ಕ್ವಾಡೋಗ್, ಬುರ್ಕಿನೋ ಫಾಸೋ : ಬುರ್ಕಿನೋ ಫಾಸೋ ದ ರಾಜಧಾನಿಯಲ್ಲಿನ ಟರ್ಕಿಶ್ ರೆಸ್ಟೋರೆಂಟ್ ಒಂದರಲ್ಲಿ ಶಂಕಿತ ಇಸ್ಲಾಮಿಕ್ ಉಗ್ರರು ನಡೆಸಿದ ಗುಂಡಿನ ದಾಳಿಗೆ ಕನಿಷ್ಠ 18 ಮಂದಿ ಬಲಿಯಾಗಿದ್ದಾರೆ.
ಸದಾ ವಿದೇಶೀಯರಿಂದಲೇ ತುಂಬಿರುವ ಈ ರೆಸ್ಟೋರೆಂಟ್ ಮೇಲೆ ಕಳೆದ ಎರಡು ವರ್ಷಗಳಲ್ಲಿ ಇಸ್ಲಾಮಿಕ್ ಉಗ್ರರು ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.
ಇಂದು ನಸುಕಿನ ವೇಳೆಯ ತನಕವೂ ನಡೆದಿದ್ದ ಈ ಗುಂಡಿನ ದಾಳಿಯ ಹೊಣೆಯನ್ನು ಈ ತನಕ ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲ. ದಾಳಿ ಆರಂಭಗೊಂಡ ಏಳು ತಾಸಿನ ವರೆಗೂ ಗುಂಡಿನ ಸದ್ದು ಕೇಳಿ ಬರುತ್ತಿತ್ತು.
ಸಂಪರ್ಕ ಸಚಿವ ರೆಮಿ ಡಾಂಜಿನೋ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಆರಂಭಿಕ ಮಾಹಿತಿಗಳ ಪ್ರಕಾರ ಇಸ್ಲಾಮಿಕ್ ಉಗ್ರರ ದಾಳಿಗೆ ಕನಿಷ್ಠ 18 ಮಂದಿ ಬಲಿಯಾಗಿದ್ದಾರೆ; ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಉಗ್ರರಿಗೆ ಬಲಿಯಾದವರು ವಿವಿಧೆ ದೇಶಗಳ ಪ್ರಜೆಗಳಾಗಿದ್ದಾರೆ; ಅವರಲ್ಲಿ ಕನಿಷ್ಠ ಒಬ್ಬ ಫ್ರೆಂಚ್ ಪೌರನಾಗಿದ್ದಾನೆ ಎಂದು ಹೇಳಿದರು.