Advertisement

ಕನಿಷ್ಠ 6 ಸಾವಿರ ನಿವೃತ್ತಿ ಪಿಂಚಣಿಗೆ ಕಾರ್ಯಕರ್ತೆಯರ ಒತ್ತಾಯ

09:00 AM Feb 12, 2019 | |

ಹರಪನಹಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಫಡರೇಷನ್‌ ಕಾರ್ಯಕರ್ತೆಯರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸಿ ಮತ್ತು ಡಿ ಗ್ರೂಫ್‌ ನೌಕರರನ್ನಾಗಿ ಸರ್ಕಾರ ಘೋಷಣೆ ಮಾಡಬೇಕು. ನಿವೃತ್ತರಾಗುವವರಿಗೆ ಕನಿಷ್ಠ 6 ಸಾವಿರ ರೂ. ಪಿಂಚಣಿ ಕೊಡಬೇಕು. ಸೇವಾ ಹಿರಿತನ ಅವಧಿಯನ್ನು ಪರಿಗಣಿಸಿ ಗೌರವ ಧನವನ್ನು ಗೋವಾ ಸರ್ಕಾರ ರೀತಿಯಲ್ಲಿ ಕೊಡಬೇಕು. ಕನಿಷ್ಠ ವೇತನ ಜಾರಿಗೆ ತರಬೇಕು. ಮಾತೃಪೂರ್ಣ ಯೋಜನೆಯ ಕೆಲಸ ತುಂಬಾ ಹೊರೆಯಾಗಿದ್ದು, ಮೊಟ್ಟೆ ಮತ್ತು ತರಕಾರಿಗಳನ್ನು ಕೊಂಡುಕೊಳ್ಳಲು ಮುಂಗಡವಾಗಿ ಬ್ಯಾಂಕಿಗೆ ಹಣ ಹಾಕಿರುವುದಿಲ್ಲ. ಹಾಗಾಗಿ ಮಾನಸಿಕ ತೊಂದರೆ ಕೊಡಬಾರದು ಎಂದು ಒತ್ತಾಯಿಸಿದರು.

Advertisement

ಅಂಗನವಾಡಿ ಕಾರ್ಯಕರ್ತೆಯರಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ, ಪದವಿ ಶಿಕ್ಷಣ ಪಡೆದವರು ಹೆಚ್ಚಾಗಿದ್ದು, ಅವರುಗಳಿಗೆ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ನೇಮಕ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಶೇ.50ರಷ್ಟು ಅಂಗನವಾಡಿಯವರಿಗೆ ವಿದ್ಯಾರ್ಹತೆ ಆಧಾರದ ಮೇಲೆ ಮೊದಲನೆ ಅದ್ಯತೆ ಕೊಟ್ಟು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಹೆಚ್ಚಾಗಿರುವುದರಿಂದ ಬಾಡಿಗೆ ಹಣ ಕೊಡಬೇಕು ಮತ್ತು ಬಾಡಿಗೆ ಕೇಂದ್ರಗಳ ಮನೆಯ ಮಾಲೀಕರಿಗೆ ಮುಂಗಡ ಹಣ ಕಟ್ಟುವುದಕ್ಕೆ ಇಲಾಖೆಯಿಂದ ಭರಿಸಬೇಕು. ಎಸ್ಸೆಸ್ಸೆಲ್ಸಿ ಪಾಸಾಗಿರುವ ಅಂಗನವಾಡಿ ಸಹಾಯಕಿಯರನ್ನು ಖಾಲಿ ಇರುವ ಕೇಂದ್ರಗಳಿಗೆ ಬಡ್ತಿ ನೀಡಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಕಾರ್ಯದರ್ಶಿ ಸುಮಾ, ಮುಖಂಡರಾದ ಉಮಾದೇವಿ, ಸರಿತಾ, ಕೋಟ್ರಮ್ಮ, ಮಂಜುಳ, ದೀಪಾ, ಹನುಮಂತಕ್ಕ, ವಿಶಾಲಮ್ಮ, ಗುಡಿಹಳ್ಳಿ ಹಾಲೇಶ್‌, ಎಚ್.ಎಂ.ಸಂತೋಷ್‌, ಮಹನೂಬ್‌ಬಾಷಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next