Advertisement

Gadaga: ಅನಾಥ ಮಕ್ಕಳಿಗೆ ಆಶ್ರಯ; ಮಕ್ಕಳಿಲ್ಲದವರಿಗೆ ಮಡಿಲು ತುಂಬುವ ಮಹಾಸಂಸ್ಥೆ…

11:42 AM Jul 18, 2023 | Team Udayavani |

ಗದಗ: ಮಕ್ಕಳೆಂದರೆ ಎಂತವರಿಗೂ ಪ್ರೀತಿ ತುಂಬಿ ಬರುತ್ತದೆ. ಆದರೆ ತಂದೆ-ತಾಯಿ ಕಳೆದುಕೊಂಡ, ತಾಯಿಗೆ ಬೇಡವಾದ ಮತ್ತು ವಿವಾಹೇತರ ಸಂಬಂಧದಿಂದ ಜನಿಸಿದ ಶಿಶುಗಳು ಲೋಕದ ಜ್ಞಾನ ಅರಿಯದ ವಯಸ್ಸಿನಲ್ಲಿಯೇ ಅನಾಥವಾಗಿ ಬಿಡುತ್ತವೆ. ಇಲ್ಲೊಂದು ಸಂಸ್ಥೆ ಅಂತಹ ಮಕ್ಕಳ ರಕ್ಷಣೆ, ಪೋಷಣೆ ಜತೆಗೆ ಮಕ್ಕಳಿಲ್ಲದವರಿಗೆ ಮಡಿಲು ತುಂಬುವ ಮಹಾಕಾರ್ಯದಲ್ಲಿ ನಿರತವಾಗಿದೆ.

Advertisement

ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಕಳೆದ 10 ವರ್ಷಗಳಿಂದ ಮಕ್ಕಳಿಲ್ಲದ ದಂಪತಿಗೆ ಕಾನೂನು ಬದ್ಧವಾಗಿ ಅನಾಥ ಮಕ್ಕಳನ್ನು ದತ್ತು ನೀಡುವ ಮೂಲಕ ಮಕ್ಕಳಿಗೆ ಅನಾಥ ಪ್ರಜ್ಞೆ ಹೋಗಲಾಡಿಸಿ, ದತ್ತು ಸ್ವೀಕರಿಸುವ ಪೋಷಕರಿಗೆ ಮಡಿಲು ತುಂಬಿಸಿ ಹೊಸ ಬಂಧುತ್ವವನ್ನು ಕಲ್ಪಿಸಿಕೊಡುತ್ತಿದೆ.

ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದು 2009ರಿಂದ 2013ರವರೆಗೆ ಗದಗ-ಬೆಟಗೇರಿಯಲ್ಲಿ ನಿಧಾನ ಗತಿಯಲ್ಲಿ ಕಾರ್ಯ ಮಾಡುತ್ತ ಬಂದ ಸಂಸ್ಥೆ 2013ರಲ್ಲಿ 9 ಜನ ಉತ್ಸಾಹಿ ಮತ್ತು ಸೇವಾ ಆಸಕ್ತರ ಸಮಿತಿ ರಚಿಸಿಕೊಂಡು ವಿವಿಧ ಕಾರಣಗಳಿಂದ ತ್ಯಜಿಸಲ್ಪಟ್ಟ ಪುಟ್ಟಮಕ್ಕಳನ್ನು ರಕ್ಷಿಸಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಅಂಕೋಲಾ, ಬೆಂಗಳೂರು, ಹಾಸನ, ಶಿವಮೊಗ್ಗ, ನೆರೆ ರಾಜ್ಯದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಾಲ್ಡಾ ಸೇರಿದಂತೆ ಅಮೆರಿಕ, ಸ್ವೀಡನ್‌, ಇಟಲಿ ದೇಶದ ಮಕ್ಕಳಿಲ್ಲದ ದಂಪತಿಗಳಿಗೆ ಈವರೆಗೆ 56 ಮಕ್ಕಳನ್ನು ದತ್ತು ನೀಡಲಾಗಿದೆ.

