ಮೊಗಾದಿಶು: ಸೊಮಾಲಿಯಾ ರಾಜಧಾನಿಯಲ್ಲಿ ಈ ವರೆಗೂ ಕಂಡು ಕೇಳರಿಯದಷ್ಟು ಪ್ರಬಲ ಬಾಂಬ್ ಸ್ಫೋಟ ನಡೆದಿದ್ದು 276 ಮಂದಿ ಬಲಿಯಾಗಿದ್ದಾರೆ ಮತ್ತು ಸುಮಾರು 300 ಮಂದಿ ಗಾಯಗೊಂಡಿದ್ದಾರೆ. ಸೊಮಾಲಿಯಾ ಸರಕಾರ ಈ ಘೋರ ಕೃತ್ಯವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಿದೆ.
ಅಲ್ ಕಾಯಿದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅಲ್ ಶಬಾಬ್ ಎಂಬ ಉಗ್ರ ಸಂಘಟನೆಯೇ ಈ ಭೀಕರ ಹಾಗೂ ರಾಕ್ಷಸೀ ಕೃತ್ಯದ ಬಾಂಬ್ ಸ್ಫೋಟಕ್ಕೆ ಕಾರಣವೆಂದು ಸೊಮಾಲಿಯಾ ಸರಕಾರ ಆರೋಪಿಸಿದೆ.
ಸೊಮಾಲಿಯಾ ವಾರ್ತಾ ಸಚಿವರು ಈ ವಿಷಯವನ್ನು ಇಂದು ಸೋಮವಾರ ಬೆಳಗ್ಗೆ ಪ್ರಕಟಿಸಿದ್ದು ಆಫ್ರಿಕ ದೇಶದ ಈ ಶೃಂಗದಲ್ಲಿ ನಡೆದಿರುವ ಅತ್ಯಂತ ವಿನಾಶಕಾರಿ ಹಾಗೂ ಘೋರ ಬಾಂಬ್ ಸ್ಫೋಟ ಇದಾಗಿದೆ ಎಂದು ಹೇಳಿದ್ದಾರೆ.
ಗಾಯಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು ಮೃತರ ಸಂಖ್ಯೆ ಗಣನೀಯವಾಗಿ ಹೆಚ್ಚುವ ಭೀತಿ ಇದೆ ಎಂದವರು ಹೇಳಿದ್ದಾರೆ.
ಸಚಿವ ಅಬ್ದಿರೆಹಮಾನ್ ಉಸ್ಮಾನ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅತ್ಯಂತ ಕ್ರೂರ ಹಾಗೂ ಅಮಾನುಷ ಬಾಂಬ್ ದಾಳಿ ಇದಾಗಿದೆ ಎಂದಿದ್ದಾರೆ. ಟರ್ಕಿ ಮತ್ತು ಕೀನ್ಯ ಸೇರಿದಂತೆ ಹಲವು ದೇಶಗಳು ಸೊಮಾಲಿಯಾಗೆ ಈ ವಿಷಮ ಸಂದರ್ಭದಲ್ಲಿ ವೈದ್ಯಕೀಯ ಹಾಗೂ ಇನ್ನಿತರ ಬಗೆಯ ನೆರವಿನ ಕೊಡುಗೆ ನೀಡಿವೆ. ಮೊಗಾದಿಶುವಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ ಎಂದು ವರದಿಯಗಿದೆ.
ವಿದೇಶ ವ್ಯವಹಾರಗಳ ಸಚಿವಾಲಯ ಸಹಿತ ಹಲವು ಸರಕಾರಿ ಸಚಿವಾಲಯಗಳು ಮತ್ತು ಕಾರ್ಯಾಲಯಗಳು ಇರುವ ಜನದಟ್ಟನೆಯ ಬೀದಿಯಲ್ಲಿ ಟ್ರಕ್ ಬಾಂಬ್ ಸ್ಫೋಟಿಸಲಾಗಿದ್ದು 276 ಜನರ ಸಾವಿಗೆ ಅದು ಕಾರಣವಾಗಿದೆ ಎಂದು ಸಚಿವರು ಹೇಳಿದ್ದಾರೆ.
ವಿಶ್ವ ಸಂಸ್ಥೆಯು ಈ ಬಾಂಬ್ ಸ್ಫೋಟವನ್ನು ಬಲವಾಗಿ ಖಂಡಿಸಿದೆ.