Advertisement

ಜಿ20ಯಲ್ಲಿ ಮೋದಿ 5ಐ

10:15 AM Jun 30, 2019 | Team Udayavani |

ಒಸಾಕ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಎರಡೂ ದೇಶಗಳ ನಡುವೆ ಎದ್ದಿರುವ ವ್ಯಾಪಾರ ಸಂಘರ್ಷವನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

Advertisement

ಜಪಾನ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗದ ಸಂದರ್ಭದಲ್ಲಿ ಉಭಯ ಮುಖಂಡರು ಭೇಟಿ ಮಾಡಿದ್ದು, ವ್ಯಾಪಾರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಶೀಘ್ರವೇ ಉಭಯ ದೇಶಗಳ ವಾಣಿಜ್ಯ ಸಚಿವರ ಸಭೆ ಕರೆಯಲು ನಿರ್ಧರಿಸಲಾಗಿದೆ.

ಜಿ20 ಶೃಂಗಕ್ಕಾಗಿ ಜಪಾನ್‌ಗೆ ಪ್ರಯಾಣ ಬೆಳೆಸುವುದಕ್ಕೂ ಮುನ್ನ, ಅಮೆರಿಕದ ಸಾಮಗ್ರಿಗಳ ಮೇಲೆ ಭಾರತ ತೆರಿಗೆ ಹೆಚ್ಚಳ ಮಾಡಿದ್ದಕ್ಕೆ ಟ್ವೀಟ್ ಮೂಲಕ ಟ್ರಂಪ್‌ ಆಕ್ಷೇಪಿಸಿದ್ದರು.

ಇದೇ ವೇಳೆ, 5ಜಿ ತಂತ್ರಜ್ಞಾನದಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವದ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಚೀನಾ ಮೂಲದ ಹುವಾವೆ ಕಂಪನಿಯ 5ಜಿ ತಂತ್ರಜ್ಞಾನ ಬಳಕೆ ಮಾಡದಂತೆ ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದ್ದು, ಭಾರತ ಈ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಿಲ್ಲ. ಮುಂದಿನ 100 ದಿನಗಳಲ್ಲಿ 5ಜಿ ಪರೀಕ್ಷೆ ನಡೆಸಲು ಭಾರತ ನಿರ್ಧರಿಸಿದ್ದು, ಟ್ರಂಪ್‌ ಜೊತೆಗಿನ ಮಾತುಕತೆ ಮಹತ್ವ ಪಡೆದಿದೆ.

ಡೇಟಾ ಸಂಪತ್ತು ರಕ್ಷಣೆ: ಡೇಟಾ ಈಗ ಹೊಸ ರೂಪದ ಸಂಪತ್ತು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದ್ದಾರೆ. ಡೇಟಾವನ್ನು ಭಾರತದಲ್ಲೇ ಸಂಗ್ರಹಿಸುವ ಬಗ್ಗೆ ಮತ್ತು ಡಿಜಿಟಲ್ ವಹಿವಾಟಿಗೆ ನಿರ್ಬಂಧ ಹೇರುವ ಬಗ್ಗೆ ಟ್ರಂಪ್‌ ವಿರೋಧವಿದ್ದರೂ, ಭಾರತ ತನ್ನ ನಿಲುವನ್ನು ಈ ನಿಟ್ಟಿನಲ್ಲಿ ಸಡಿಲಿಸಲಿಲ್ಲ.

Advertisement

ಭಯೋತ್ಪಾದನೆ ಅತಿದೊಡ್ಡ ಆಪತ್ತು ಎಂದ ಮೋದಿ: ಭಯೋತ್ಪಾದನೆಯು ಮಾನವ ಜನಾಂಗಕ್ಕೆ ಅತಿದೊಡ್ಡ ವಿಪತ್ತು. ಇದು ಕೇವಲ ಅಮಾಯಕರನ್ನು ಹತ್ಯೆಗೈಯುವುದಷ್ಟೇ ಅಲ್ಲ, ಇಡೀ ದೇಶದ ಆರ್ಥಿಕ, ಸಾಮಾಜಿಕ ಸ್ಥಿರತೆಯನ್ನು ಹಾಳು ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜಿ20 ಶೃಂಗದ ವೇಳೆ ಬ್ರಿಕ್ಸ್‌ ರಾಷ್ಟ್ರಗಳ ಮುಖಂಡರ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಅವರು, ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಎಲ್ಲ ದೇಶಗಳೂ ಒಟ್ಟಾಗಿ ಶ್ರಮಿಸಬೇಕಿದೆ ಎಂದಿದ್ದಾರೆ. ಬ್ರಿಕ್ಸ್‌ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಅಧ್ಯಕ್ಷರೂ ಇದ್ದರು.

