ದಾವಣಗೆರೆ: ಹಾರರ್, ಥ್ರಿಲರ್, ಸಸ್ಪೆನ್ಸ್ ಕಥೆಯ ಮಹಿಳಾ ಪ್ರಧಾನ ಪಾತ್ರದ ಸದ್ದು…ದಾವಣಗೆರೆ ಒಳಗೊಂಡಂತೆ ರಾಜ್ಯದ್ಯಾಂತ ಮೇ. 18ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ಛಾಯಾಗ್ರಾಹಕ ವೀರೇಶ್ ತಿಳಿಸಿದ್ದಾರೆ.
ವನ್ಯ ಸಂಪತ್ತು… ಉಳಿಸಿ ಎಂಬ ಸಾಮಾಜಿಕ ಕಳಕಳಿಯ ಸಂದೇಶದ ಚಿತ್ರದ ಶೇ. 70ರಷ್ಟು ಚಿತ್ರೀಕರಣ ದಾಂಡೇಲಿ, ಇನ್ನುಳಿದ ಭಾಗ ಬೆಂಗಳೂರು, ಬನ್ನೇರುಘಟ್ಟ, ಮಂಗಳೂರಲ್ಲಿ ನಡೆದಿದೆ. 12 ಚಿತ್ರಗಳಿಗೆ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡಿರುವ ತಾವು ಈ ಚಿತ್ರದಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳಬೇಕಾಯಿತು.
ಎರಡು ಕಿಲೋ ಮೀಟರ್‌ದುದ್ದಕ್ಕೂ ಕ್ಯಾಮೆರಾ ಹೊತ್ತೂಯ್ಯುವುದು, ಮಳೆಯ ಅಬ್ಬರದ ನಡುವೆ ಶೂಟಿಂಗ್ ಮಾಡುವುದು ಕಷ್ಟವಾಗುತ್ತಿತ್ತು. ಚಿತ್ರ ಚೆನ್ನಾಗಿ ಮೂಡಿ ಬಂದಿರುವುದು ಕಷ್ಟಪಟ್ಟಿದ್ದಕ್ಕೆ ಸಾರ್ಥಕ ಎನಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.
ಚಿತ್ರದ ನಾಯಕಿ ನಿಖೀತಾ ಸ್ವಾಮಿ ಮಾತನಾಡಿ, ಸದ್ದು… ಹಾರರ್, ಥ್ರಿಲರ್, ಸಸ್ಪೆನ್ಸ್ ಕಥೆಯ ಚಿತ್ರ. ಅರುಣ್ ನಿರ್ದೇಶನದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತದೆ. ಹಾಗೆಯೇ ಚಿತ್ರದ ನಾಯಕಿಗೆ ವನ್ಯಜೀವಿ ಫೋಟೋಗ್ರಫೀಯಲ್ಲಿ ಆಸಕ್ತಿ ಇರುತ್ತದೆ. ವನ್ಯಜೀವಿಗಳ ಫೋಟೋಗ್ರಫಿಗೆ ತೆರಳಿದ ನಾಯಕಿ ಸುತ್ತವೇ ಚಿತ್ರ ಸಾಗುತ್ತದೆ. ಈ ಚಿತ್ರದಲ್ಲಿ ನಾಯಕ ಇಲ್ಲ. ನಾಯಕಿ ಪಾತ್ರವೇ ಚಿತ್ರದ ಹೈಲೈಟ್ ಎಂದು ತಿಳಿಸಿದರು.
ಅನೇಕರು ಕಾಡಿನಲ್ಲಿ ಪಾರ್ಟಿ ಮಾಡಿ, ತೆಗೆದುಕೊಂಡು ಹೋದ ವಸ್ತುಗಳನ್ನು ಅಲ್ಲಿಯೇ ಬಿಸಾಡುತ್ತಾರೆ. ಅಂತದ್ದರಲ್ಲಿ ಒಂದು ವಸ್ತುವನ್ನು ಸೇವಿಸಿದ ಪ್ರಾಣಿಗಳು ಮತ್ತು ಆದಿವಾಸಿಗಳ ನಡುವೆ ನಡೆಯುವ ಕಥೆ ಹೇಳಲಾಗಿದೆ.
ಶಿಕಾರಿಪುರ ಮೂಲದ ತಾವು ಇನ್‌ಫೋಸಿಸ್‌ನಲ್ಲಿ ಒಂದು ವರ್ಷ ಕೆಲಸ ಮಾಡಿ, ಇದೇ ಮೊದಲ ಬಾರಿಗೆ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿಸಿದರು.
ಮತ್ತೂಬ್ಬ ನಾಯಕಿ ಭಾಗ್ಯ ಮೋಹನ್, ಪ್ರೇಕ್ಷಕರು ಸದ್ದು…ಚಿತ್ರ ನೋಡಿ ಹೊಸಬರಿಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು. ನಟರಾದ ಹರೀಶ್, ಅಶೋಕ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.