ಹಾಸನ: ಅನಾಥ ಮೂಕಿಯಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವ ಮೂಲಕ ಹಾಸನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್.ಶ್ರೀನಿವಾಸ ಗೌಡ ಮತ್ತು ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಫಾತಿಮಾ ಎಂಬ ಮೂಕ ಮಹಿಳೆಕೆಲ ವರ್ಷಗಳಿಂದ ಹಾಸನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕಚೇರಿಯ ಸ್ವತ್ಛತೆ, ವಿವಿಧ ಪೊಲೀಸ್ ಠಾಣೆಗಳ ಸ್ವತ್ಛತೆ ಮಾಡಿಕೊಂಡಿದ್ದು, ಬಿಡುವು ಸಿಕ್ಕಾಗಲೆಲ್ಲ ಹಾಸನದ ಪೊಲೀಸರಿಗೆ ನೆರವಾಗುತ್ತಿದ್ದಳು.
ಪ್ರತಿದಿನಕೈಯಲ್ಲೊಂದು ಲಾಠಿ ಹಿಡಿದುಕೊಂಡು , ತಲೆಗೊಂದು ಟೋಪಿ ಹಾಕಿಕೊಂಡು ನಗರದ ಸರ್ಕಲ್‌ಗಳಲ್ಲಿ ವಾಹನ ಸಂಚಾರ ನಿಯಂತ್ರಣವನ್ನೂ ಮಾಡುತ್ತಿದ್ದಳು. ಏನನ್ನೂ ನಿರೀಕ್ಷಿಸದ ಆಕೆಯನ್ನು ಪೊಲೀಸರೂ ತಮ್ಮ ವಾಹನಗಳಲ್ಲಿಕರೆದೊಯ್ದು, ಊಟ, ತಿಂಡಿ ಕೊಡಿಸುತ್ತಿದ್ದರು.
ಹಳೆಯ ಬಟ್ಟೆಗಳನ್ನು ತೊಟ್ಟರೂ ಮಹಿಳಾ ಪೊಲೀಸರೆಂಬಂತೆ ನಡೆದುಕೊಳ್ಳುತ್ತಿದ್ದ ಆಕೆ ಮಾತು ಬಾರದ ಮೂಕಿ ಎಂಬುದೂ ಬಹು ತೇಕ ಜನರಿಗೆ ಗೊತ್ತಿರಲ್ಲಿ. ಹಾಗಾಗಿ ಆಕೆಯ ಚಲನ – ವಲನ, ಹಾವ -ಭಾವ ನೋಡಿ ಬಹುತೇಕ ಜನರು ಆಕೆ ಮಾನಸಿಕ ಅಸ್ವಸ್ಥಳೆಂದೇ ಭಾವಿಸಿದ್ದರು. ಆದರೆ ವಾಹನ ಸಂಚಾರ ನಿಯಂತ್ರಣ ಸಂದರ್ಭದಲ್ಲಿ, ಜನರು ಸೇರುತ್ತಿದ್ದ ಜಾಗದಲ್ಲಿ, ಅಪರಾಧ ಪ್ರಕರಣಗಳು ನಡೆದ ಸ್ಥಳ ದಲ್ಲಿ ಆಕೆ ಪ್ರತ್ಯಕ್ಷಳಾಗಿ ಪೊಲೀಸರಿಗೆ ನೆರವಾಗುತ್ತಿದ್ದಳು. ಪೊಲೀಸರೂ ತಮ್ಮ ಜೀಪಿನಲ್ಲಿಕರೆದೊಯ್ಯುತ್ತಾ ಆಕೆಯನ್ನು ಅಕ್ಕರೆಯಿಂದಲೇ ನೋಡಿಕೊಳ್ಳುತ್ತಿದ್ದುದು, ಜನರಿಗೆ ಅಚ್ಚರಿಯನ್ನೂ ಮೂಡಿಸಿತ್ತು.
ಇತ್ತೀಚಿಗೆ ಆಕೆಯ ಸ್ತನದಲ್ಲಿ ನೋವುಕಾಣಿಸಿಕೊಂಡಿದೆ. ಅನಾಥ ಳಾದ ಆಕೆ ತನ್ನ ನೋವನ್ನು ಎಸ್ಪಿ ಶ್ರೀನಿವಾಸಗೌಡ ಅವರ ಬಳಿ ಸನ್ನೆಯ ಮೂಲಕವೇ ವ್ಯಕ್ತಪಡಿಸಿದ್ದಾಳೆ. ಪೊಲೀಸ್ ಸಿಬ್ಬಂದಿಯೊಂದಿಗೆ ಹಾಸನ ವೈದ್ಯಕೀಯಕಾಲೇಜು ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದರೂ ನೋವು ಕಡಿಮೆಯಾಗಿಲ್ಲ.
ಜಿಲ್ಲಾ ಶಸ್ತ್ರಚಿಕಿತ್ಸಕರ ಪರೀಕ್ಷಿಸಿದಾಗ ಆಕೆಗೆ ಸ್ತನಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಆದರೆ ಆಕೆಗೆ ಧೈರ್ಯ ತುಂಬಿದ ಎಸ್ಪಿ ಶ್ರೀನಿವಾಸಗೌಡ ಮತ್ತು ಸಿಬ್ಬಂದಿ ಹಾಸನದಲ್ಲಿ ಶಸ್ತ್ರ ಚಿಕಿತ್ಸೆ ಆಗದಿದ್ದರೆ ಬೆಂಗಳೂರಿಗೆ ಕಳುಹಿಸಿ ಚಿಕಿತ್ಸೆಕೊಡಿಸಲೂ ನಿರ್ಧರಿಸಿದ್ದರು. ಆದರೆ ಹಾಸನದ ವೈದ್ಯಕೀಯಕಾಲೇಜಿನಲ್ಲಿಯೇ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈಗ ಫಾತಿಮಾ ಚೇತರಿಸಿಕೊಂಡಿದ್ದಾಳೆ. ಫಾತಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ವಾಗ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಹಾಗೂ ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆ ಯಲ್ಲಿ ಮಹಿಳಾ ಪೊಲೀಸರನ್ನು ನಿಯೋಜಿಸಿ ಆಕೆಗೆ ನೆರವಾಗಿದ್ದಾರೆ.
ಮನೆಯೂ ಇಲ್ಲ, ತನ್ನವರೆಂಬುವರೂ ಇಲ್ಲದ ಆಕೆಗೆ ಈಗ ಪೊಲೀಸ್ ವಸತಿ ಗೃಹದಲ್ಲಿ ವಾಸ್ತವ್ಯಕ್ಕೆ ನೆರವಾಗಿದ್ದು, ಊಟ, ತಿಂಡಿಯಕೊಡಿಸುವುದು, ಆಸ್ಪತ್ರೆಗೆ ಪೊಲೀಸ್ ವಾಹನಗಳಲ್ಲೇ ಹೋಗಿ ಬರುವ ವ್ಯವಸ್ಥೆಯನ್ನೂ ಪೊಲೀಸರು ಮಾಡುತ್ತಿದ್ದಾರೆ. ಪೊಲೀಸರೆಂದರೆ ನಕಾರಾತ್ಮಕ ದೃಷ್ಟಿಯಿಂದಲೇ ನೋಡುವ ಈ ಕಾಲದಲ್ಲಿ ಹಾಸನದ ಪೊಲೀಸರು ಫಾತಿಮಾಳಂತಹ ಅನಾಥ ಮೂಕಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.