Advertisement

ಐಎಎಫ್ ಬಾಲಾಕೋಟ್‌ ದಾಳಿಯಲ್ಲಿ ಕನಿಷ್ಠ 130 ಜೈಶ್‌ ಉಗ್ರರ ಸಾವು: ಇಟಲಿ ಪತ್ರಕರ್ತೆ

10:02 AM May 09, 2019 | Sathish malya |
ಹೊಸದಿಲ್ಲಿ : ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬರ್‌ 53 ಭಾರತೀಯ ಯೋಧರನ್ನು ಬಲಿಪಡೆದಿದ್ದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯು ಪಡೆ IAF ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಉಗ್ರ ತರಬೇತಿ ಕಟ್ಟಡದ ಮೇಲೆ ನಡೆಸಿದ್ದ ಬಾಂಬ್‌ ದಾಳಿಯಲ್ಲಿ ಕನಿಷ್ಠ 130 ರಿಂದ 170ರಷ್ಟು  ಉಗ್ರರು ಹತರಾಗಿದ್ದರೆ ಎಂಬುದನ್ನು ಇಟಲಿ ಪತ್ರಕರ್ತೆ ಫ್ರಾನ್ಸೆಸ್ಕಾ  ಮ್ಯಾರಿನೋ ಇದೀಗ ತಡವಾಗಿ ಬಹಿರಂಗಪಡಿಸಿದ್ದಾರೆ.
ಈ ಮೂಲಕ ಆಕೆ ಪಾಕ್‌ ಸರಕಾರ ಈ ವರೆಗೆ ಸಾಧಿಸಿಕೊಂಡು ಬಂದಿದ್ದ  ಬಾಲಾಕೋಟ್‌ ಸುಳ್ಳನ್ನು ಧ್ವಂಸಮಾಡಿದ್ದಾರೆ.
ತಾನು ಈ ವಿಷಯವನ್ನು ಬಾಲಾಕೋಟ್‌ ದಾಳಿ ನಡೆದ ತತ್‌ಕ್ಷಣದಲ್ಲೇ ವರದಿ ಮಾಡಿರುತ್ತಿದ್ದರೆ ಪಾಕಿಸ್ಥಾನದಲ್ಲಿನ ತನ್ನ ಸುದ್ದಿ ಮೂಲಗಳಿಗೆ ಅಪಾಯ ಒದಗುವುದು ಖಚಿತವಿತ್ತು; ಅದಕ್ಕಾಗಿ ತಾನು ಈ ವಿಷಯವನ್ನು ತಡವಾಗಿ ವರದಿ ಮಾಡುವುದು ಅನಿವಾರ್ಯವಾಯಿತು ಎಂದಾಕೆ ಹೇಳಿದ್ದಾರೆ.
ಮ್ಯಾರಿನೋ ಅವರು ದಕ್ಷಿಣ ಏಶ್ಯ ವಿದ್ಯಮಾನಗಳ ವರದಿಗಾರಿಕೆಯಲ್ಲಿ  ಹಲವಾರು ವರ್ಷಗಳ ಅನುಭವವಿರುವ ಪರಿಣತ ಪತ್ರಕರ್ತೆಯಾಗಿದ್ದು ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ.
ಭಾರತೀಯ ವಾಯು ಪಡೆಯ ಬಾಂಬ್‌ ದಾಳಿಯಲ್ಲಿ ಮೃತಪಟ್ಟಿದ್ದ  ಜೈಶ್‌ ಉಗ್ರರ ಮನೆಯವರು ಮತ್ತು ಕುಟುಂಬದವರಿಗೆ ಅಪಾರ ಜೀವ ಹಾನಿಯಾಗಿರುವ ಬಗ್ಗೆ ಬಾಯಿ ಮುಚ್ಚಿಕೊಂಡು ಸುಮ್ಮನಿರಲು ಪ್ರಧಾನಿ ಇಮ್ರಾನ್‌ ಖಾನ್‌ ಸರಕಾರ ಲಂಚ ನೀಡಿ ಜೀವ ಬೆದರಿಕೆ ಒಡ್ಡಿದ್ದರಿಂದ ಉಗ್ರರು ಹತರಾದ ವಿಷಯ ಬಹಿರಂಗಕ್ಕೆ ಬರಲೇ ಇಲ್ಲ ಎಂದು ಪತ್ರಕರ್ತೆ ಮ್ಯಾರಿನೋ ಹೇಳಿದ್ದಾರೆ.
WION ಜತೆಗೆ ಮಾತನಾಡುತ್ತಿದ್ದ ಇಟಲಿ ಪತ್ರಕರ್ತೆ ಮ್ಯಾರಿನೋ ಅವರು ಬಾಲಾಕೋಟ್‌ ಮೇಲಿನ ಐಎಎಫ್ ವಾಯು ದಾಳಿಯಲ್ಲಿ 130ರಿಂದ 170 ಜೈಶ್‌ ಉಗ್ರರು ಹತರಾದರೂ ಅದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಗೊತ್ತಾಗದ ರೀತಿಯಲ್ಲಿ  ಮುಚ್ಚಿಡುವ ಸರ್ವ ಪ್ರಯತ್ನವನ್ನು ಇಮ್ರಾನ್‌ ಖಾನ್‌ ಸರಕಾರ ಮಾಡಿತು ಎಂದು ಹೇಳಿದರು.
ಐಎಎಫ್ ವಾಯು ದಾಳಿಯಲ್ಲಿ ಗಾಯಗೊಂಡ ಅನೇಕ ಜೈಶ್‌ ಉಗ್ರರು ಈಗಲೂ ಪಾಕ್‌ ಮಿಲಿಟರಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರನ್ನು ಯಾವ ಆಸ್ಪತ್ರೆಗೂ ಸೇರಿಸಲಾಗಿಲ್ಲ ಎಂದು ಮ್ಯಾರಿನೋ ಹೇಳಿದರು.
ಐಎಎಫ್ ವಾಯು ದಾಳಿಯಲ್ಲಿ 170ರಷ್ಟು ಜೈಶ್‌ ಉಗ್ರರು ಹತರಾದರೂ ಪಾಕ್‌ ಸೇನೆ ಮತ್ತು ಸರಕಾರ ಏನೂ ಆಗಿಲ್ಲ ಎಂಬ ರೀತಿಯಲ್ಲಿ ವರ್ತಿಸಿ ಬಾಂಬಿಂಗ್‌ ನಡೆದಿದ್ದ ಸ್ಥಳದಲ್ಲಿನ ಎಲ್ಲ ಸಾಕ್ಷ್ಯಗಳನ್ನು ತ್ವರಿತವಾಗಿ ನಾಶಪಡಿಸಿತು ಎಂದು ಮ್ಯಾರಿನೋ ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next