ಇರಾನ್‌ ಕುರಿತು ಮೋದಿ ಚರ್ಚೆ: ಅಮೆರಿಕ ಹಾಗೂ ಇರಾನ್‌ ಮಧ್ಯೆ ಎದ್ದಿರುವ ಸಂಘರ್ಷದಿಂದಾಗಿ ಪರ್ಷಿಯನ್‌ ಗಲ್ಫ್ ವಲಯದಲ್ಲಿ ಅಸ್ಥಿರತೆ ಉಂಟಾಗಿದ್ದು, ಇದನ್ನು ನಿವಾರಿಸುವ ಕುರಿತು ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಕೇವಲ ಭಾರತದ ಇಂಧನ ಅಗತ್ಯವನ್ನು ಪೂರೈಸುವುದಕ್ಕಷ್ಟೇ ಅಲ್ಲ, ಗಲ್ಫ್ ವಲಯದಲ್ಲಿ 80 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಅವರ ಸುರಕ್ಷತೆಯೂ ಭಾರತದ ಆದ್ಯತೆಯಾಗಿದೆ. ಅಷ್ಟೇ ಅಲ್ಲ, ಗಲ್ಫ್ ವಲಯದಲ್ಲಿ ನಮ್ಮ ಆರ್ಥಿಕ ಹಿತಾಸಕ್ತಿಗಳೂ ಅಡಗಿವೆ. ಹೀಗಾಗಿ ಈ ವಲಯದಲ್ಲಿ ಅಸ್ಥಿರತೆಯು ಭಾರತದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಟ್ರಂಪ್‌ಗೆ ಭಾರತ ಮನವರಿಕೆ ಮಾಡಿಕೊಟ್ಟಿದೆ. ಭಾರತವು ಇರಾನ್‌ನಿಂದ ಭಾರಿ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಇದನ್ನು ಈಗ ಕಡಿಮೆ ಮಾಡಲಾಗಿದೆಯಾದರೂ, ಇದು ಭಾರತದ ಮೇಲೆ ಇತರ ವಿಧದಲ್ಲಿ ಪರಿಣಾಮ ಬೀರಲಿದೆ ಎಂದು ಮೋದಿ ಹೇಳಿದ್ದಾರೆ. ಈ ಮಧ್ಯೆ, ಭಾರತದ ನಿಲುವಿಗೆ ಟ್ರಂಪ್‌ ಮೆಚ್ಚುಗೆ ಸೂಚಿಸಿದ್ದಾರೆ. ಈ ಭಾಗದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಅಮೆರಿಕ ಬದ್ಧವಾಗಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.

ಅಭೂತಪೂರ್ವ ಜಯಕ್ಕೆ ನೀವು ಅರ್ಹರು
‘ಇಂಥ ಅಭೂತಪೂರ್ವ ಜಯಕ್ಕೆ ನೀವು ಅರ್ಹರು. ಎಲ್ಲರನ್ನೂ ಒಗ್ಗೂಡಿಸುವಲ್ಲಿ ನೀವು ಮಾಡಿರುವ ಕೆಲಸ ಅದ್ಭುತವಾದದ್ದು’. ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ 2ನೇ ಅವಧಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ ಅಭಿನಂದಿಸಿದ ಪರಿಯಿದು. ಜಿ20 ಶೃಂಗದ ವೇಳೆ ಮೋದಿಯವರ ಗೆಲುವಿಗೆ ಅಭಿನಂದಿಸಿದ ಟ್ರಂಪ್‌, ‘ನನಗಿನ್ನೂ ನೆನಪಿದೆ: ನೀವು ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದಾಗ ಅಲ್ಲಿ ಹಲವು ಒಡಕುಗಳಿದ್ದವು. ಆಂತರಿಕ ಕಚ್ಚಾಟಗಳೂ ಇದ್ದವು. ಆದರೆ, ಈ ಗೆಲುವು ನಿಮಗೆ, ನಿಮ್ಮ ಸಾಮರ್ಥ್ಯಕ್ಕೆ ಸಿಕ್ಕಿರುವ ಕೊಡುಗೆ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯ 5ಐ ಗುರಿ!

