Advertisement

ಮನೆಯಲ್ಲಿ ಆಮೇಲೆ, ಆಮೇಲೆ, ಆಮೇಲೆ…

12:22 PM Jun 11, 2019 | Sriram |

ಕೆಲವೊಮ್ಮೆ ಮನೆ ಕಟ್ಟುವಾಗ ಗೋಡೆ ಮತ್ತೂಂದು ಸ್ವಲ್ಪ ವಾಲಿದಂತೆ ಕಂಡು ಬರುತ್ತದೆ. ಗಾರೆಯವರಿಗೆ ಕೇಳಿದರೆ, “ಹೌದಾ.. ಆಮೇಲೆ ಚೆಕ್‌ ಮಾಡುತ್ತೇವೆ’ ಎನ್ನುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ, ಈ ಆಮೇಲೆ ಬರುವುದೇ ಇಲ್ಲ ಹಾಗೂ ಸ್ವಲ್ಪ ವಾಲಿದಂತೆ ಇರುವ ಗೋಡೆ ಹಾಗೆಯೇ ಉಳಿದುಬಿಡುತ್ತದೆ. ಪ್ಲಾಸ್ಟರ್‌ ಮಾಡುವಾಗ ಕೋನ ಸರಿಯಾಗಿ ಬಂದಂತೆ ಇರುವುದಿಲ್ಲ, ಕೇಳಿದರೆ ಮೆತ್ತುವುದರಲ್ಲಿ ಓರೆಕೋರೆಯಾಗಿದೆ, ಆಮೇಲೆ ಸರಿ ಮಾಡುತ್ತೇವೆ ಎನ್ನುತ್ತಾರೆ.

Advertisement

ಕೆಲ ಮನೆಗಳಲ್ಲಿ ದುಬಾರಿ ವಸ್ತುಗಳನ್ನು ಉಪಯೋಗಿಸಿರುತ್ತಾರೆ, ಮನೆಯ ವಿನ್ಯಾಸವೂ ಚೆನ್ನಾಗಿಯೇ ಇರುತ್ತದೆ. ಆದರೂ ನೋಡಲು ಎಲ್ಲವೂ ಸರಿ ಇದ್ದಂತೆ ಅನ್ನಿಸುವುದಿಲ್ಲ. ಏನೋ ತಪ್ಪಾಗಿದ್ದಂತೆ ತೋರುತ್ತದೆ. ಸರಿಯಾಗಿ ಗಮನಿಸಿದರೆ – ಗೋಡೆಗಳು ಸ್ವಲ್ಪ ವಾಲಿದಂತೆ ಕಾಣುತ್ತದೆ, ಮೂಲೆಗಳು ಸರಿಯಾಗಿ ಮೂಡಿ ಬಂದಿರುವುದಿಲ್ಲ. ಕೋನಗಳು ಸ್ವಲ್ಪ ಅಂಕುಡೊಂಕಾಗಿ ಇರುವಂತೆ ಕಾಣಿಸುತ್ತದೆ. ಮರದ ಬಾಗಿಲು ಕಿಟಕಿ ಸಿಮೆಂಟ್‌ ಸೇರುವಲ್ಲಿ ಬಿರುಕುಗಳು, ಟೈಲ್ಸ್‌ನಲ್ಲಿ ಏರುಪೇರು ಕಂಡುಬರುತ್ತದೆ. ಗೋಡೆಗೆ ದುಬಾರಿ ಬಣ್ಣ ಬಳಿದಿದ್ದರೂ ಪಟ್ಟಿ ಕೆಲಸ ಸರಿಯಾಗಿರದೆ ತೇಪೆ ಕಾಮಗಾರಿ ಕಣ್ಣಿಗೆ ಹೊಡೆದಂತೆ ಇರುತ್ತದೆ. ಅದರಲ್ಲೂ, ಸಂಜೆಯ ಹೊತ್ತು ಗೋಡೆಗೆ ಅಂಟಿಕೊಂಡಂತೆ ಇರುವ ದೀಪ ಹಾಕಿದ್ದರಂತೂ ಏರುಪೇರುಗಳು ಮತ್ತೂ ಉದ್ದುದ್ದ ಹರಡಿದಂತೆ ಆಗುತ್ತದೆ. ಒಟ್ಟಾರೆ, ಹಾಕಿದ ಕಾಸಿಗೆ, ಒದಗಿಸಿದ ದುಬಾರಿ ವಸ್ತುಗಳಿಗೆ ಉತ್ತಮ ಗುಣಮಟ್ಟ ಬಂದಂತೆ ಇರುವುದಿಲ್ಲ. ಹೀಗೆಲ್ಲ ಆಗಲು ಮುಖ್ಯ ಕಾರಣ, ಮನೆ ಕಟ್ಟುವಾಗ ಗುಣಮಟ್ಟದ ಬಗ್ಗೆವಹಿಸಿದ ಕಾಳಜಿ ಸ್ವಲ್ಪ ಕಡಿಮೆ ಆದದೇ ಆಗಿರಬಹುದು.

