Advertisement

ಮಠ ಮಂದಿರಕ್ಕೆ ನೆರವು: ಬದಲಾಯಿತೇ “ಸೆಕ್ಯುಲರಿಸ್ಟ್‌’ನಿಲುವು?

12:30 AM Feb 13, 2019 | |

ಲೋಕಸಭಾ ಚುನಾವಣೆಯ ದಿನ ಹತ್ತಿರ ಬರುತ್ತಿರುವಂತೆಯೇ ಕರ್ನಾಟಕದ ರಾಜಕೀಯದಲ್ಲಿ ವಿಚಿತ್ರ-ವಿಲಕ್ಷಣ ವಿದ್ಯಮಾನಗಳು ಘಟಿಸುತ್ತಿವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಜಾತ್ಯತೀತತೆಯ ಬಗ್ಗೆ ಸದ್ದುಗದ್ದಲ ಎಬ್ಬಿಸುತ್ತಿರುವ ಜೊತೆಗೇ ಬಿಜೆಪಿಯ ದಾರಿಯಲ್ಲೇ ಸಾಗತೊಡಗಿವೆ! ನಮ್ಮ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಯವರು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹಿಂದೂ ಮಠಗಳು ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ಘೋಷಿಸಿರುವುದು ಈ ಮಾತಿಗೆ ಅಪ್ಪಟ ಉದಾಹರಣೆ.

Advertisement

9 ವರ್ಷಗಳ ಹಿಂದೆ ಬಿಜೆಪಿ ಸರಕಾರ ಆಯ್ದ ಹಿಂದೂ ಮಠಗಳು, ದೇವಾಲಯಗಳು, ಇತರ ಧಾರ್ಮಿಕ ಸಂಸ್ಥೆಗಳಿಗೆಂದು 50 ಕೋ. ರೂ. ಅನುದಾನ ಘೋಷಿಸಿದ ಸಂದರ್ಭದಲ್ಲಿ ಇದು “ಆರೆಸ್ಸೆಸ್‌ನ ಒಡೆದು ಆಳುವ ನೀತಿಯ ಒಂದು ಅಂಗ’ ಎಂದಿತ್ತು ಕಾಂಗ್ರೆಸ್‌. ಈ ಕ್ರಮ ಕೋಮು ಸಂಘರ್ಷಗಳಿಗೆ, ಜಾತಿ ಜಗಳಗಳಿಗೆ ಹಾಗೂ ಜನರನ್ನು ಒಡೆಯುವ ಜಾಯಮಾನಕ್ಕೆ ಹಾದಿ ಮಾಡಿ ಕೊಡುತ್ತದೆಂದು ಮುಂದೆ ಕಂದಾಯ ಸಚಿವ ಸ್ಥಾನಕ್ಕೆ ಬಂದ ಆರ್‌.ವಿ. ದೇಶಪಾಂಡೆ ಎಚ್ಚರಿಸಿದ್ದರು. ದೇಶಪಾಂಡೆಯವರ ಆ ಮಾತು ಸುಳ್ಳಾಯಿತು. 

ಕರ್ನಾಟಕದ ಮಾತು ಏಕೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮಾಡುತ್ತಿರುವ ಕೆಲಸ ನೋಡಿ. ಅಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್‌ ಸರಕಾರ, ಗೋರಕ್ಷಣೆಯ ವಿಷಯದಲ್ಲಿ ಹಿಂದೂ ಹಣೆಪಟ್ಟಿ ಹೊತ್ತಿರುವ ಪಕ್ಷ ಹಾಗೂ ಸಂಘಟನೆಗಳ ಜೊತೆಗೆ ಸ್ಪರ್ಧೆಗಿಳಿದಿರುವಂತಿದೆ. ಅಲ್ಲಿಯ ಮುಖ್ಯಮಂತ್ರಿ ಕಮಲನಾಥ್‌ ಸರಕಾರ ಗೋ ಸಂಬಂಧಿ ಹಿಂಸಾಕೃತ್ಯಗಳಿಗೆ ಸಂಬಂಧಿಸಿದ ಕಾಯ್ದೆಗಳನ್ನು ಕುರಿತ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಐವರನ್ನು ಈಗಾಗಲೇ ಬಂಧನಕ್ಕೊಳಗಾಗಿಸಿದೆ. ಅತ್ಯಾಧುನಿಕ ಲೋಕಾನು ಭವವುಳ್ಳ, ಆಡ್ಯ ಸಮಾಜದ ಹಿನ್ನೆಲೆಯುಳ್ಳ ಕಮಲನಾಥ್‌ ಹಸುಗಳ ಕಳ್ಳರನ್ನು ಅಥವಾ ಗೋಮಾಂಸ ತಿನ್ನುವವರನ್ನು ಹೊಡೆದು ಕೊಂದ ವ್ಯಕ್ತಿಗಳನ್ನು ಸಹಿಸುವವರಲ್ಲವೆನ್ನುವುದೇನೋ ನಿಜವಿರಬಹುದು. ಬಿಜೆಪಿ ಆಡಳಿತದ ಕೆಲ ರಾಜ್ಯಗಳಲ್ಲಿ ಇಂಥ ಘಟನೆಗಳು ನಡೆದಿವೆ. ಬಹುಶಃ ಕಮಲನಾಥ್‌ ಅವರಿಗೆ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾರನ್ನೊಳಗೊಂಡ ಸೋನಿಯಾ ಗಾಂಧಿಯವರ ನಿರ್ದೇಶವಿರುವ ಕಾಂಗ್ರೆಸ್‌ ಪಕ್ಷದ ಪ್ರಥಮ ಕುಟುಂಬದ ಕೃಪಾಶೀರ್ವಾದವಿದೆ. ಎಷ್ಟೇ ಆದರೂ ಕಮಲನಾಥ್‌ ಈ ಪ್ರಥಮ ಕುಟುