ಗಾಜಾ : ಉತ್ತರ ಗಾಜಾದ ಬೀಟ್ ಲಾಹಿಯಾ ನಗರದಲ್ಲಿ ಇಸ್ರೇಲಿ ಪಡೆಗಳು ಶನಿವಾರ ತಡರಾತ್ರಿ(ಅ19) ನಡೆಸಿದ ಭಾರೀ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೂರಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಬಾಂಬ್ ಸ್ಫೋಟದ ನಂತರ ಕಟ್ಟಡಗಳು ಧ್ವಂಸವಾಗಿದ್ದು, ಅನೇಕರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾವುನೋವುಗಳ ವರದಿಗಳನ್ನು ಪರಿಶೀಲಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಅಧಿಕಾರಿಗಳು ಪ್ರಕಟಿಸಿದ ಅಂಕಿಅಂಶಗಳು ಉತ್ಪ್ರೇಕ್ಷಿತ ಮತ್ತು ತನ್ನ ಮಿಲಿಟರಿ ಹೊಂದಿರುವ ಮಾಹಿತಿಯೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.
ಭಾನುವಾರ ಬೆಳಿಗ್ಗೆ ದಕ್ಷಿಣ ಲೆಬನಾನ್ ಮತ್ತು ಬೈರುತ್ನ ದಕ್ಷಿಣ ಭಾಗದಲ್ಲಿಯೂ ಸಹ ದಾಳಿ ಮುಂದುವರಿದಿದೆ ಎಂದು ವರದಿಯಾಗಿದೆ, ಅಲ್ಲಿ ನಗರದ ಮೇಲೆ ಭಾರೀ ಹೊಗೆ ಕಂಡುಬಂದಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಗುರಿಯಾಗಿರಿಸಿ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಪಡೆಗಳು ಭಾರೀ ಕಾರ್ಯಾಚರಣೆ ನಡೆಸುತ್ತಿವೆ.