ಪ್ಯಾರಿಸ್ : ನೈಋತ್ಯ ಫ್ರಾನ್ಸ್ ಸೂಪರ್ ಮಾರ್ಕೆಟ್‌ನ ಒಂದೇ ಸ್ಥಳದಲ್ಲಿ ಇಂದು ಶುಕ್ರವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ಹಾರಾಟದಲ್ಲಿ ಇಬ್ಬರು ಮೃತಪಟ್ಟು ಹಲವರು ಒತ್ತೆ ಸೆರೆಗೆ ಸಿಲುಕಿದ್ದಾನೆ. ದಾಳಿಕೋರನು ತಾನು ಐಸಿಸ್ ಉಗ್ರ ಸಂಘಟನೆಗೆ ನಿಷ್ಠೆ ಹೊಂದಿರುವವನು ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಅಪರಿಚಿತ ಶಸ್ತ್ರಧಾರಿ ದಾಳಿಕೋರನು ಹಲವು ಮಂದಿಯನ್ನು ಸೂಪರ್ ಮಾರ್ಕೆಟ್ ಒಳಗೆ ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದಾನೆ ಮತ್ತು ತಾನು ಐಸಿಸ್ ಉಗ್ರ ಸಂಘಟನೆಗೆ ನಿಷ್ಠೆ ಹೊಂದಿರುವವನೆಂದು ಹೇಳಿಕೊಂಡಿದ್ದಾನೆ ಎಂಬುದಾಗಿ ಬಿಎಫ್ಎಂ ಟಿವಿ ಫ್ರೆಂಚ್ ಅಧಿಕಾರಿಗಳನ್ನು ಉಲ್ಲೇಖೀಸಿ ವರದಿ ಮಾಡಿದೆ.
ದಿ ಯೂರೋಪ್ 1 ರೇಡಿಯೋ ಕೂಡ ದಾಳಿಕೋರ ಉಗ್ರನು ಸೂಪರ್ ಮಾರ್ಕೆಟ್‌ನಲ್ಲಿ ಹಲವರನ್ನು ಒತ್ತೆ ಸೆರೆಯಲ್ಲಿರಿಸಿಕೊಂಡಿದ್ದು ಆತನ ಗುಂಡಿಗೆ ಇಬ್ಬರು ಬಲಿಯಾಗಿರುವುದಾಗಿ ದೃಢೀಕರಿಸಿದೆ.
ಎಎಫ್ಪಿ ವರದಿಯ ಪ್ರಕಾರ ಕ್ಯಾರ್‌ಕೆಸೋನ್ ಪಟ್ಟಣದಲ್ಲಿ ಬಂದೂಕುಧಾರಿ ದಾಳಿಕೋರನು ಒಬ್ಬ ಪೊಲೀಸ್ ಸಿಬಂದಿಗೆ ಗುಂಡೆಸೆದಿದ್ದಾನೆ; ಸೂಪರ್ ಮಾರ್ಕೆಟ್‌ನಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಹಲವರನ್ನು ತನ್ನ ಒತ್ತೆಸೆರೆಯಲ್ಲಿ ಇರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ದಾಳಿಕೋರನು ಬೆಳಗ್ಗೆ ಸುಮಾರು 11.15ರ ಹೊತ್ತಿಗೆ ಸೂಪರ್ ಮಾರ್ಕೆಟ್ ಪ್ರವೇಶಿಸಿದ್ದಾನೆ; ಅಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಟ್ರೆಬಿಸ್ ಪ್ರಕರಣದ ಬಗ್ಗೆ ಮೂಲಗಳು ತಿಳಿಸಿವೆ.
ಘಟನೆಯನ್ನು ಅನುಸರಿಸಿ ಸೂಪರ್ ಮಾರ್ಕೆಟ್ ಪ್ರದೇಶಕ್ಕೆ ಈಗ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಫ್ರೆಂಚ್ ಪ್ರಧಾನಿ ಎಡ್ವರ್ಡ್ ಫಿಲಿಪ್ ಅವರು “ಆರಂಭಿಕ ವರದಿಗಳ ಪ್ರಕಾರ ಇದೊಂದು ಭಯೋತ್ಪಾದನೆಯ ಕೃತ್ಯವೆಂಬುದು ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.
ಈ ನಡುವೆ ಭದ್ರತಾ ಅಧಿಕಾರಿಗಳು ಒತ್ತೆಯಾಳುಗಳನ್ನು ಪಾರುಗೊಳಿಸುವ ಮತ್ತು ದಾಳಿಕೋರನನ್ನು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.