ಆಮೇಲೆ ನೋಡುತ್ತೇವೆ ಸಾರ್‌..
ಕೆಲವೊಮ್ಮೆ ಮನೆ ಕಟ್ಟುವಾಗ ಗೋಡೆ ಮತ್ತೂಂದು ಸ್ವಲ್ಪ ವಾಲಿದಂತೆ ಕಂಡು ಬರುತ್ತದೆ. ಗಾರೆಯವರಿಗೆ ಕೇಳಿದರೆ, “ಹೌದಾ.. ಆಮೇಲೆ ಚೆಕ್‌ ಮಾಡುತ್ತೇವೆ’ ಎನ್ನುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ, ಈ ಆಮೇಲೆ ಬರುವುದೇ ಇಲ್ಲ ಹಾಗೂ ಸ್ವಲ್ಪ ವಾಲಿದಂತೆ ಇರುವ ಗೋಡೆ ಹಾಗೆಯೇ ಉಳಿದುಬಿಡುತ್ತದೆ. ಪ್ಲಾಸ್ಟರ್‌ ಮಾಡುವಾಗ ಕೋನ ಸರಿಯಾಗಿ ಬಂದಂತೆ ಇರುವುದಿಲ್ಲ, ಕೇಳಿದರೆ ಮೆತ್ತುವುದರಲ್ಲಿ ಓರೆಕೋರೆಯಾಗಿದೆ, ಆಮೇಲೆ ಸರಿ ಮಾಡುತ್ತೇವೆ ಎನ್ನುತ್ತಾರೆ. ಸಂಜೆ ತರಾತುರಿಯಲ್ಲಿ ಕೆಲಸ ಮುಗಿಸುವ ಆತುರದಲ್ಲಿ ಅದು ಅವರ ಗಮನಕ್ಕೆ ಮತ್ತೆ ಬರುವುದೇ ಇಲ್ಲ. ಗೋಡೆಯ ಮೂಲೆ ಫಿನಿಶ್‌ ಸರಿಯಾಗಿ ಬಂದಿರುವುದೇ ಇಲ್ಲ. ಟೈಲ್ಸ್‌ ಹಾಕುವಾಗ ಒಂದೆರಡು ಬಿಲ್ಲೆಗಳು ಕೆಳಗಿಳಿದಂತೆ ಕಾಣುತ್ತದೆ, ಕೇಳಿದರೆ ಬಡಗಿ, ಮತ್ತೂಬ್ಬರು ಸಿಮೆಂಟ್‌ ಸೆಟ್‌ ಆಗುವ ಮೊದಲೇ ಕಾಲಿಟ್ಟರು, ಅದಕ್ಕೇ ಇಳಿದಿದೆ, ಆಮೇಲೆ ಸರಿಮಾಡುತ್ತೇವೆ ಎನ್ನುತ್ತಾರೆ. ಆದರೆ, ಅಲ್ಲಿಯೂ ಸಹ “ಆಮೇಲೆ’ ಬರುವುದೇ ಇಲ್ಲ, ಟೈಲ್ಸ್‌ ನೆಲದ ಒಂದು ಭಾಗ ಇಳಿದಂತೆಯೇ ಇರುತ್ತದೆ. ಕಾಂಕ್ರಿಟ್‌ ಹಾಕಲು ತಯಾರು ಮಾಡುವ ಸೆಂಟ್ರಿಂಗ್‌ ಸ್ವಲ್ಪ ಜರುಗಿದಂತೆ ಇರುತ್ತದೆ. ಕೇಳಿದರೆ “ಆಮೇಲೆ’ ಮೇಲಕ್ಕೆ ಎತ್ತುತ್ತೇವೆ ಎನ್ನುತ್ತಾರೆ. ತಪ್ಪಿದ್ದರೆ ತಕ್ಷಣ ಮಾಡುವುದೇ ಉತ್ತಮ, “ಆಮೇಲೆ’ ಎಂದರೆ ಗುಣಮಟ್ಟ ಇಳಿಕೆ ಆದಂತೆಯೇ ಎಂಬುದನ್ನು ನಾವು ಮನದಲ್ಲಿ ಇಟ್ಟುಕೊಳ್ಳಬೇಕು.

