Advertisement

ಬೆಟ್ಟದ ಜೀವ: ಬತ್ತದ ಜೀವನೋತ್ಸಾಹ

09:46 PM Oct 11, 2019 | mahesh |

ಸುಬ್ರಹ್ಮಣ್ಯ: ಅವರದು ಬೆಟ್ಟದ ಮೇಲಿನ ಬದುಕು. ಸುಮಾರು 45 ವರ್ಷಗಳಿಂದ ಗಿರಿಗದ್ದೆಯಲ್ಲೇ ಅವರ ವಾಸ. ನಾಡಿನ ಸ್ಪರ್ಶವಿಲ್ಲದ ಪರಿಸರ ಪ್ರೇಮಿ. ಚಾರಣಕ್ಕೆ ತೆರಳುವ ಆಸಕ್ತರಿಗೆ ಆತಿಥ್ಯ, ಅಶ್ರಯ ಎರಡನ್ನೂ ಒದಗಿಸುವ ಹಿರಿಯ ಜೀವ.

Advertisement

ಕುಮಾರಪರ್ವತಕ್ಕೆ ಚಾರಣ ತೆರಳಿ ಪರಿಸರದ ಸವಿಯುಣ್ಣುವ ಜನರು ಗಿರಿಗದ್ದೆಯಲ್ಲಿರುವ ಮಹಾಲಿಂಗೇಶ್ವರ ಭಟ್ಟರ ಆತಿಥ್ಯಕ್ಕೂ ಮಾರು ಹೋಗುತ್ತಾರೆ. ದಸರಾ ಸರಣಿ ರಜೆಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಜನ ಇಲ್ಲಿಗೆ ಬಂದಿದ್ದರು. ಹೀಗೆ ವರ್ಷದಲ್ಲಿ ಏನಿಲ್ಲವೆಂದರೂ 10 ಸಾವಿರ ಜನ ಭಟ್ಟರ ಮನೆಗೆ ಭೇಟಿ ನೀಡುತ್ತಾರೆ.

ಜಾಲತಾಣದಿಂದ ಸಂಪರ್ಕ
ಮಹಾಲಿಂಗೇಶ್ವರ ಭಟ್ಟರು ಚಾರಣಪ್ರಿಯರಿಗೆ ಚಿರಪರಿಚಿತರು. ಸುಬ್ರಹ್ಮಣ್ಯದಿಂದ 4 ಕಿ.ಮೀ. ದೂರದಲ್ಲಿ, ಕುಮಾರಪರ್ವತದ ದಾರಿಯಲ್ಲಿ ಸಿಗುವ ಗಿರಿಗದ್ದೆಯಲ್ಲಿ ಅವರ ಮನೆಯಿದೆ. ಹೀಗಾಗಿ, ಗಿರಿಗದ್ದೆ ಭಟ್ಟರು ಎಂದೇ ಹೆಸರುವಾಸಿ. ಬೆಟ್ಟದ ಮನುಷ್ಯನಾದರೂ ಸಾಮಾಜಿಕ ಜಾಲತಾಣದ ಮೂಲಕ ಜಗತ್ತಿನ ಸಂಪರ್ಕ ಬೆಳೆಸಿಕೊಂಡಿದ್ದಾರೆ.

ಅದುವರೆಗೆ ಕುಲ್ಕುಂದದಲ್ಲಿದ್ದ ಮಹಾಲಿಂಗೇಶ್ವರ ಭಟ್ಟರು 1974ರಲ್ಲಿ ಗಿರಿಗದ್ದೆಗೆ ಬಂದರು. ಕುಮಾರಪರ್ವತವೇರಲು ಬಂದಿದ್ದ ಅವರು ದಣಿವಾರಿಸಿಕೊಳ್ಳಲು ಕುಳಿತಾಗ ಗಿರಿಮನೆಯಲ್ಲಿ ಮನೆಯೊಂದರ ಕುರುಹು ಕಂಡರು. ಕೆಲವೇ ಸಮಯದಲ್ಲಿ ಕುಟುಂಬ ಸಮೇತ ಇಲ್ಲಿಗೆ ಬಂದು ವಾಸ್ತವ್ಯ ಆರಂಭಿಸಿದರು. ಮಣ್ಣಿನ ಮನೆ ಕೊಟ್ಟಿಗೆ, ಹಟ್ಟಿ ನಿರ್ಮಿಸಿಕೊಂಡು ಏಕಾಂತದ ಬದುಕು ಆರಂಭಿಸಿದರು. ಅಡಿಕೆ ತೋಟ, ತರಕಾರಿ ಕೃಷಿ ಮಾಡುತ್ತ, ಪರ್ವತ ಚಾರಣಕ್ಕೆ ತೆರಳುವ ಚಾರಣಿಗರಿಗೂ ಹತ್ತಿರವಾದರು.

