ನವದೆಹಲಿ: ಭಾರತದಲ್ಲಿ ಕೋವಿಡ್ 19 ಎರಡನೇ ಅಲೆಯ ಸೋಂಕು ಪ್ರಮಾಣ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದ್ದು, ಕಳೆದ 24ಗಂಟೆಗಳಲ್ಲಿ 53,256 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಇದು ಕಳೆದ 88 ದಿನಗಳ ಬಳಿಕ ವರದಿಯಾದ ಅತೀ ಕಡಿಮೆ ಪ್ರಮಾಣದ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ(ಜೂನ್ 21) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಜೈವಿಕ ಸುರಕ್ಷಾ ವಲಯದಿಂದ ಹೊರಬಂದ ಐವರು ಆಟಗಾರರು
ದೇಶದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ನಿಂದ 1,422 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 7,02,887ಕ್ಕೆ ಇಳಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಮಾಣದ ಸಾವು (605) ವರದಿಯಾಗಿದೆ. ತಮಿಳುನಾಡಿನಲ್ಲಿ ಕೋವಿಡ್ ನಿಂದ 24ಗಂಟೆಯಲ್ಲಿ 182 ಜನರು ಸಾವನ್ನಪ್ಪಿದ್ದಾರೆ.
ಸತತ 39 ದಿನಗಳಿಂದ ದೇಶದಲ್ಲಿ ದಿನಂಪ್ರತಿ ಚೇತರಿಕೆ ಪ್ರಮಾಣ ಹೆಚ್ಚಳವಾಗುತ್ತಿದೆ. ಕಳೆದ 24ಗಂಟೆಯಲ್ಲಿ 78,190 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.96.36ರಷ್ಟು ಹೆಚ್ಚಳವಾಗಿದೆ ಎಂದು ಅಂಕಿಅಂಶ ವಿವರಿಸಿದೆ.
ಕೇರಳದಲ್ಲಿ 11,647 ಪ್ರಕರಣ, ಮಹಾರಾಷ್ಟ್ರದಲ್ಲಿ 9,361 ಕೋವಿಡ್ ಪ್ರಕರಣ, ಆಂಧ್ರಪ್ರದೇಶದಲ್ಲಿ 5,646, ತಮಿಳುನಾಡಿನಲ್ಲಿ 7,817 ಹಾಗೂ ಕರ್ನಾಟಕದಲ್ಲಿ 4,517 ಪ್ರಕರಣ ವರದಿಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,99,35,221ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಈವರೆಗೆ 2,88,44,199 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 7,02,887ಕ್ಕೆ ಇಳಿಕೆಯಾಗಿದೆ. ದೇಶಾದ್ಯಂತ ಈವರೆಗೆ ಕೋವಿಡ್ ನಿಂದ 3,88,135 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.