ಜೋಯಿಡಾ: ಶಾಲೆ ಕಲಿಯಬೇಕೆಂದರೆ ಅಪಾಯದ ಪರಿಸ್ಥಿತಿಯನ್ನೂ ಲೆಕ್ಕಿಸದೆ ಹಿನ್ನೀರಿನಲ್ಲಿ ದೋಣಿ ಮೂಲಕ ದಾಟಬೇಕು….! ಇಲ್ಲಾ ಶಾಲೆಯಿಂದ ವಂಚಿತರಾಗಿ ಮನೆಯಲ್ಲಿ ಉಳಿಯಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಶಾಲೆ ಕಲಿಯಬೇಕೆಂಬ ಹೆಬ್ಬಯಕೆ ಅಸುಳ್ಳಿ ಗ್ರಾಮದ ಮಕ್ಕಳದ್ದು.
ಬಾಜಾರಕೊಣಂಗ ಗ್ರಾಪಂ ವ್ಯಾಪ್ತಿಯ ಕಿಂದಳೆ ಹಾಗೂ ಅಸುಳ್ಳಿ ಗ್ರಾಮಕ್ಕೆ ಸೇರಿ ಮಧ್ಯಂತರದ ಸ್ಥಳದಲ್ಲಿ ಈ ಕಿ.ಪ್ರಾ. ಶಾಲೆ ಇದೆ. ಸರಕಾರಿ ಕಟ್ಟಡವೂ ಇಲ್ಲದೆ ಕೃಷಗೊಂಡ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಈ ಶಾಲೆಗೆ ಹೋಗಲು ಅಸುಳ್ಳಿ ಗ್ರಾಮದ ಮಕ್ಕಳಿಗೆ ಮಳೆಗಾದಲ್ಲಿ ಮಾರ್ಗ ಮಧ್ಯದ ಹಳ್ಳ ಸೂಪಾ ಹಿನ್ನೀರಿನಿಂದ ತುಂಬಿಕೊಳ್ಳುತ್ತಿದ್ದು, ದೋಣಿ ಪ್ರಯಾಣ ಅನಿವಾರ್ಯವಾಗಿದೆ.
ಸೂಪಾ ಹಿನ್ನೀರಿನಿಂದ ತುಂಬಿಕೊಳ್ಳುವ ಇಲ್ಲಿನ ಹಳ್ಳವನ್ನು ಸುಮಾರು 100 ಮೀ. ದೂರದವರೆಗೆ ದೋಣಿ ಮೂಲಕ ದಾಟಿ ಸಾಗಬೇಕಿದೆ. ಈ ಹಳ್ಳ ನೋಡಲು ಮನೋಹರವಾಗಿ ಕಂಡರೂ ಇದರ ಆಳ, ಹಿನ್ನೀರಿನ ಸೆಳೆತಕ್ಕೆ ಸಾಮಾನ್ಯ ಜನರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ. ಇಂತಹ ಹಳ್ಳವನ್ನು ಇಲ್ಲಿನ ಶಾಲಾ ಮಕ್ಕಳು ಮಳೆಗಾಲದಲ್ಲಿ ಪ್ರತಿನಿತ್ಯ ಅಸುರಕ್ಷಿತ ದೋಣಿ ಮೂಲಕ ಹರಸಾಹಸ ಪಟ್ಟು ಪಯಣಿಸಬೇಕಿದೆ. ಪ್ರತಿವರ್ಷ ಈ ಗ್ರಾಮದ ಮಕ್ಕಳಿಗೆ ಇದೆ ವ್ಯಥೆಯಾಗಿದೆ.
ಕಾಯಂ ಶಿಕ್ಷಕರಿಲ್ಲದೆ ಗೌರವ ಶಿಕ್ಷಕರೇ ಕಾರ್ಯನಿರ್ವಹಿಸುವ ಈ ಶಾಲೆಯಲ್ಲಿ ಇಲಾಖೆ ದಾಖಲೆಯಲ್ಲಿ ಹತ್ತು ಮಕ್ಕಳಿದ್ದಾರೆ. ಈ ಮಕ್ಕಳ ಸಂದಿಗ್ಧ ಪರಿಸ್ಥಿತಿಗೆ ಜವಾಬ್ದಾರಿ ಮರೆತ ಕೆಪಿಸಿ ಹಾಗೂ ಶಿಕ್ಷಣ ಇಲಾಖೆ ನಡೆ ಕಾರಣವಾಗಿದೆ. ಈ ಅವಸ್ಥೆ ಕುರಿತು ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಹೇಳುತ್ತಾ ಬಂದರೂ ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಅಸುರಕ್ಷಿತ ಬೋಟ್ ಪ್ರಯಾಣ: ಪ್ರಯಾಣಕ್ಕೂ ಮೊದಲು ಬೋಟ್ ಸುರಕ್ಷಿತವಾಗಿದೆಯೇ, ಲೈಫ್ ಜಾಕೆಟ್ ಬಳಸಲಾಗುತ್ತಿದೆಯೇ ಎನ್ನುವುದು ಬಹುಮುಖ್ಯವಾಗಿದೆ. ಆದರೆ ನಿತ್ಯ ಮಕ್ಕಳನ್ನು ಪಯಣಿಸುವ ಈ ಬೋಟ್‌ನಲ್ಲಿ ಯಾವುದೇ ಸುರಕ್ಷಿತ ಉಪಕರಣಗಳು ಇಲ್ಲ. ಇದು ಸ್ಥಳೀಯ ಆಡಳಿತ ಹಾಗೂ ಸಂಬಂಧಿಸಿದ ಇಲಾಖೆ ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ ಧೋರಣೆ ತಳೆದಿರುವುದು ಕಂಡು ಬರುತ್ತದೆ.
ಇಂತಹ ಅಪಾಯರ ದೋಣಿ ಪಯಣದಲ್ಲಿ ಏನೂ ಅರಿಯದ ಮುಗ್ಧ ಶಾಲ ಮಕ್ಕಳಿಗೆ ಅಪಾಯ ಸಂಭವಿಸಿದರೆ ಅದಕ್ಕೆ ಜವಾಬ್ದಾರರ್ಯಾರು…?. ಅಲ್ಲಿ ನಿಷ್ಠೆಯಿಂದ ಅಕ್ಷರ ಕಲಿಸಲು ಮುಂದೆ ಬಂದಿರುವ ಗೌರವ ಶಿಕ್ಷಕರೇ ಅಥವಾ ಜವಾಬ್ದಾರಿ ಮರೆತ ಇಲಾಖೆಯೇ ಎನ್ನುವುದನ್ನು ಸಮಾಜಕ್ಕೆ ಶಿಕ್ಷಣಾಧಿಕಾರಿಗಳು ಉತ್ತರಿಸಬೇಕಿದೆ.