ನವದೆಹಲಿ: ಪಟಾಕಿ ತಯಾರಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟಗೊಂಡ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ (ಫೆ.22) ಹಿಮಾಚಲ್ ಪ್ರದೇಶದ ಉನಾ ಜಿಲ್ಲೆಯ ಫ್ಯಾಕ್ಟರಿಯೊಂದರಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸೈನಿಕನ ತಾಯಿ ಹತ್ಯೆ ಪ್ರಕರಣ : ಪ್ರಮುಖ ಆರೋಪಿಗಳ ಬಂಧನಕ್ಕೆ ಆಗ್ರಹ
ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ, ಉನಾ ಜಿಲ್ಲೆಯ ಬಾಥು ಕೈಗಾರಿಕಾ ವಲಯದಲ್ಲಿ ಈ ಘಟನೆ ನಡೆದಿದೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಉನಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಮೂಲಗಳು ಹೇಳಿವೆ.
ಸಾವನ್ನಪ್ಪಿರುವವರು ಮತ್ತು ಗಾಯಗೊಂಡವರಲ್ಲಿ ಬಹುತೇಕ ಮಂದಿ ವಲಸೆ ಕಾರ್ಮಿಕರಾಗಿದ್ದಾರೆ ಎಂದು ಉನಾ ಡೆಪ್ಯುಟಿ ಕಮಿಷನರ್ ರಾಘವ್ ಶರ್ಮಾ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬಂದಿಗಳು ಹಾಜರಿದ್ದರು.
ಹಿಮಾಚಲ್ ಪ್ರದೇಶದ ಪಟಾಕಿ ತಯಾರಿಕೆಯ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.