ಅವರು ಸರಿ ಮಾಡುತ್ತಾರೆ, ಇವರು ಸರಿ ಮಾಡುತ್ತಾರೆ. ಮಾಡುವುದನ್ನು ಸರಿಯಾಗಿ ಮಾಡದೆ, ಬೇರೆಯವರು ಸರಿಮಾಡುತ್ತಾರೆ ಎಂದು ತಳ್ಳಿಹಾಕುವುದು ಗುಣ ಮಟ್ಟ ಕಾಯ್ದುಕೊಳ್ಳುವುದರಲ್ಲಿ ಬರುವ ಬಹುದೊಡ್ಡ ಸವಾಲು. ಎಲ್ಲವೂ ಸರಿಯಾಗಿ ಬಂದರೆ ನಾನು ಮಾಡಿದ್ದು, ನಾನು ಮಾಡಿದ್ದು ಎಂದು ಎಲ್ಲರೂ ಮುಂದೆ ಬಂದರೂ, ಕೆಲಸ ಕೆಟ್ಟಾಗ ಯಾರೂ ಮುಂದೆ ಬರುವುದಿಲ್ಲ. ಎಲ್ಲರೂ ಆದ ತಪ್ಪನ್ನು ಇತರರ ಮೇಲೆ ಹಾಕಲು ನೋಡುತ್ತಾರೆ. ಆದುದರಿಂದ ತಪ್ಪಾದ ಕೂಡಲೆ ಅದನ್ನು ಯಾರು ಮಾಡಿದ್ದಾರೋ ಅವರಿಂದಲೇ ಸರಿಪಡಿಸಿ ಮುಂದುವರಿಯುವುದು ಉತ್ತಮ. ಗೆಲುವಿಗೆ ಅನೇಕ ಅಪ್ಪಂದಿರು ಎಂದು ಹೇಳಲಾಗುತ್ತದೆ. ಆದರೆ, ಸೋತರೆ ಯಾರೂ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಸೆಂಟ್ರಿಂಗ್‌ನಲ್ಲಿ, ಮೌಲ್ಡ್‌ ಹಾಕುವ ಮೊದಲು ನ್ಯೂನತೆ ಕಂಡುಬಂದರೆ, ತಕ್ಷಣ ಸರಿಪಡಿಸುವುದು ಒಳ್ಳೆಯದು. ಆಮೇಲೆ ಗಾರೆಯವರು ಪ್ಲಾಸ್ಟರ್‌ನಲ್ಲಿ ಸರಿಪಡಿಸುತ್ತಾರೆ ಎಂದು ಬಿಟ್ಟರೆ, ಮುಂದೆ ಪ್ಲಾಸ್ಟರ್‌ ಮಾಡುವಾಗ ಗಾರೆಯವರು ಸೆಂಟ್ರಿಂಗ್‌ ಸರಿ ಇರಲಿಲ್ಲ. ನಾವೇನೂ ಮಾಡಕ್ಕಾಗಲ್ಲ ಎಂದು ಕೈಚೆಲ್ಲುವ ಸಾಧ್ಯತೆಯೇ ಹೆಚ್ಚು ಇರುತ್ತದೆ! ಗೋಡೆ ಕಟ್ಟುವಾಗ ಇರುವ ಓರೆಕೋರೆಗಳನ್ನು ಪ್ಲಾಸ್ಟರ್‌ ಮಾಡುವಾಗ ಸರಿಪಡಿಸುತ್ತೇವೆ ಎನ್ನುತ್ತಾರೆ. ಆದರೆ, ನಂತರ ಬೇರೆ ಗಾರೆಯವರು ಪ್ಲಾಸ್ಟರ್‌ ಕೆಲಸಕ್ಕೆ ನಿಯೋಜಿತರಾದರೆ ಗೋಡೆನೇ ಸರಿ ಇಲ್ಲ, ಪ್ಲಾಸ್ಟರ್‌ ಸ್ವಲ್ಪ ಹೆಚ್ಚಾ ಕಡಿಮೆ ಇದ್ದೇ ಇರುತ್ತದೆ. ಏನೂ ಮಾಡೊಕ್ಕೆ ಆಗಲ್ಲ ಎಂದುಬಿಡುತ್ತಾರೆ.