ಮಹಾಲಿಂಗೇಶ್ವರ ಭಟ್ಟರ ಮಕ್ಕಳೂ ಗಿರಿಗದ್ದೆ ವಾಸ ಇಷ್ಟಪಟ್ಟರು. ಇಬ್ಬರು ಸಹೋದರರ ಕುಟುಂಬಗಳೂ ಇವೆ. ಭಟ್ಟರ ಅತ್ತೆಯೂ ಇಲ್ಲಿದ್ದಾರೆ. ಕೃಷಿ ಕಾಯಕದ ಭಟ್ಟರ ಮನೆಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳಿವೆ. ನಿತ್ಯ 20-25 ಲೀ. ಹಾಲನ್ನು ಸುಬ್ರಹ್ಮಣ್ಯಕ್ಕೆ ತರುತ್ತಾರೆ. ಮಲೆನಾಡು ಗಿಡ್ಡ ಜಾತಿಯ ಗೋವುಗಳು ಬಿಸಿಲಿಗೆ ಮೈಯೊಡ್ಡಿ, ಹುಲ್ಲು ತಿಂದು ಕೊಡುವ ಹಾಲು ಔಷಧಕ್ಕೂ ಬಳಕೆಯಾಗುತ್ತದೆ. ಅಕ್ಕಿ, ಬೇಳೆ, ಹಾಲು ಇತ್ಯಾದಿಗಳನ್ನು ಹೊತ್ತುಕೊಂಡು ಅನಾಯಾಸವಾಗಿ ಹತ್ತಿಳಿಯುತ್ತಾರೆ. ಚಾರಣಿಗರು ಬರುವ ದಿನಗಳಲ್ಲಿಯೂ ಸಾಮಾನು ಹೊತ್ತುಕೊಂಡೇ ಬೆಟ್ಟವೇರಬೇಕು. ಆದರೂ ಇದನ್ನೆಲ್ಲ ಅವರು ತಪಸ್ಸಿನಂತೆ ಮಾಡುತ್ತಿದ್ದಾರೆ. ಊಟ, ತಿಂಡಿಗೆ ನಿರ್ದಿಷ್ಟ ಮೊತ್ತವನ್ನು ಪಡೆಯುತ್ತಾರೆ. ಅಗತ್ಯವಿರುವವರಿಗೆ ವಸತಿ ಇತ್ಯಾದಿ ವ್ಯವಸ್ಥೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

Advertisement

 ಖುಷಿ ನೀಡಿದೆ
ಕಾಡಿನ ಬದುಕು ಖುಷಿ ನೀಡಿದೆ. ಚಾರಣಕ್ಕೆ ಬರುವ ತಂಡಗಳ ಜತೆಗೆ ನಾನೂ ವಾರಕ್ಕೆ ಒಂದು ಸಲವಾದರೂ ಕುಮಾರಪರ್ವತ ಏರುತ್ತೇನೆ. ನವರಾತ್ರಿ ಸಂದರ್ಭದಲ್ಲಿ 25 ಜನರ ತಂಡದೊಂದಿಗೆ ಹೋಗಿ ಬಂದಿದ್ದೆ. ಚಾರಣಿಗರ ಆತಿಥ್ಯ ವಹಿಸುವುದು ಪುಣ್ಯದ ಕೆಲಸ. ಅವರ ಊಟ, ತಿಂಡಿಗಳ ಬೇಡಿಕೆಯನ್ನು ಹೊರೆಯಾಗದಂತೆ ಪೂರೈಸುವುದರಲ್ಲೇ ಸಾರ್ಥಕತೆ ಕಾಣುತ್ತಿದ್ದೇವೆ.
– ಮಹಾಲಿಂಗೇಶ್ವರ ಭಟ್‌, ಗಿರಿಗದ್ದೆ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next