ಕುಷ್ಟಗಿ: ಬೇಸಿಗೆಯಲ್ಲಿ ನೀರಿಲ್ಲದೇ ಭಣಗುಡುವ ಕೆರೆಗಳಿಗೆ ಕೃಷ್ಣಾ ನದಿ ನೀರು ಆಸರೆಯಾಗಲಿದೆ. ಮಳೆ ಕೈಕೊಟ್ಟರೂ, ಕೆರೆ ತುಂಬುವ ಯೋಜನೆಯಲ್ಲಿ ತಾಲೂಕಿನ 15 ಕೆರೆಗಳಿಗೆ ಕೃಷ್ಣಾ ನದಿ ನೀರು ತುಂಬಿಸುವ ಭರವಸೆ ಮೂಡಿಸಿದೆ. ಆದರೆ ಕೆಲವೆಡೆ ಕೆಲ ರೈತರ ತಕರಾರಿನಿಂದ ಕಾಮಗಾರಿಗೆ ಹಿನ್ನಡೆಯಾಗಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕುಷ್ಟಗಿ ತಾಲೂಕಿನ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣಾ ನದಿಯ ಪ್ರವಾಹದ ಹೆಚ್ಚುವರಿ ನೀರನ್ನು ಬಲದಂಡೆಯ ಕಾಲುವೆಗೆ ಹರಿಸಿ, ಏತ ನೀರಾವರಿ ಯೋಜನೆಯ ಮೂಲಕ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬಿಸುವ ಮಹಾತ್ವಾಕಾಂಕ್ಷಿ ಯೋಜನೆ ಇದು. ಕಳೆದ 17ನೇ ಆಗಸ್ಟ್, 2020ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಕಾಮಗಾರಿ ಚಾಲನೆ ನೀಡಿದ್ದರು.
4.98 ಕೋಟಿ ರೂ. ಯೋಜನಾ ವೆಚ್ಚದ ಈ ಯೋಜನೆ ಆಲಮಟ್ಟಿ ಜಲಾಶಯದ ಕೆಳಭಾಗದ 2.55 ಕ್ಯೂಸೆಕ್ಸ್ (ಕ್ಯೂಬಿಕ್ ಮೀಟರ್ ಪರ್ ಸೆಕೆಂಡ್) ನೀರನ್ನು ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ 15 ಕೆರೆಗಳಿಗೆ ಹರಿಸಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹುಲ್ಲಳ್ಳಿ ಬಳಿ ಕೃಷ್ಣ ನದಿಯ ಬಲದಂಡೆಯ ಭಾಗದ 1,919 ಅಶ್ವಶಕ್ತಿ 5 ಕಾರ್ಯನಿರತ ಹಾಗೂ 1 ಹೆಚ್ಚುವರಿ ಸೇರಿದಂತೆ ಒಟ್ಟು 6 ಪಂಪ್‌ಗ್ಳ ಮೂಲಕ 1,250 ಮೀ. ವ್ಯಾಸ 41,724 ಕಿ.ಮೀ. ಉದ್ದದ ಏರು ಕೊಳವೆ ಮಾರ್ಗದ ಮೂಲಕ ತಾಲೂಕಿನ ಕಡೇಕೊಪ್ಪ ಗ್ರಾಮದ ಹತ್ತಿರ ಮಧ್ಯಂತರ ವಿತರಣಾ ತೊಟ್ಟಿಗೆ ನೀರು ಹರಿಸುವುದು ಉದ್ದೇಶಿತ ಯೋಜನೆಯಾಗಿದೆ. ಈಗಾಗಲೇ ಹುನಗುಂದ ತಾಲೂಕಿನ ಹುಲ್ಲಳ್ಳಿ ಹಾಗೂ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಪಂಪ್‌ಹೌಸ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನೂ ವಿದ್ಯುತ್ ಸಂಪರ್ಕ ಬಾಕಿ ಇದೆ. ಮುಂಬೈನ ಇಂಡಿಯನ್ ಹ್ಯೂಮ್ ಪೈಪ್ ಸಂಸ್ಥೆ ಗುತ್ತಿಗೆ ವಹಿಸಿಕೊಂಡಿದ್ದು, ಪೈಪ್‌ಲೈನ್ ಕಾರ್ಯ ಭರದಿಂದ ಸಾಗಿದೆ. ಕೆರೆಯ ತುಂಬುವ ಯೋಜನೆಯನ್ನು ರೈಸಿಂಗ್ ಮೇನ್-1, ರೈಸಿಂಗ್ ಮೇನ್-2 ಹಾಗೂ ರೈಸಿಂಗ್ ಮೇನ್ 3ರಲ್ಲಿ ರೈಸಿಂಗ್ ಮೇನ್-1ರಲ್ಲಿ ಹುಲ್ಲಳ್ಳಿಯಿಂದ ಕಡೇಕೊಪ್ಪದವರೆಗೆ ಪೈಪಲೈನ್ ಕಾಮಗಾರಿ ನಡೆದಿದ್ದು, ಆದರೆ ಹುನಗುಂದ ಮತ್ತು ಇಲಕಲ್ ಪಟ್ಟಣ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಬಾಕಿ ಉಳಿದಿದೆ. ರೈಸಿಂಗ್ ಮೇನ್ ಎಂ.ಎಸ್. ಪೈಪ್ ಲೈನ್‌ನ್ನು 1,200 ಮಿ.ಮೀ., 1,100 ಮಿ.ಮೀ. ಹಾಗೂ ಸಾವಿರ ಮಿ.ಮೀ ವ್ಯಾಸ ಪೈಪ್ ಬಳಸಿಕೊಳ್ಳಲಾಗುತ್ತಿದೆ. ಕೆರೆಗಳ ಸಂಪರ್ಕಕ್ಕೆ ಬಿಡಬ್ಲ್ಯೂಎಸ್‌ಸಿ 500 ಮಿ.ಮೀ. ವ್ಯಾಸದ ಪೈಪ್ ಹಾಗೂ ಸಣ್ಣ ಕೆರೆಗಳಿಗೆ ಎಚ್‌ಡಿಪಿಇ ಪೈಪ್ ಬಳಸಿಕೊಳ್ಳಲಾಗುತ್ತಿದೆ.
