ಹುಣಸೂರು: ಇತ್ತೀಚೆಗೆ ನಿಧನರಾದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಸ್ವಾಳು ಶಂಕರೇಗೌಡ ಹಾಗೂ ಗೌರವಾಧ್ಯಕ್ಷ ತಟ್ಟೆಕೆರೆ ನಾಗಣ್ಣಚಾರ್ ಅವರಿಗೆ ರೈತ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರ ಭಾವಚಿತ್ರಕ್ಕೆ ಪ್ರಗತಿಪರ ಸಂಘಟನೆಗಳ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಸಮಸ್ಯೆ ಪರಿಹಾರಕ್ಕೆ ಶ್ರಮ: ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಇಬ್ಬರು ರೈತ ಸಂಘದ ಆಸ್ತಿಯಾಗಿದ್ದವರು. ಯಾವುದೇ ಚಳವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ನೊಂದವರಿಗೆ ಧ್ವನಿಯಾಗಿದ್ದರು.
ನಾಗಣ್ಣಚಾರ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಹೋರಾಟದ ಬದುಕನ್ನೇ ನಡೆಸಿದರೆ, ಅಸ್ವಾಳು ಶಂಕರೇಗೌಡರು ಪತ್ರಕರ್ತರಾಗಿಯೂ ತಮ್ಮ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಆಸಕ್ತಿವಹಿಸಿ ಪರಿಹಾರಕ್ಕೆ ಶ್ರಮಿಸುತ್ತಿದ್ದರು. ಇವರಿಬ್ಬರ ಸಾವು ರೈತಸಂಘಕ್ಕಷ್ಟೇ ಅಲ್ಲದೆ ತಾಲೂಕಿಗೂ ನಷ್ಟವಾಗಿದೆ ಎಂದರು.
ಸಂಘಟನೆಯ ಚತುರರು: ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಾತನಾಡಿ, ಸಂಘಟನೆ ಚತುರರಾಗಿದ್ದ ಇವರಿಬ್ಬರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು. ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿ, ಸಂಘಕ್ಕೆ ಹಾಗೂ ಯಾವುದೇ ಚಳವಳಿಗೆ ಸ್ಪೂರ್ತಿ ಸೆಲೆಯಾಗಿದ್ದ ಇಬ್ಬರು ಹೋರಾಟಗಾರರನ್ನು ಕಳೆದುಕೊಂಡು ಸಂಘ ಬಡವಾಗಿದೆ ಎಂದರು.
ನೊಂದವರ ಧ್ವನಿಯಾಗಿದ್ದರು: ಪ್ರಗತಿಪರ ಸಂಘಟನೆ ಮುಖಂಡ ಹರಿಹರ ಆನಂದಸ್ವಾಮಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಅವರ ನೇತೃತ್ವದ ರೈತ ಸಂಘದ ಚಳವಳಿ ಸಂಘಟನೆಯಲ್ಲಿ ಹೆಜ್ಜೆ ಹಾಕಿರುವ ಇವರು ಅಪರೂಪದ ವ್ಯಕ್ತಿತ್ವ ಹೊಂದಿದವರೆಂದರೆ, ಮತ್ತೋರ್ವ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ, ರೈತ ಮತ್ತು ದಲಿತ ಸಂಘಟನೆಗಳು ನೊಂದವರ ದನಿಯಾಗಿದ್ದು, ಇಂತಹ ಸಂಘಟನೆಯಲ್ಲಿ ಕಾರ್ಯನಿರ್ವಹಿಸಿ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಂದರು.
ಸಂಘಟನೆಗಳ ಬೆಂಬಲ: ದಲಿತ ಮುಖಂಡ ನಿಂಗರಾಜಮಲ್ಲಾಡಿ, ನೋವುಂಡವರು ಒಗ್ಗಟ್ಟಾಗಿ ಆ ಮೂಲಕ ರಾಜಕೀಯ ನಾಯಕತ್ವ ಪಡೆಯುವ ಗುರಿಯಾಗಿಸಿಕೊಳ್ಳಬೇಕೆಂದು ಆಶಿಸಿದರು. ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್, ಆದಿವಾಸಿ ಚಳವಳಿಗೆ ಎಲ್ಲಾ ಸಂಘಟನೆಗಳು ಬೆಂಬಲ ನೀಡಿದ್ದು, ಮತ್ತೆ ಒಂದಾಗುವುದು ಅತ್ಯವಶ್ಯವೆಂದರು.
ಸಭೆಯಲ್ಲಿ ಪ್ರಗತಿಪರ ಸಂಘಟನೆ ಮುಖಂಡರಾದ ಹರಿಹರ ಆನಂದಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಬಲ್ಲೇನಹಳ್ಳಿ ಕೆಂಪರಾಜ್, ಕುನ್ನೇಗೌಡ, ನಿಲುವಾಗಿಲು ಪ್ರಭಾಕರ್, ವಿನೋಬಕಾಲೋನಿ ಗಣೇಶ್, ಕಿರಿಜಾಜಿ ಗಜೇಂದ್ರ ಮಾತನಾಡಿದರು. ತಂಬಾಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಕೆ.ಆರ್.ನಗರ ತಾಲೂಕು ರೈತಸಂಘದ ಅಧ್ಯಕ್ಷ ಮಲ್ಲೇಶ್, ಮುಖಂಡರಾದ ಮಂಜುನಾಥ ಅರಸ್, ಬಸವರಾಜು, ರಾಮಕೃಷ್ಣೇಗೌಡ, ನಟರಾಜ್, ಧನಂಜಯ ಮತ್ತಿತರರಿದ್ದರು.