ಅದಿಲ್ಲ ಇದಿಲ್ಲ…
ಕುಣಿಯಕ್ಕೆ ಬರದಿದ್ದರೆ ನೆಲವೇ ಡೊಂಕು ಎಂದಂತೆ, ಕೆಲಸದವರು ಉತ್ತಮ ಗುಣಮಟ್ಟದ ಕಾಮಗಾರಿ ಆಗದಿದ್ದರೆ, ವಿವಿಧ ಸಬೂಬುಗಳನ್ನು ನೀಡುತ್ತಾರೆ. ಗೋಡೆ ವಾಲಿದಂತಿದ್ದರೆ -ತೂಗಿಗೆ ಇರದಿದ್ದರೆ ತೂಕುಗುಂಡು ಸರಿ ಇರಲಿಲ್ಲ ಎನ್ನಬಹುದು. ನೆಲ ಏರು ಪೇರಾಗಿದ್ದರೆ ರಸಮಟ್ಟ -ಸ್ಪಿರಿಟ್‌ ಲೆವೆಲ್‌ ಅಥವಾ ನೀರು ತುಂಬಿರುವ ಉದ್ದದ ಸಣ್ಣ ತೂತಿನ ಪಾರದರ್ಶಕ ಕೊಳವೆ ಟ್ಯೂಬು ಕೊಳೆ ತುಂಬಿದ್ದು, ಸರಿಯಾಗಿ ಕಾಣುತ್ತಿರಲಿಲ್ಲ ಎನ್ನಬಹುದು. ಮೂಲೆ ಸರಿ ಇರದಿದ್ದರೆ ನೂರು ರೂಪಾಯಿಗೆ ಸಿಗುವ ಮೂಲೆ ಮಟ್ಟ ಇರಲಿಲ್ಲ ಎನ್ನಬಹುದು. ಇಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ – ಲಕ್ಷಲಕ್ಷ ಖರ್ಚು ಮಾಡಿ ಕಟ್ಟುವ ಮನೆಗೆ ಗುಣಮಟ್ಟ ಕಾಯ್ದುಕೊಳ್ಳಲು ಬಳಸುವ ವಿವಿಧ ಸಲಕರಣೆಗಳು ಕೇವಲ ನೂರು ರೂಪಾಯಿಯ ಆಸುಪಾಸಿನಲ್ಲಿ ಸಿಗುತ್ತದೆ ಎಂಬುದು. ಇತ್ತೀಚಿನ ದಿನಗಳಲ್ಲಿ, ದಿನ ಒಂದಕ್ಕೆ ಸಾವಿರ ರೂಪಾಯಿಯವರೆಗೂ ಪಗಾರ ಕೇಳುವ ಗಾರೆಯವರು ಕೇವಲ ನೂರು ರೂಪಾಯಿ ಬೆಲೆಯ ಸಲಕರಣೆಯಿಂದಾಗಿ ಕಳಪೆ ಕಾಮಗಾರಿ ಮಾಡುವಂತೆ ಆಗಬಾರದು. ಹಾಗೆ ನೋಡಿದರೆ, ನುರಿತ ಗಾರೆಯವರು ಯಾವಾಗಲು ಉತ್ತಮ ಸಲಕರಣೆಗಳನ್ನೇ ಬಳಸುತ್ತಾರೆ. ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಈ ಸಲಕರಣೆಗಳು ಇಲ್ಲದಿದ್ದರೆ ಅವರ ಕೈಗಳನ್ನು ಕಟ್ಟಿಹಾಕಿದಂತೆ ಆಗುತ್ತದೆ ಎಂಬುದು.

