಗಬೇಕಾಗಿರುವುದರಿಂದ ಮಳೆ ನೀರಿನಿಂದ ಸಡಿಲಗೊಂಡು ಕುಸಿಯುವ ಸಂಭವವಿದೆ.
ಹವಾಮಾನ ಇಲಾಖೆ ಮುನ್ಸೂಚನೆ ನೀಡಿ, ಭಾರೀ ಮಳೆ ಬರಲಿದೆ ಎಂದು ಹೇಳಿದ್ದು, ರಾತ್ರಿ ವೇಳೆಯಲ್ಲಿ ಬೆಟ್ಟ ಹತ್ತುವುದು ಸುರಕ್ಷಿತವಲ್ಲ ಎಂದು ತಿಳಿಸಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿಗಳು ಶನಿವಾರ ರಾತ್ರಿ ಕತ್ತಲಲ್ಲಿ ಬೆಟ್ಟ ಹತ್ತುವ ಬದಲು ಭಾನುವಾರ ಬೆಳಗಿನಿಂದ ಬೆಟ್ಟ ಹತ್ತಬೇಕೆಂದು ಮನವಿ ಮಾಡಿದ್ದಾರೆ. ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ಮತ್ತು ದೈಹಿಕ ಅಸಮರ್ಥರು ಬೆಳಗಿನ ಸಮಯದಲ್ಲೂ ಸಹ ಬೆಟ್ಟ ಹತ್ತುವುದನ್ನು ನಿಲ್ಲಿಸಬೇಕೆಂದು ಕೋರಿದ್ದಾರೆ.