Advertisement

ವಂಶಾಡಳಿತ ಪ್ರೋತ್ಸಾಹವಿಲ್ಲದ್ದಕ್ಕೆ ಸಂಸದರ ಪುತ್ರರಿಗೆ ಕೊಟ್ಟಿಲ್ಲ ಟಿಕೆಟ್‌

10:41 PM Mar 15, 2022 | Team Udayavani |

ನವದೆಹಲಿ: “ನಾನು ಹೇಳಿದ್ದರಿಂದಲೇ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಂಸದರ ಮಕ್ಕಳಿಗೆ ಸ್ಪರ್ಧಿಸಲು ಟಿಕೆಟ್‌ ಕೊಡಲಿಲ್ಲ’

Advertisement

– ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಮಂಗಳವಾರ ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಅವರು ಈ ಅಂಶ ಪ್ರಸ್ತಾಪಿಸಿದ್ದಾರೆ.

ವಂಶಪಾರಂಪರ್ಯ ಆಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಸ್ಪಷ್ಟಪಡಿಸಿದ ಅವರು, ಅದನ್ನು ಪರಿಗಣಿಸಿಯೇ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಂಸದರ ಮಕ್ಕಳಿಗೆ ಸ್ಪರ್ಧಿಸಲು ಟಿಕೆಟ್‌ ನೀಡದೇ ಇರಲು ನಿರ್ಧರಿಸಲಾಗಿತ್ತು ಎಂದಿದ್ದಾರೆ. “ನಮ್ಮ ಪಕ್ಷದ ಹಲವು ಮಂದಿ ಸಂಸದರು ತಮ್ಮ ಮಕ್ಕಳಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಬೇಕೆಂದು ಕೋರಿಕೆ ಸಲ್ಲಿಸಿದ್ದರು. ಮುಖಂಡರ ಮಕ್ಕಳಿಗೆ ಟಿಕೆಟ್‌ ನೀಡಿದರೆ ಅದು ವಂಶಾಡಳಿತಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಹೀಗಾಗಿ, ನಾನು ಸೂಚಿಸಿದ್ದರಿಂದಲೇ ಅವರಿಗೆ ಟಿಕೆಟ್‌ ನಿರಾಕರಿಸಲಾಯಿತು’ ಎಂದು ಪ್ರಧಾನಿ ಹೇಳಿದ್ದಾರೆ. ವಂಶಾಡಳಿತದ ವಿರುದ್ಧ ಹೋರಾಟ ನಡೆಸುವ ಪಕ್ಷದಲ್ಲಿಯೇ ಅಂಥ ಪದ್ಧತಿ ಇರುವುದು ಒಳ್ಳೆಯದಲ್ಲ ಎಂದು ಪ್ರದಾನಿ ಹೇಳಿದ್ದಾರೆ. ಜತೆಗೆ ಮುಂದೆಯೂ ವಂಶಾಡಳಿತಕ್ಕೆ ಆಸ್ಪದ ಕೊಡುವುದಿಲ್ಲ. ಈ ಕುರಿತ ಎಲ್ಲಾ ಹೊಣೆಗಳನ್ನು ನಾನೇ ಹೊರುತ್ತೇನೆ ಎಂದೂ ಹೇಳಿದ್ದಾರೆ.

ಮುಂದಿನ ವರ್ಷದ ಏಪ್ರಿಲ್‌-ಮೇನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪ್ರಧಾನಿಯವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿಯೂ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿಸುವ ಬಗ್ಗೆ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ, ಮೋದಿ ಅವರ ಹೇಳಿಕೆ ಟಿಕೆಟ್‌ ಹಂಚಿಕೆ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.

Advertisement

100 ಬೂತ್‌ಗಳನ್ನು ಗುರುತಿಸಿ
ಇತ್ತೀಚೆಗಷ್ಟೇ ಚುನಾವಣೆ ಮುಗಿದ ಐದು ರಾಜ್ಯಗಳಲ್ಲಿನ ಪಕ್ಷದ ಸಂಸದರು ಬಿಜೆಪಿಗೆ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿರುವ ಕನಿಷ್ಠ 100 ಬೂತ್‌ಗಳನ್ನು ಗುರುತಿಸಿ, ಅದಕ್ಕೆ ಕಾರಣಗಳನ್ನು ಕಂಡುಹಿಡಿಯಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ.

ಹಾಗೆಯೇ, ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಸುತ್ತಿದ್ದಾಗ ಪ್ರತಿಪಕ್ಷಗಳ ಕೆಲ ಮುಖಂಡರು ಅದನ್ನು ರಾಜಕೀಯಗೊಳಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನವೀನ್‌, ಹರ್ಷಗೆ ಶ್ರದ್ಧಾಂಜಲಿ:
ಸಂಸದೀಯ ಮಂಡಳಿ ಸಭೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ಪ್ರಸಿದ್ಧ ಹಿನ್ನೆಲೆ ಗಾಯಕಿ ದಿ.ಲತಾ ಮಂಗೇಶ್ಕರ್ ಉಕ್ರೇನ್‌ನಲ್ಲಿ ಎಂಬಿಬಿಎಸ್‌ ಕಲಿಯುತ್ತಿದ್ದ ಹಾವೇರಿಯ ನವೀನ್‌ ಶೇಖರಪ್ಪ, ಶಿವಮೊಗ್ಗದಲ್ಲಿ ಹತ್ಯೆಗೀಡಾದ ಭಜರಂಗ ದಳದ ಕಾರ್ಯಕರ್ತ ಹರ್ಷ ಅವರಿಗೆ ನಮನ ಸಲ್ಲಿಸಲಾಯಿತು.

ಪಂಚ ರಾಜ್ಯ ಚುನಾವಣೆ ಮುಕ್ತಾಯಗೊಂಡ ಬಳಿಕ ನಡೆದ ಮೊದಲ ಬಿಜೆಪಿ ಸಂಸದೀಯ ಮಂಡಳಿ ಸಭೆ ಇದಾಗಿದೆ. ಚುನಾವಣೆಯಲ್ಲಿ ಪಕ್ಷ ಜಯ ಗಳಿಸಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಮತ್ತು ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next