ನಾಲ್ಕು ವರ್ಷಗಳ ಹಿಂದೆ ಕೋಟ್ಯಂತರ ಮಂದಿಯ ಸಾವಿಗೆ ಕಾರಣವಾಗಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾ ಸಾಂಕ್ರಾಮಿಕದಿಂದ ಪಾರಾಗಲು ವ್ಯಾಪಕವಾಗಿ ಬಳಕೆಯಾಗಿದ್ದ ಕೋವಿಶೀಲ್ಡ್ ಲಸಿಕೆಯು ಮಾರಣಾಂತಿಕ ಅಡ್ಡ ಪರಿಣಾಮಕ್ಕೆ ಕಾರಣವಾಗಬಲ್ಲುದಾಗಿದೆ ಎಂದು ಸ್ವತಃ ಲಸಿಕೆ ತಯಾರಿಕ ಕಂಪೆನಿಯಾದ ಆಸ್ಟ್ರಾಜೆನಿಕಾ ಲಂಡನ್ ಹೈಕೋರ್ಟ್‌ಗೆ ತಿಳಿಸಿದೆ.
ಆಸ್ಟ್ರಾಜೆನಿಕಾ ಕಂಪೆನಿಯ ಈ ಹೇಳಿಕೆ, ಕೊರೊನಾ ನಿರೋಧಕ ಲಸಿಕೆ ಪಡೆದವರ ಆತಂಕಕ್ಕೆ ಕಾರಣವಾಗಿದ್ದರೆ ಈ ವಿಷಯದಲ್ಲಿ ಇಡೀ ವಿಶ್ವದ ಆರೋಗ್ಯ ವ್ಯವಸ್ಥೆ ಹಾಗೂ ಸರಕಾರಗಳ ನಿರ್ಲಕ್ಷ್ಯ ಧೋರಣೆ ಕೂಡ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.
ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮದ ಬಗೆಗೆ ಈ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಲೇ ಬಂದಿವೆಯಾದರೂ ಇದು ಇಷ್ಟೊಂದು ಗಂಭೀರ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ ಎಂಬುದನ್ನು ಯಾವುದೇ ವೈದ್ಯಕೀಯ ಸಂಶೋಧನ ಸಂಸ್ಥೆಗಳಾಗಲಿ, ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಬಹಿರಂಗ ಪಡಿಸಿರಲಿಲ್ಲ. ಈ ಬಗ್ಗೆ ಮೂರೂವರೆ ವರ್ಷಗಳಿಂದ ಅನುಮಾನಗಳು, ಪ್ರಶ್ನೆಗಳು ಏಳುತ್ತಲೇ ಬಂದಿವೆಯಾದರೂ ಸರಕಾರ ಮತ್ತು ವೈದ್ಯಕೀಯ ಸಂಶೋಧನ ಸಂಸ್ಥೆಗಳು ಇದನ್ನು ನಿರಾಕರಿಸುತ್ತಲೇ ಬಂದಿದ್ದವು.
ಆಸ್ಟ್ರಾಜೆನಿಕಾ ಸಂಸ್ಥೆ ಮತ್ತು ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಲಸಿಕೆಯನ್ನು ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಿಸಲಾಗಿತ್ತು. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ತೀವ್ರತೆ ಅಧಿಕವಾಗಿದ್ದ ಸಂದರ್ಭದಲ್ಲಿ ಕೋಟ್ಯಂತರ ಮಂದಿಗೆ ಈ ಲಸಿಕೆಯನ್ನು ಉಚಿತವಾಗಿ ನೀಡಲಾಗಿತ್ತು. ಬಹುತೇಕರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರಲ್ಲದೆ ಸರಕಾರದ ಸಲಹೆಯಂತೆ ಮೂರನೇ ಡೋಸ್ ಲಸಿಕೆಯನ್ನು ಕೂಡ ಭಾರೀ ಸಂಖ್ಯೆಯ ಜನರು ಪಡೆದುಕೊಂಡಿದ್ದರು.
ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆಯೇ ದೇಶ ಮಾತ್ರವಲ್ಲದೆ ವಿಶ್ವದ ಹಲವೆಡೆ ಜನರ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಿ ಜನರಲ್ಲಿ ಭೀತಿ ಮೂಡಿಸಿತ್ತು. ಅದರಲ್ಲೂ ಮುಖ್ಯವಾಗಿ ಯುವಜನರು ಹೃದಯಾಘಾತ, ಮೆದುಳಿನ ಆಘಾತ, ಶ್ವಾಸ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪುತ್ತಿದ್ದುದು ಸಾಮಾನ್ಯವಾಗಿತ್ತು. ಈ ಬಗ್ಗೆ ಅಲ್ಲೊಂದು ಇಲ್ಲೊಂದು ಎಂಬಂತೆ ಅಧ್ಯಯನ, ಸಂಶೋಧನೆಗಳು ನಡೆದುವಾದರೂ ಅವೆಲ್ಲವೂ ಈ ಹಠಾತ್ ಸಾವಿಗೂ ಕೊರೊನಾ ನಿರೋಧಕ ಲಸಿಕೆಗೂ ಸಂಬಂಧವಿಲ್ಲ ಎಂದು ಸಾರಿದ್ದವು. ಸರಕಾರ ಕೂಡ ಇದೇ ವಾದವನ್ನು ಮುಂದಿಟ್ಟು ಸಮರ್ಥಿಸಿಕೊಳ್ಳುತ್ತಲೇ ಬಂದಿತ್ತು. ಈಗ ಆಸ್ಟ್ರಾಜೆನಿಕಾ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯ ಪ್ರಕಾರ ಕೋವಿಶೀಲ್ಡ್ ಲಸಿಕೆಯಿಂದ ಅಪರೂಪದ ಸನ್ನಿವೇಶಗಳಲ್ಲಿ ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್(ಟಿಎಸ್‌ಎಸ್) ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದೆ. ಈ ಸಮಸ್ಯೆ ಕಾಣಿಸಿಕೊಂಡಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ರಕ್ತ ಕಣಗಳ ಕುಸಿತದಂತಹ ಗಂಭೀರ ಸಮಸ್ಯೆಗಳು ಬಾಧಿಸಿ, ಪ್ರಾಣಕ್ಕೇ ಸಂಚಕಾರ ತಂದೊಡ್ಡುವ ಸಾಧ್ಯತೆ ಇರುತ್ತದೆ.
ಆರೋಗ್ಯ ಮತ್ತು ಔಷಧ ಸಂಬಂಧಿ ಸಂಶೋಧನೆಗಳ ಸಂದರ್ಭದಲ್ಲಿ ಜನರ ಆರೋಗ್ಯ ಸುರಕ್ಷೆಗೆ ಮೊದಲ ಆದ್ಯತೆ ನೀಡಬೇಕೇ ಹೊರತು ಇದು ತಾತ್ಕಾಲಿಕ ಉಪಶಮನದ ಪ್ರಕ್ರಿಯೆಯಾಗಿ ಮತ್ತೂಂದು ಆರೋಗ್ಯ ಸಮಸ್ಯೆಗೆ ಕಾರಣವಾಗಬಾರದು. ಈ ವಿಷಯದಲ್ಲಿ ಪ್ರತಿಷ್ಠೆ, ರಾಜಕೀಯ, ರಾಜಿ ಸಲ್ಲದು. ಅಷ್ಟು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಇಂತಹ ಅಚಾತುರ್ಯಗಳು ಅಕ್ಷಮ್ಯ.
ಒಟ್ಟಾರೆ ಈ ಬೆಳವಣಿಗೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆಯಲ್ಲದೆ ವೈದ್ಯಕೀಯ ಲೋಕಕ್ಕೆ ಬಲುದೊಡ್ಡ ಸವಾಲು ಎದುರಾಗಿದೆ. ಕೊರೊನಾ ಸೋಂಕಿನಿಂದ ಬಚಾವ್ ಆಗಲು “ಬೀಸೋ ದೊಣ್ಣೆಯಿಂದ ಪಾರಾದರೆ ಸಾಕು’ ಎಂಬ ನೀತಿಯನ್ನು ತನ್ನದಾಗಿಸಿಕೊಂಡಿದ್ದ ವೈದ್ಯಕೀಯ ಲೋಕ ಮತ್ತು ಸರಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ಕೊರೊನಾ ನಿರೋಧಕ ಲಸಿಕೆಯ ಅಡ್ಡ ಪರಿಣಾಮ ಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಭವಿಷ್ಯದಲ್ಲಿ ಇಂತಹ ಘನಘೋರ ಪ್ರಮಾದಗಳಾಗದಂತೆ ಮುಂಜಾಗ್ರತೆ ವಹಿಸಬೇಕಿದೆ.