ಪೇಶಾವರ: ಪಾಕಿಸ್ಥಾನದ ಪೇಶಾವರದ ಕೃಷಿ ತರಬೇತಿ ಕಾಲೇಜೊಂದರ ಮೇಲೆ ಶುಕ್ರವಾರ ಉಗ್ರರು ದಾಳಿ ನಡೆಸಿದ್ದು, 12 ಮಂದಿ ಮೃತಪಟ್ಟು, 32 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಅರ್ಧದಷ್ಟು ಮಂದಿ ವಿದ್ಯಾರ್ಥಿ ಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬುರ್ಖಾ ಧರಿಸಿಕೊಂಡು ಬಂದಿದ್ದ ಮೂವರು ಭಯೋತ್ಪಾದರು ಈ ಕೃತ್ಯ ಎಸಗಿದ್ದು, ದಾಳಿಯ ಹೊಣೆಯನ್ನು ಪಾಕ್‌ನ ತೆಹ್ರೀಕ್-ಎ-ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಘಟನೆ ನಡೆದ ಕೂಡಲೇ ಎಚ್ಚೆತ್ತ ಭದ್ರತಾ ಪಡೆಗಳು ಉಗ್ರರನ್ನು ಸುತ್ತುವರಿದಿದ್ದು, ಎಲ್ಲ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.
ಆಟೋದಲ್ಲಿ ಬಂದರು: ವಿಶೇಷವೆಂದರೆ, ಬುರ್ಖಾ ಧಾರಿ ಉಗ್ರರು ಭಾರೀ ಶಸ್ತ್ರಾಸ್ತ್ರಗ ಳೊಂದಿಗೆ ಆಟೋರಿಕ್ಷಾವೊಂದರಲ್ಲಿ ಆಗಮಿಸಿದ್ದರು. ಇಲ್ಲಿನ ಯುನಿವರ್ಸಿಟಿ ರಸ್ತೆಯಲ್ಲಿನ ಕೃಷಿ ತರಬೇತಿ ಕೇಂದ್ರದ ಹಾಸ್ಟೆಲ್‌ನಲ್ಲಿ ಒಂದೇ ಸಮನೆ ಗುಂಡಿನ ದಾಳಿ ಆರಂಭಿಸಿದರು. ಈದ್ ಮಿಲಾದ್ ಇದ್ದ ಕಾರಣ ಶುಕ್ರವಾರ ಕಾಲೇಜಿಗೆ ರಜೆ ಇತ್ತು. ಆದರೆ, ಹಾಸ್ಟೆಲ್‌ನಲ್ಲಿ ಸುಮಾರು 70 ವಿದ್ಯಾರ್ಥಿಗಳಿದ್ದರು. ಉಗ್ರರು ಗುಂಡಿನ ಮಳೆಗರೆಯುತ್ತಿದ್ದಂತೆ, ವಿದ್ಯಾರ್ಥಿ ಗಳೆಲ್ಲ ಭಯಭೀತರಾಗಿ ಓಡತೊಡಗಿದರು. ಈ ವೇಳೆ 6 ಮಂದಿ ವಿದ್ಯಾರ್ಥಿಗಳು, ಒಬ್ಬ ಭದ್ರತಾ ಸಿಬ್ಬಂದಿ ಮತ್ತು ಐವರು ನಾಗರಿಕರು ಮೃತಪಟ್ಟು, 32 ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಭಾರೀ ಶಸ್ತ್ರಾಸ್ತ್ರಗಳು ವಶಕ್ಕೆ: ವಿಷಯ ಗೊತ್ತಾಗುತ್ತಿದ್ದಂತೆ ಭದ್ರತಾ ಪಡೆಯು ಕಾರ್ಯಾ ಚರಣೆ ಆರಂಭಿಸಿದ್ದು, ಸುಮಾರು 1 ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಎಲ್ಲ ಮೂವರು ಉಗ್ರರನ್ನೂ ಕೊಂದು ಹಾಕಿತು. ಉಗ್ರರ ಬಳಿಯಿದ್ದ ಮೂರು ಸ್ಫೋಟಗೊಳ್ಳದ ಆತ್ಮಾಹುತಿ ಕವಚಗಳು, 20 ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
2014ರಲ್ಲಿ ಪೇಶಾವರ ಸೇನಾ ಶಾಲೆ ಮೇಲೆ ಉಗ್ರರು ದಾಳಿ ನಡೆಸಿ, 132 ಮಕ್ಕಳು ಸೇರಿದಂತೆ 147 ಮಂದಿಯನ್ನು ಬಲಿತೆಗೆದು ಕೊಂಡಿದ್ದರು.