ಕ್ಷುದ್ರ ಗ್ರಹವೊಂದು (ಎನ್‌ಇಎ) ಇತ್ತೀಚೆಗೆ ಭೂಮಿಯ ಸಮೀಪದಿಂದ ಹಾದು ಹೋಗಿದೆ. ಇಂಥ ಅನೇಕ ಕ್ಷುದ್ರ ಗ್ರಹಗಳು ಭೂಗ್ರಹದ ಹತ್ತಿರದಲ್ಲೇ ಹಾದು ಹೋಗುತ್ತಿರುತ್ತವೆ. ಆದರೆ, ಮೊನ್ನೆ ಹಾದು ಹೋದ ಕ್ಷುದ್ರಗ್ರಹ ಅತಿ ವೇಗದಲ್ಲಿ ಸಾಗಿ ಹೋಗುವ ಮೂಲಕ ವಿಜ್ಞಾನಿಗಳ ಗಮನ ಸೆಳೆದಿದೆ. ಪ್ರತಿ ಗಂಟೆಗೆ 2,950 ಕಿ.ಮೀ. ವೇಗದಲ್ಲಿ ಸಾಗಿ ಹೋಗುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಜೊತೆಗೆ, ವಿಜ್ಞಾನಿಗಳಲ್ಲಿ ಹೊಸ ಭೀತಿಯನ್ನೂ ಹುಟ್ಟುಹಾಕಿದೆ!
ಕ್ಷುದ್ರಗ್ರಹದ ವಿನ್ಯಾಸ
ಆ ಕ್ಷುದ್ರ ಗ್ರಹಕ್ಕೆ ಆ್ಯಸ್ಟ್ರಾಯ್ಡ 2020 ಕ್ಯೂ.ಜಿ. ಎಂದು ಹೆಸರಿಡಲಾಗಿದೆ. ಸುಮಾರು 9ರಿಂದ 19 ಅಡಿ ಉದ್ದವಿರುವ ಅದು ಹೆಬ್ಬಂಡೆ ಮಾದರಿಯಲ್ಲಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಇಷ್ಟು ವೇಗವಾಗಿ ಬರುವ ಕ್ಷುದ್ರಗ್ರಹಗಳು ಭೂಮಿಯ ಹತ್ತಿರಕ್ಕೆ ಬರುವವರೆಗೂ ವಿಜ್ಞಾನಿಗಳ ಕಣ್ಣಿಗೆ ಬೀಳುವುದಿಲ್ಲ. ಒಮ್ಮೆ ಅವರು ಭೂಮಿಯ ವಾತಾವರಣ ಪ್ರವೇಶಿಸಿದ ನಂತರ ಗಾಳಿಯ ಕಣಗಳ ತಿಕ್ಕಾಟಕ್ಕೊಳಗಾಗಿ ಬೆಂಕಿಯ ಉಂಡೆಗಳಂತೆ ಉರಿದು ಸಾಗಿ ಹೋಗುತ್ತವೆ. ಆ್ಯಸ್ಟ್ರಾಯ್ಡ 2020 ಕ್ಯೂ.ಜಿ. ಕೂಡ ಹಾಗೆಯೇ ಸಾಗಿ ಹೋಗಿದೆ.
ಆ್ಯಸ್ಟ್ರಾಯ್ಡ 2020 ಕ್ಯೂ.ಜಿ. ವಿಶೇಷವೇನು?
ತನ್ನ ವೇಗದಿಂದಾಗಿಯೇ ಆ್ಯಸ್ಟ್ರಾಯ್ಡ 2020 ಈ ರೀತಿ ಗಮನ ಸೆಳೆದಿಲ್ಲ. ಇಷ್ಟು ವೇಗ ವಾಗಿ ಬರುವ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸಿದರೆ ಏನು ಗತಿ ಎಂಬ ಚಿಂತೆ ವಿಜ್ಞಾನಿಗಳನ್ನು ಕಾಡುತ್ತಿದೆ. ಮೊದಲ ಹೇಳಿದಂತೆ, ಅವು ಭೂಮಿಗೆ ಹತ್ತಿರಕ್ಕೆ ಬಂದಾಗ ಮಾತ್ರ ಕಾಣಸಿಗುತ್ತವೆ. ಹಾಗಾಗಿ, ನೋಡ ನೋಡುತ್ತಿದ್ದಂತೆ ಭೂಮಿಗೆ ಅಪ್ಪಳಿಸಿದರೆ ಹೇಗೆ ಎಂಬ ಭೀತಿ ವಿಜ್ಞಾನಿಗಳನ್ನು ಕಾಡಲಾರಂಭಿಸಿದೆ. ಹಾಗಾಗಿ, ಅಂಥ ಕ್ಷುದ್ರಗ್ರಹಗಳ ವೇಗವನ್ನು ಗ್ರಹಿಸಿ ಅವು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳನ್ನು ಮೊದಲೇ ಲೆಕ್ಕಹಾಕಿ, ಅವನ್ನು ಛಿದ್ರಗೊಳಿಸುವಂಥ ತಂತ್ರಜ್ಞಾನದ ಅವಶ್ಯಕತೆಯನ್ನು ವಿಜ್ಞಾನಿಗಳು ಮನಗಂಡಿದ್ದಾರೆ. ಹಾಗಾಗಿಯೇ, ಆ್ಯಸ್ಟ್ರಾಯ್ಡ 2020ಯ ಮೇಲೆ ಅಧ್ಯಯನ ಹಾಗೂ ಅಂಥ ಕ್ಷುದ್ರಗ್ರಹಗಳನ್ನು ನಿಗ್ರಹಿಸುವ ಹೊಸ ತಂತ್ರಜ್ಞಾನ ಕುರಿತಾದ ಸಂಶೋಧನೆಗಳು ಆರಂಭವಾಗಿವೆ.