Advertisement

ಕೋವಿಡ್ 19 ಆರ್ಥಿಕ ಸವಾಲಿಗೆ ಜಂಟಿ ಉತ್ತರ: ಮೋದಿ ಕರೆ

01:57 AM Jul 16, 2020 | Hari Prasad |

ಹೊಸದಿಲ್ಲಿ: ಭಾರತ ಮತ್ತು 27 ರಾಷ್ಟ್ರಗಳ ಐರೋಪ್ಯ ಒಕ್ಕೂಟಗಳ (ಇಯು) ನಡುವಿನ ಸಂಬಂಧವನ್ನು ಇನ್ನಷ್ಟು ವಿಸ್ತರಿಸಲು ಪ್ರಧಾನಿ ಮೋದಿ ಹೊಸ ಹೆಜ್ಜೆ ಇರಿಸಿದ್ದಾರೆ.

Advertisement

ಕೋವಿಡ್ 19 ಬಿಕ್ಕಟ್ಟಿನ ವೇಳೆ ಆರ್ಥಿಕತೆ ಸದೃಢಗೊಳಿಸಲು, ವಿಶ್ವಶಾಂತಿ ಮತ್ತು ಸ್ಥಿರತೆಗೆ ಭಾರತದೊಂದಿಗೆ ಪಾಲುದಾರರಾಗಲು ಇಯುವನ್ನು ಅವರು ಆಹ್ವಾನಿಸಿದ್ದಾರೆ.

ಭಾರತ-ಇಯು ವರ್ಚುವಲ್‌ ಶೃಂಗಸಭೆ ಉದ್ದೇಶಿಸಿ ಮೋದಿ ಬುಧವಾರ ಮಾತನಾಡಿದರು.

ಒಗ್ಗಟ್ಟಿನ ಹೋರಾಟ
ಇಂದು ಜನರ ಆರೋಗ್ಯ ಮತ್ತು ಸಮೃದ್ಧಿ ಎರಡೂ ನಾನಾ ಸಂಕಷ್ಟಗಳನ್ನು ಎದುರಿಸುತ್ತಿವೆ. ಕೋವಿಡ್ 19 ಅನಂತರ ನಮ್ಮ ಮುಂದೆ ಹಲವು ಸವಾಲುಗಳು ಹುಟ್ಟಿಕೊಂಡಿವೆ. ಇಂಥ ನಿರ್ಣಾಯಕ ಘಟ್ಟದಲ್ಲಿ ಮಾನವ ಕೇಂದ್ರಿತ ಆರ್ಥಿಕತೆಯ ಪುನರ್‌ ಸ್ಥಾಪನೆಗೆ ಭಾರತ ಮತ್ತು ಇಯು ಒಟ್ಟಾಗಿ ಹೋರಾಡಬೇಕು. ಮಾನವಕೇಂದ್ರಿತ ಜಾಗತೀಕರಣ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ನೈಸರ್ಗಿಕ ಸ್ನೇಹ
ಭಾರತ ಮತ್ತು ಇಯು ನೈಸರ್ಗಿಕ ಪಾಲುದಾರರು. ಪ್ರಜಾಪ್ರಭುತ್ವ, ಬಹುತ್ವ, ಸಹಭಾಗಿತ್ವ, ಜಾಗತಿಕ ಸಂಸ್ಥೆಗಳಿಗೆ ಗೌರವ, ಸ್ವಾತಂತ್ರ್ಯ ಮತ್ತು ಪಾರ ದರ್ಶಕತೆಯಂಥ ಜಾಗತಿಕ ಮೌಲ್ಯಗಳನ್ನು ನಾವು ಸಮಾನವಾಗಿ ಹಂಚಿಕೊಂಡಿದ್ದೇವೆ. ನಮ್ಮ ಪಾಲುದಾರಿಕೆ ವಿಶ್ವದ ಶಾಂತಿ, ಸ್ಥಿರತೆಗೂ ಪ್ರಯೋಜನ ಕಾರಿ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಈ ವಾಸ್ತವ ಸ್ಪಷ್ಟವಾಗಿದೆ ಎಂದರು.

Advertisement

ವಿಶ್ವಕ್ಕೆ ಭಾರತ ಕೊಡುಗೆ
ಜಗತ್ತಿನ 150 ಕೋವಿಡ್ 19 ಸಂತ್ರಸ್ತ ರಾಷ್ಟ್ರಗಳಿಗೆ ಭಾರತ ಔಷಧಗಳನ್ನು ಕಳಿಸಿಕೊಟ್ಟಿದೆ. ಕೊರೊನಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಫಾರ್ಮಾ ಕಂಪೆನಿಗಳು ಪ್ರಮುಖ ಪಾತ್ರ ನಿರ್ವಹಿಸಲು ಸಿದ್ಧವಾಗಿವೆ.

ತಾಪಮಾನ ವೈಪರೀತ್ಯದಂಥ ದೀರ್ಘ‌ ಕಾಲೀನ ಸವಾಲುಗಳೂ ಇವೆ. ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳಲ್ಲಿ ಐರೋಪ್ಯ ಹೂಡಿಕೆ ಮತ್ತು ತಂತ್ರಜ್ಞಾನಕ್ಕೆ ನಾವು ಸದಾ ಬಾಗಿಲು ತೆರೆದಿದ್ದೇವೆ ಎಂದರು.

ಒಪ್ಪಂದಕ್ಕೆ ಸಹಿ
ಭಾರತ ಮತ್ತು ಇಯು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಮಂಗಳವಾರ ನಡೆದ ಈ ಒಪ್ಪಂದವು ವ್ಯಾಪಾರ, ಹೂಡಿಕೆ ಮತ್ತು ರಕ್ಷಣೆ ಸಹಿತ ಹಲವು ಕ್ಷೇತ್ರಗಳ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಗುರಿ ಹೊಂದಿದೆ.

ಮೋದಿಯ 5 ಕರೆಗಳು

– ಕೋವಿಡ್ 19 ಸೃಷ್ಟಿಸಿರುವ ಸವಾಲುಗಳನ್ನು ಜತೆಗೂಡಿ ಎದುರಿಸೋಣ.

– ಮಾನವ ಕೇಂದ್ರಿತ ಆರ್ಥಿಕತೆಯನ್ನು ಪುನರ್‌ ನಿರ್ಮಿಸೋಣ.

– ವಿಶ್ವಶಾಂತಿ, ಸ್ಥಿರತೆ ಕಾಪಾಡುವುದು ನಮ್ಮ ಆದ್ಯತೆಯಾಗಲಿ.

– ಹವಾಮಾನ ವೈಪರೀತ್ಯಕ್ಕೂ ಜತೆಯಾಗಿ ಉತ್ತರಿಸೋಣ.

– ನವೀಕರಿಸುವ ಶಕ್ತಿ ಬಳಕೆ ಹೆಚ್ಚಿಸಲು ಕೈಜೋಡಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next