ಅನಾಥ ಮಕ್ಕಳಿಗೆ ಪೋಷಣೆ: ವಿವಿಧ ಕಾರಣಗಳಿಂದ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಎರಡು ತಿಂಗಳಿಂದ 4 ವರ್ಷದ 3 ಮಕ್ಕಳಿವೆ. ಅವುಗಳ ರಕ್ಷಣೆ, ಪಾಲನೆ, ಪೋಷಣೆಗಾಗಿ 7 ಜನ ಮಾತೆಯರಿದ್ದು, 24×7 ಆರೈಕೆ ಮಾಡುತ್ತಾರೆ. ಜತೆಗೆ ಇಬ್ಬರು ಸಂಯೋಜಕರು
ಕಾರ್ಯ ನಿರ್ವಹಿಸುತ್ತಾರೆ. ಮಕ್ಕಳಿಲ್ಲದವರು ಅರ್ಜಿ ಸಲ್ಲಿಸಿದಾಗ ನಿಯಮಾವಳಿಗಳ ಪ್ರಕಾರ ಕಾನೂನು ಬದ್ಧವಾಗಿ ದತ್ತು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು: ಪೋಸ್ಟ್ ಕಾರ್ಡ್‌ ಅಳತೆಯ ದಂಪತಿಗಳ ಭಾವಚಿತ್ರ,‌ ಪಾನ್‌ ಕಾರ್ಡ್‌, ಜನನ ಪ್ರಮಾಣ ಪತ್ರ, ಮನೆ ವಿಳಾಸ ವಿವರ, ನೌಕರಸ್ಥರಾಗಿದ್ದಲ್ಲಿ ಉದ್ಯೋಗದ ಪ್ರಮಾಣ ಪತ್ರ, ಸ್ವ ಉದ್ಯೋಗದಲ್ಲಿರುವವರು ವಾರ್ಷಿಕ ಆದಾಯ ಪ್ರಮಾಣ ಪತ್ರ, ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಸಲ್ಲಿಸಿದ ದಾಖಲಾತಿ, ದಂಪತಿಗಳ ವೈದ್ಯಕೀಯ ತಪಾಸಣಾ ವರದಿ, ಸಬ್‌ ರಜಿಸ್ಟ್ರಾರ್‌ ಕಚೇರಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ, ವಿಧವೆ ಅಥವಾ ವಿಧುರರಾಗಿದ್ದರೆ ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲಾತಿ, ಕುಟುಂಬದ ಹಿತೈಷಿಗಳಿಂದ ಶಿಫಾರಸು ಪತ್ರ ಸೇರಿದಂತೆ ಇನ್ನಿತರೆ
ದಾಖಲಾತಿಗಳನ್ನು ಸಲ್ಲಿಸಬೇಕು.

Advertisement

ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಹಿನ್ನೆಲೆ:
ಸೇವಾ ಭಾರತಿ ಟ್ರಸ್ಟ್‌ನಡಿ 2009ರಿಂದ ಬಾಡಿಗೆ ಕಟ್ಟಡದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆ 2018ರ ಮಾ.23ರಂದು ತನ್ನ ಸ್ವಂತ ಕಟ್ಟಡದಲ್ಲಿ ಸೇವೆ ಆರಂಭಿಸಿತು. ಕಟ್ಟಡದಲ್ಲಿ ಪ್ರತ್ಯೇಕವಾಗಿ ತೊಟ್ಟಿಲು ಕಂದನ ಕೊಠಡಿ, ಚಿಕಿತ್ಸಾಲಯ ಕೊಠಡಿ, ಮಾತೆಯರ ಕೊಠಡಿ, ಕಾರ್ಯಾಲಯ, ಅಡುಗೆ ಹಾಗೂ ದೇವರ ಕೊಠಡಿ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಹೊಂದಿದೆ. ತೊಟ್ಟಿಲು ಕಂದನ ಕೊಠಡಿ ಮಕ್ಕಳಿಗೆ ಇಷ್ಟವಾಗುವ ಪ್ರಾಣಿಗಳ ಚಿತ್ರಗಳ ಗೋಡೆ ಬರಹಗಳು, ಆಟಿಕೆ ಸಾಮಾನುಗಳ ಜತೆಗೆ ನಂದನವನ ಕಿರು
ಉದ್ಯಾನವನ್ನು ಹೊಂದಿದೆ.

11 ಸ್ಪೆಷಲ್‌ ಕೇರ್‌ ಚೈಲ್ಡ್‌ ಮಾತ್ರ ವಿದೇಶಕ್ಕೆ

ಗದಗನ ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಯಿಂದ ಇದುವರೆಗೆ 11 ಅನಾಥ ಮಕ್ಕಳು ವಿದೇಶಕ್ಕೆ, 45 ಅನಾಥ ಮಕ್ಕಳು ಸ್ವದೇಶದಲ್ಲಿನ ಮಕ್ಕಳಿಲ್ಲದ ಪೋಷಕರು ದತ್ತು ಪಡೆದಿದ್ದಾರೆ. ಅದರಲ್ಲಿ ವಿದೇಶಿ ದಂಪತಿಗಳು ಪಡೆದ 11 ಮಕ್ಕಳು ಸ್ಪೇಷಲ್‌ ಕೇರ್‌ ಚೈಲ್ಡ್‌ಗಳಾಗಿವೆ. ಅಂದರೆ ಮಕ್ಕಳು ಹುಟ್ಟುವಾಗಲೇ ಹೃದಯ ಸಂಬಂಧಿ ಕಾಯಿಲೆ ಸೇರಿ ಹಲವು ನ್ಯೂನತೆಗಳಿರುವ ಮಕ್ಕಳು ಸ್ವದೇಶಿ ದಂಪತಿಗಳು ಅಷ್ಟಾಗಿ ಸ್ವೀಕರಿಸದ ಕಾರಣ ವಿದೇಶಿ ದಂಪತಿಗಳು ಅಂತಹ ಮಕ್ಕಳನ್ನು ದತ್ತು ಪಡೆದು ಪೋಷಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಎರಡು ದಿನದ ಕಂದಮ್ಮ

