ವಾಡಿ: ಬೇಡಿಕೆಗಳನ್ನು ಈಡೇರಿಸುವುದಾಗಿ ಕಂಪನಿ ಆಡಳಿತಾಧಿಕಾರಿಗಳು ನೀಡಿದ ಭರವಸೆ ನಂಬಿ ಅಸಂಘಟಿತ ಗುತ್ತಿಗೆ ಕಾರ್ಮಿಕರು, ಒಂದೇ ದಿನಕ್ಕೆ ತಮ್ಮ ಹೋರಾಟ ಕೈಬಿಟ್ಟು ಕೆಲಸಕ್ಕೆ ಅಣಿಯಾದರು.
ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಅಖೀಲ ಭಾರತ್ ಬಂದ್ ಮುಷ್ಕರ ಬೆಂಬಲಿಸಿ ಮಂಗಳವಾರ ಇಡೀ ದಿನ ಹೋರಾಟಕ್ಕಿಳಿದಿದ್ದ ಎಸಿಸಿ ಸಿಮೆಂಟ್ ಕಂಪನಿಯ ತಾಜ್ ಗ್ರೂಪ್ ಗುತ್ತಿಗೆ ಕಾರ್ಮಿಕರು ಹಾಗೂ ವಿವಿಧ ಸಿವಿಲ್ ಗುತ್ತಿಗೆ ಕಾರ್ಮಿಕರು ಬುಧವಾರ ಎಂದಿನಂತೆ ಕೆಲಸಕ್ಕೆ ಹಾಜರಾದರು.
ಹೋರಾಟದ ಮುಂದಾಳತ್ವ ವಹಿಸಿದ್ದ ಎಸಿಸಿ ಕಾರ್ಮಿಕ ಸಂಘದ ಚುನಾಯಿತ ಪದಾಧಿಕಾರಿಗಳು ಮತ್ತು ಕಂಪನಿ ಆಡಳಿತ ಮಂಡಳಿ ಮಧ್ಯೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಕಾರ್ಮಿಕ ನಾಯಕರು ಹೋರಾಟ ಕೈಬಿಟ್ಟ ಕಾರಣ ಎರಡನೇ ದಿನ ಮುಂದುವರಿಯಬೇಕಿದ್ದ ಚಳವಳಿ ನೆಲಕಚ್ಚಿತ್ತು. ಕಾರ್ಮಿಕರ ಆಕ್ರೋಶ ತಣ್ಣಗಾಗಿಸುವಲ್ಲಿ ಮತ್ತೂಮ್ಮೆ ಯಶಸ್ವಿಯಾದ ಎಸಿಸಿ ಆಡಳಿತ, ಸ್ಥಗಿತಗೊಂಡಿದ್ದ ಸಿಮೆಂಟ್ ಲೋಡಿಂಗ್ ಮತ್ತು ರಫ್ತು ಕಾರ್ಯಕ್ಕೆ ಚಾಲನೆ ನೀಡಿತು.
ಕಂಪನಿಯ ನ್ಯೂ ಪ್ಲ್ಯಾಂಟ್ ಘಟಕದ ತಾಜ್ ಗುತ್ತಿಗೆ ಕಾರ್ಮಿಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ರಜೆ ದಿನಗಳನ್ನು ಹೊರೆತುಪಡಿಸಿ ತಿಂಗಳ ಪೂರ್ತಿ ಕೆಲಸ ನೀಡಬೇಕು. ಎಸಿಸಿ ಆಧೀನದ ಆಸ್ಪತ್ರೆಗಳಲ್ಲಿ ಆರೋಗ್ಯ ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ಕೆಲಸದಲ್ಲಿ ಊಟ-ಉಪಹಾರಕ್ಕೆ ಕ್ಯಾಂಟೀನ್ ಸೌಕರ್ಯ ಕಲ್ಪಿಸಬೇಕು. ಇಎಸ್‌ಐ, ಪಿಎಫ್, ಆರೋಗ್ಯ ಸೌಲತ್ತು ಹಾಗೂ ವಸತಿ ಭಾಗ್ಯ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುತ್ತಿತ್ತು. ಯಾವುದೇ ಲಿಖೀತ ಭರವಸೆ ನೀಡದೆ ಕಂಪನಿ ಅಧಿಕಾರಿಗಳು ಮೌಖೀಕವಾಗಿ ಹೇಳಿಕೆ ನೀಡಿದ್ದಾರೆ. ಇಂತಹ ಹುಸಿ ಭರವಸೆಗಳು ಹಿಂದೆ ಸಾಕಷ್ಟು ನೀಡಿದ್ದಾರೆ. ಎಸಿಸಿ ನಮ್ಮ ಹಕ್ಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಗುತ್ತಿಗೆ ಕಾರ್ಮಿಕರು ಆರೋಪಿಸಿದ್ದಾರೆ.
ಮಾತು ತಪ್ಪಿದರೆ ಮತ್ತೆ ಹೋರಾಟ
ಮಂಗಳವಾರ ಸಂಜೆ ಎಸಿಸಿ ಆಡಳಿತ ಮಂಡಳಿಯವರೊಂದಿಗೆ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಶಾಮಸನ್ ಸೇರಿದಂತೆ ಇತರ ಚುನಾಯಿತ ಮುಖಂಡರ ನೇತೃತ್ವದಲ್ಲಿ ಮಾತುಕತೆ ನಡೆದಿದೆ. ಫೆ.28 ರಿಂದ ತಾಜ್ ಗ್ರೂಪ್ ಗುತ್ತಿಗೆ ಕಾರ್ಮಿಕರಿಗೆ ಎಸಿಸಿ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಆರಂಭಿಸುವುದಾಗಿ, ಎಲ್ಲ ಗುತ್ತಿಗೆ ಕಾರ್ಮಿಕರಿಗೆ ತಿಂಗಳಲ್ಲಿ 18 ರಿಂದ 20 ದಿನ ಕೆಲಸ ಮತ್ತು ಆರೋಗ್ಯ ಸೌಲಭ್ಯ ಕಡ್ಡಾಯವಾಗಿ ಒದಗಿಸುವುದಾಗಿ ಎಸಿಸಿಯ ಕ್ಲಸ್ಟರ್ ಹೆಡ್ ಡಾ| ಎಸ್.ಬಿ. ಸಿಂಗ್ ಮೌಖೀಕವಾಗಿ ಭರವಸೆ ನೀಡಿದ್ದಾರೆ. ಅದನ್ನು ಒಪ್ಪಿ ಹೋರಾಟ ಕೈಬಿಟ್ಟಿದ್ದೇವೆ. ಮಾತು ತಪ್ಪಿದರೆ ಮತ್ತೆ ಹೋರಾಟ ಆರಂಭಿಸುತ್ತೇವೆ. • ಅನೀಲಕುಮಾರ ಶಿವಬೊ, ಎಸಿಸಿ ತಾಜ್ ಗ್ರೂಪ್ ಗುತ್ತಿಗೆ ಕಾರ್ಮಿಕರ ಮುಖಂಡ