ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಕಳೆದ 70 ವರ್ಷಗಳಿಂದ ಯಾವುದೇ ಗೊಂದಲಗಳಿಲ್ಲದೇ ಲಾಭದಲ್ಲಿ ಮುನ್ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70 ವಾರ್ಷಿಕೋತ್ಸವ ಹಿನ್ನೆಲೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ ನಿ., ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ “ಸಹಕಾರ ಅಭಿವೃದ್ಧಿ’ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಸಮನ್ವಯತೆ ಕೊರತೆ ಹೆಚ್ಚಿರುತ್ತದೆ. ಆದರೆ, ಸ್ವಾತಂತ್ರ್ಯ ಬಂದ ಆಸುಪಾಸಿನ ದಿನಗಳಲ್ಲಿ ಆರಂಭವಾಗಿರುವ ಕರ್ನಾಟಕ ಪತ್ರಕರ್ತರ ಸಂಘವು ಇಂದಿನವರೆಗೂ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಹಣಕಾಸಿನ ವಹಿವಾಟು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ ವಿಚಾರ.
ಈ ಸಮನ್ವಯತೆ ಹಾಗೂ ಲಾಭಕ್ಕೆ ಸಂವಿಧಾನದ ನಾಲ್ಕನೇ ಅಂಗವನ್ನು ಮುನ್ನಡೆಸುವ ಪತ್ರಕರ್ತರ ಜವಾಬ್ದಾರಿಯುತ ನಡೆಯೇ ಕಾರಣ. ಪ್ರಸ್ತುತ ಸಂಘದ ಸದಸ್ಯತ್ವ 2,600 ಇದ್ದು, ಮುಂದಿನ ದಿನಗಳಲ್ಲಿ ಸದಸ್ಯತ್ವ ಸಂಖ್ಯೆ ಹೆಚ್ಚಾಗಿ ಇನ್ನಷ್ಟು ಪತ್ರಕರ್ತರಿಗೆ ಸಹಕಾರವಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಉಪಾಧ್ಯಕ್ಷ ಎನ್,ಚಂದ್ರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಾವುದೇ ಗೊಂದಲವಿಲ್ಲದೆ ಲಾಭದಲ್ಲಿ ಸಹಕಾರ ಸಂಘಗಳನ್ನು ನಡೆಸುವುದು ಕಷ್ಟ. ಆದರೆ, ಪತ್ರಕರ್ತರ ಸಹಕಾರಿ ಸಂಘ ಕ್ರೆಡಿಟ್ ಮಾದರಿಯದ್ದಾಗಿದ್ದು, 29 ಕೋಟಿ ರೂ.ವಾರ್ಷಿಕ ವಹಿವಾಟು ಹೊಂದಿರುವುದಲ್ಲದೇ ಶೇ.14 ಡಿವಿಡೆಂಟ್ ಹಂಚಿಕೆ ಮಾಡಿದೆ. ಇದಕ್ಕೆ ಪ್ರಜ್ಞಾವಂತರೆಂದು ಕರೆಸಿಕೊಳ್ಳುವ ಪತ್ರಕರ್ತರ ಒಗ್ಗಟ್ಟು ಕಾರಣ ಎಂದರು.
“ಡಿಜಿಟಲ್ ಯುಗದ ಪತ್ರಕರ್ತರು ಎದುರಿಸುತ್ತಿರುವ ಆರ್ಥಿಕ ಸವಾಲುಗಳು, ಸಹಕಾರ ಸಂಘದ ಮುಂದಿರುವ ಪರಿಹಾರೋಪಾಯಗಳು” ಎಂಬ ವಿಷಯರ ಕುರಿತು ಆರ್‌ಐಸಿಎಂ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ಎ.ಸಿದ್ಧಾಂತಿ, “ಸಹಕಾರ ಕ್ಷೇತ್ರದ ಉನ್ನತಿಗೆ ಬದಲಾಗಿರುವ ಕಾಲಮಾನದಲ್ಲಿ ಆಡಳಿತ ಮಂಡಳಿ, ಸದಸ್ಯರು ಮತ್ತು ಸಿಬ್ಬಂದಿಗಳ ಹಕ್ಕು ಜವಾಬ್ದಾರಿ’ ವಿಷಯದ ಕುರಿತು ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಎಚ್.ಎಸ್.ನಾಗರಾಜಯ್ಯ ಉಪನ್ಯಾಸ ನೀಡಿದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿ, ಅಧ್ಯಕ್ಷ ಎಂ.ಎಸ್.ರಾಜೇಂದ್ರಕುಮಾರ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಅರುಣ್‌ಕುಮಾರ್ ಉಪಸ್ಥಿತರಿದ್ದರು.