ಬೀದರ: ಸ್ವ ಸಹಾಯ ಗುಂಪುಗಳು ತಮ್ಮ ಬದ್ಧತೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಗಳಿಂದ ಬ್ಯಾಂಕ್ ಗಳ ವಿಶ್ವಾಸಕ್ಕೆ ಪಾತ್ರವಾಗಿದ್ದು ಯಾವುದೇ ಆಧಾರವಿಲ್ಲದೇ ಸಾಲ ಪಡೆಯುವ ಅರ್ಹತೆ ಗಳಿಸಿಕೊಂಡಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಶೇಷಗಿರಿ ಆದಿರಾಜು ಹೇಳಿದರು.
ನಗರದ ಸಹಾರ್ದ ತರಬೇತಿ ಕೇಂದ್ರದಲ್ಲಿ ನಬಾರ್ಡ್ ಅಡಿಯಲ್ಲಿ ಆಯೋಜಿಸಿರುವ ಎರಡು ವಾರಗಳ ರೆಕ್ಸಿನ್ ಬ್ಯಾಗ್ ತಯಾರಿಕಾ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿ ಮೂಲಕ ಕೌಶಲ್ಯ ವೃದ್ಧಿಸಿಕೊಂಡು ಸ್ವಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಬಡವರಿಗೆ ಸ್ವಸಹಾಯ ಗುಂಪುಗಳು ಆಶಾಕಿರಣವಾಗಿವೆ. ಆದ್ದರಿಂದಲೇ ಬ್ಯಾಂಕ್‌ಗಳು ಇಂದು ಸ್ವಸಹಾಯ ಗುಂಪಿನ 10 ಲಕ್ಷ ರೂ.ವರೆಗಿನ ಸಾಲಕ್ಕೆ ಯಾವುದೇ ಕೊಲ್ಯಾಟರಲ್ ಅಥವಾ ಮಾರ್ಜಿನ ಮನಿ ವಿಧಿಸುತ್ತಿಲ್ಲ ಎಂದು ಹೇಳಿದರು.
ಇಂತಹ ವಾತಾವರಣ ಎಲ್ಲಾ ವರ್ಗದ ಸಾಲಗಳಿಗೂ ಅನ್ವಯಿಸುವ ಸ್ಥಿತಿ ನಿರ್ಮಾಣ ವಾಗಬೇಕು. ಸ್ವಸಹಾಯ ಗುಂಪಿನ ಹೆಣ್ಣು ಮಕ್ಕಳು ಸಾಲ ಪಡೆಯುವುದು ಮತ್ತು ಮರುಪಾವತಿ ಮಾಡುವುದು ಜಗತ್ತಿನ ಬ್ಯಾಂಕಿಂಗ್ ವ್ಯವಸ್ಥೆಗೆ ಮಾದರಿಯಾಗಿದೆ. ಬೀದರಿನಲ್ಲಿ ಸಹಕಾರಿ ಬ್ಯಾಂಕಿನಡಿ ಸ್ವಸಹಾಯ ಗುಂಪುಗಳು ಅತ್ಯುತ್ತಮ ಸಾಧನೆ ದಾಖಲಿಸಿವೆ ಎಂದ ಅವರು, ಸುಮಾರು 10 ಗುಂಪುಗಳ ಆಯ್ದ ಪ್ರತಿನಿಧಿಗಳಿಗೆ ಕಿರು ಉದ್ಯಮ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನ
ಪಡೆಯಬೇಕು ಎಂದು ಹೇಳಿದರು.
ರಿಸರ್ವ್ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ವಿದ್ಯಾಸಾಗರ ಮಾತನಾಡಿ, ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಡವರ ಮನೆಬಾಗಿಲಿಗೆ ತಲುಪಿಸಿರುವ ಸ್ವಸಹಾಯ ಗುಂಪುಗಳು ಅತ್ಯುತ್ತಮವಾಗಿವೆ. ಆದರೂ ಇತ್ತೀಚಿನ ದಿನಗಳಲ್ಲಿ ತರಬೇತಿ ಕೊರತೆ, ಸಮರ್ಪಕ ನಿರ್ವಹಣೆ ವೈಫಲ್ಯಗಳಿಂದಾಗಿ ಸಾಲ ಮರುಪಾವತಿಯಲ್ಲಿ ಹಿಂದೆ ಬೀಳುತ್ತಿದ್ದು, ಬ್ಯಾಂಕ್ ಗಳು ಇದರ ಬಗ್ಗೆ ಗಮನಹರಿಸಬೇಕಾಗಿದೆ. ಸ್ವಸಹಾಯ ಗುಂಪುಗಳ ವ್ಯವಸ್ಥೆ ಬಲಪಡಿಸಬೇಕಿದೆ ಎಂದು ಹೇಳಿದರು.
ಎಸ್‌ಬಿಐನ ದಾನೇಶ್ ಬಿರಾದಾರ್, ನಬಾರ್ಡ್‌ನ ಡಿವಿಎಸ್ ಜೋಶಿ, ಎಲ್‌ಡಿಎಂ ಪಂಡಿತ ಹೊಸಳ್ಳಿ, ಸಿ.ಎಲ್. ರೆಡ್ಡಿ, ಕಾರ್ಮೆಲ್ ಸೇವಾ ಟ್ರಸ್ಟಿನ ಸಿಸ್ಟರ್ ಪಿಡಾ ಉಪಸ್ಥಿತರಿದ್ದರು. ಸಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನೀಲಕುಮಾರ ಪರಶೆಣೆ, ತನ್ವಿರ ರಜಾ ಮತ್ತು ನಾಗಶೆಟ್ಟಿ ಘೋಡಂಪಳ್ಳಿ ನಿರ್ವಹಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.