Advertisement

ಮಳೆ ಗಾಳಿ ಬೆಳಕು…
ಮಳೆಗಾಲದಲ್ಲಿ ಯಾವಾಗ ಸುರಿಯಲು ತೊಡಗುತ್ತದೆ ಎಂದು ಹೇಳಲು ಬರುವುದಿಲ್ಲ, ಹಾಗಾಗಿ, ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳ ಬೇಕು. ಆಗತಾನೆ ಕಟ್ಟಿದ ಗೋಡೆಯ ಮೇಲೆ ನೇರವಾಗಿ ನೀರು ಹರಿದರೆ, ಬಾಗುವ ಸಾಧ್ಯತೆ ಇರುತ್ತದೆ. ಒಂದು ದೊಡ್ಡ ಪ್ಲಾಸ್ಟಿಕ್‌ ಶೀಟ್‌ ಇಲ್ಲ ಮರದ – ಪ್ಲೆ„ವುಡ್‌ ಹಲಗೆ ತಯಾರಾಗಿ ಇಟ್ಟುಕೊಂಡಿದ್ದರೆ. ನೀರಿನ ಹೊಡೆತವನ್ನು ತಡೆಯಬಹುದು. ಗಾಳಿ ಜೋರಾಗಿ ಬೀಸುತ್ತಿದ್ದರೆ, ಪ್ಲಾಸ್ಟರ್‌ ಮತ್ತೂಂದು ಮಾಡಲು ತೊಂದರೆ ಆಗಬಹುದು. ತೆರೆದ ಸ್ಥಳಗಳಿಗೆ ಒಂದಷ್ಟು ಅಡೆತಡೆಯನ್ನು ಹಾಕಿಕೊಂಡರೆ, ಕೆಲಸವೂ ಬೇಗನೆ ಆಗುವುದು ಜೊತೆಗೆ ಗುಣಮಟ್ಟವೂ ಉತ್ತಮವಾಗಿರುತ್ತದೆ. ಇನ್ನು ಮೋಡಕವಿದ ವಾತಾವರಣದಲ್ಲಿ, ಅದರಲ್ಲೂ ಫಿನಿಶ್‌ ಮಾಡುವ ವೇಳೆ – ಸಂಜೆಯ ಹೊತ್ತು ಒಳಾಂಗಣದಲ್ಲಿ ಕತ್ತಲು ಕತ್ತಲಾಗಿರುವುದು ಸ್ವಾಭಾವಿಕ. ಇದನ್ನು ಮೊದಲೇ ಗಮನಿಸಿ, ಸೂಕ್ತ ದೀಪದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಈ ದೀಪದ ವ್ಯವಸ್ಥೆ ಬಲಗೈ ಬಳಸುವ ಗಾರೆಯವರಿಗೆ ಅಥವಾ ಇತರೆ ಕುಶಲ ಕರ್ಮಿಗಳಿಗೆ ಎಡಗಡೆಯಿಂದ, ಸ್ವಲ್ಪ ಎತ್ತರ ಮಟ್ಟದಲ್ಲಿ ಹಾಗೂ ಹಿಂಬದಿಯಿಂದ ಬಂದರೆ ಉತ್ತಮ. ಆಗ ಕೈ ಆಡುವ ಕಡೆ ನೆರಳು ಬೀಳದ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲ ಆಗುತ್ತದೆ.

ಮನೆ ಕಟ್ಟಿ ಆಮೇಲೆ ನೋಡುವ ಬದಲು ಹಂತಹಂತವಾಗಿ, ಪ್ರತಿ ಘಟ್ಟದಲ್ಲೂ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿ, ಕುಶಲಕರ್ಮಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡರೆ, ಅವರಿಗೂ ನೋಡಿಕೊಳ್ಳುವವರು ಇದ್ದಾರೆ ಎಂಬುದರ ಅರಿವಾಗಿ, ಶುರುವಿನಿಂದಲೇ ಉತ್ತಮ ಕೆಲಸ ಮಾಡಲು ತೊಡಗುತ್ತಾರೆ.

ಹೆಚ್ಚಿನ ಮಾಹಿತಿಗೆ-98441 32826

-ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next