ರೈಸಿಂಗ್ ಮೇನ್-2ನಲ್ಲಿ ಕಡೇಕೊಪ್ಪದ ಮಧ್ಯಂತರ ನೀರಿನ ತೊಟ್ಟಿಯಿಂದ ಮೆಣಸಗೇರಿ, ಮೀಯಾಪುರ, ಹೊಸಳ್ಳಿ, ಹನುಮಸಾಗರ, ಮಾವಿನ ಇಟಗಿ, ಬಾದಿಮಿನಾಳ, ಜಾಗೀರಗುಡದೂರು ಕೆರೆಗಳಿಗೆ ನೀರು ಹರಿಸಲಾಗುವುದು. ಇನ್ನೂ ತಾಲೂಕಿನ ನಿಡಶೇಸಿ ಕೆರೆಗೆ ಪ್ರತ್ಯೇಕ ಪೈಪ್‌ಲೈನ್ ಮಾರ್ಗ ಕಲ್ಪಿಸಲಾಗಿದೆ. ಇದು ಕಡೇಕೊಪ್ಪ ಮಧ್ಯಂತರ ನೀರಿನ ತೊಟ್ಟಿಯಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಟೆಂಗುಂಟಿ ಕ್ರಾಸ್‌ವರೆಗೆ ಪೈಪ್‌ಲೈನ್ ಅಲ್ಲಿಂದ ಹನುಮಸಾಗರ ರಸ್ತೆಯ ಮಾರ್ಗವಾಗಿ ನಿಡಶೇಸಿ ಕೆರೆಗೆ ಸಂಪರ್ಕಿಸುವ ಕೆಲಸ ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಉದ್ದೇಶಿತ 15 ಕೆರೆಗಳ ಪೈಕಿ ರೈಸಿಂಗ್ ಮೇನ್-2ರ 7 ಕೆರೆಗಳಿಗೆ ಅಂದು ಕೊಂಡಂತಾದರೆ, ಹುಲ್ಲಳ್ಳಿ, ಕಡೇಕೊಪ್ಪ ಪಂಪ್‌ಹೌಸ್‌ನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ಮೆಣಸಗೇರಿ, ಮೀಯಾಪುರ, ಹೊಸಳ್ಳಿ, ಹನುಮಸಾಗರ, ಮಾವಿನ ಇಟಗಿ, ಬಾದಿಮಿನಾಳ, ಜಾಗೀರಗುಡದೂರು, ನಿಡಶೇಸಿ ಕೆರೆಗೆ ಕೃಷ್ಣಾ ನದಿ ನೀರು ಸಂಗ್ರಹಗೊಳ್ಳಲಿದೆ.
ಕೆರೆ ತುಂಬುವ ಯೋಜನೆಯಲ್ಲಿ ನಿಡಶೇಸಿ ಕೆರೆ ಹಾಗೂ ಹನುಮಸಾಗರ ಕೆರೆಗೆ ಪೈಪ್ ಲೈನ್ ಸಂಪರ್ಕಕ್ಕೆ ಕೆಲವು ರೈತರಿಂದ ಅಸಹಕಾರ ವ್ಯಕ್ತವಾಗಿದೆ. ಸದರಿ ರೈತರ ಜಮೀನಿನಲ್ಲಿ ಮೂರು ಅಡಿಯಲ್ಲಿ ಎಚ್‌ಡಿಪಿಇ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಆದರೆ ರೈತರು ಪ್ರತಿ ಪೈಪ್ ಗೆ 8ರಿಂದ 10 ಸಾವಿರ ರೂ. ಪರಿಹಾರ ಬೇಡಿಕೆ ಮುಂದಿಟ್ಟಿದ್ದು, ಕಾಮಗಾರಿ ವಿಳಂಬವಾಗಿದೆ. ಈ ವಿಚಾರವಾಗಿ ಸಂಬಂಧಿ ಸಿದ ಅಧಿ ಕಾರಿಗಳಿಗೆ ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವರದಿ ನೀಡಲು ಸೂಚಿಸಿರುವೆ. ∙
ಅಮರೇಗೌಡ ಪಾಟೀಲ ಬಯ್ನಾಪುರ, ಶಾಸಕ
-ಮಂಜುನಾಥ ಮಹಾಲಿಂಗಪುರ