ಅನಾಥ ಬಡತನಕ್ಕೂ ಇಲ್ಲವೇ ವಿವಾಹ ಪೂರ್ವದಲ್ಲಿನ ಅನೈತಿಕ ಸಂಬಂಧದಿಂದ ಜನಿಸಿದ ಎರಡು ದಿನದ ಕಂದಮ್ಮನನ್ನು ಗದಗ ನಗರದ ಎಪಿಎಂಸಿಯಲ್ಲಿ ಯಾರೋ ಬಿಟ್ಟು ಹೋಗಿದ್ದರು. ಅದನ್ನು ರಕ್ಷಿಸಿ ಕಳೆದ ಎರಡು ತಿಂಗಳಿಂದ ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪಾಲನೆ-ಪೋಷಣೆ ಮಾಡಲಾಗುತ್ತಿದೆ. ಆದ್ದರಿಂದ ಮಕ್ಕಳು ದೈವಸ್ವರೂಪಿಯಾಗಿದ್ದು, ಮಕ್ಕಳನ್ನು
ಎಲ್ಲೆಂದರಲ್ಲಿ ಬಿಟ್ಟು ಹೋಗಬೇಡಿ. ಎಂತಹ ಕಷ್ಟ ಸಂದರ್ಭದಲ್ಲೂ ಮಕ್ಕಳನ್ನು ಪೋಷಣೆ ಮಾಡಿ. ಸಾಧ್ಯವಾಗದಿದ್ದಲ್ಲಿ ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಗೆ ತಂದು ಕೊಡಿ ಎಂದು ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮನವಿ ಮಾಡಿದ್ದಾರೆ.

ಅನಾಥ ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ
ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆ ಅನಾಥ ಮಕ್ಕಳ ರಕ್ಷಣೆಗೆ ಮೊದಲ ಆದ್ಯತೆ ನೀಡಿದೆ. ಪೋಷಕರು ಬಿಟ್ಟು ಹೋದ ಮಕ್ಕಳನ್ನು ದತ್ತು ಸ್ವೀಕಾರ ಸಂಸ್ಥೆಗೆ ತರುವುದರ ಜತೆಗೆ ಸುರಕ್ಷಿತವಾಗಿ ನೋಡಿಕೊಳ್ಳುತ್ತದೆ. ನಿಮಗೆ ಮಕ್ಕಳು ಬೇಡವಾಗಿದ್ದರೆ ಎಲ್ಲೆಂದರಲ್ಲಿ ಬಿಟ್ಟು ಹೋಗದೇ ದತ್ತು ಸ್ವೀಕಾರ ಸಂಸ್ಥೆಗೆ ತಂದು ಕೊಡಿ ಎಂದು ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಜಾಗೃತಿ ಮೂಡಿಸುತ್ತಿದೆ.

ಬಡತನ ಬೇಗೆಯಲ್ಲಿ ಬೆಂದು ಹೋಗಿರುವ ತಂದೆ- ತಾಯಿಗಳು ಹೆತ್ತ ಮಕ್ಕಳನ್ನು ಸಾಕಲು ಅಸಾಧ್ಯವೆಂದು ಮತ್ತು ವಿವಾಹ ಪೂರ್ವದಲ್ಲಿನ ಅನೈತಿಕ ಸಂಬಂಧದಿಂದ ಜನಿಸಿದ ಕರುಳ ಕುಡಿಗಳನ್ನು ಮದುವೆಯಾಗಿ ಮಕ್ಕಳಾಗದೆ ಕೊರಗಿ ಕರುಳಿನ ಕುಡಿಗಾಗಿ ಹಪಹಪಿಸುವ ದಂಪತಿಗಳಿಗೆ ಕಾನೂನು ಬದ್ಧವಾಗಿ ದತ್ತುನೀಡುವ ಮೂಲಕ ಅಲ್ಪಪ್ರಮಾಣದ ಸೇವೆ ಮಾಡುತ್ತಿದ್ದೇವೆ. ಇದರಿಂದ ಮಕ್ಕಳು ಅನಾಥವಾಗುವುದು ತಪ್ಪುತ್ತದೆ. ಮಕ್ಕಳಿಲ್ಲದವರ ಮಡಿಲು ತುಂಬುತ್ತದೆ.
ಮಲ್ಲಿಕಾರ್ಜುನ ಬೆಲ್ಲದ, ಅಧ್ಯಕ್ಷರು,
ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ.

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next