ಜಿ20 ಶೃಂಗದ ಡಿಜಿಟಲ್ ಆರ್ಥಿಕತೆ ಮತ್ತು ಕೃತಕ ಬುದ್ಧಿಮತ್ತೆ ಕುರಿತಾದ ವಿಚಾರ ಸಂಕಿರಣದಲ್ಲಿ ಪ್ರಧಾನಿ ನರೇಂದ್ರ ಮೋದಿ 5ಐ ಧ್ಯೇಯವನ್ನು ಪ್ರಸ್ತುತಪಡಿಸಿದ್ದಾರೆ. ಸಮಗ್ರ (ಇನ್‌ಕ್ಲೂಸಿವ್‌ನೆಸ್‌), ದೇಶೀಯ (ಇಂಡಿಜಿನೈಸೇಶನ್‌), ನಾವೀನ್ಯತೆ (ಇನೋವೇಶನ್‌), ಹೂಡಿಕೆ (ಇನ್ವೆಸ್ಟ್‌ಮೆಂಟ್) ಹಾಗೂ ಅಂತಾರಾಷ್ಟ್ರೀಯ ಸಹಕಾರ (ಇಂಟರ್‌ನ್ಯಾಷನಲ್ ಕೋಆಪರೇಶನ್‌) ಎಂಬ ಧ್ಯೇಯವನ್ನು ಮೋದಿ ಪ್ರಸ್ತಾಪಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ದೇಶವನ್ನು 3 ಲಕ್ಷ ಕೋಟಿ ರೂ. ಆರ್ಥಿಕತೆಯನ್ನಾಗಿಸಲಿದ್ದೇವೆ. ಸಾರ್ವಜನಿಕ ವಲಯವೇ ನಮ್ಮ ಪ್ರಮುಖ ಆದ್ಯತೆ. ಇದರೊಂದಿಗೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ಡಿಜಿಟಲ್ ಮೂಲಸೌಕರ್ಯದ ಬಗ್ಗೆಯೂ ಗಮನ ಹರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಜಿ20 ಶೃಂಗದ ವೇಳೆ ಭಾರತ, ಜಪಾನ್‌ ಮತ್ತು ಅಮೆರಿಕ ತ್ರಿಪಕ್ಷೀಯ ಸಭೆ ನಡೆಸಿದ್ದು, ಇದರಲ್ಲಿ ಸಂಪರ್ಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಕುರಿತು ಮಾತುಕತೆ ನಡೆಸಲಾಗಿದೆ. ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ಭಾಗವಹಿಸಿದ್ದರು. ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾ ಪ್ರಭುತ್ವವನ್ನು ಮಣಿಸಲು ಭಾರತ ಹೆಚ್ಚಿನ ಪಾತ್ರ ವಹಿಸಬೇಕು ಎಂದು ಅಮೆರಿಕ ಈ ಹಿಂದಿನಿಂದಲೂ ಸೂಚಿಸುತ್ತಿದೆ. ಈ ನಿಟ್ಟಿನಲ್ಲಿ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ. ಇದೇ ವೇಳೆ ರಷ್ಯಾ, ಭಾರತ ಮತ್ತು ಚೀನಾ ತ್ರಿಪಕ್ಷೀಯ ಭೇಟಿಯೂ ನಡೆದಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ನಿಗ್ರಹ ಹಾಗೂ ಹವಾಮಾನ ವೈಪರೀತ್ಯ ಕುರಿತು ಮಹತ್ವದ ಮಾತುಕತೆ ನಡೆಸಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next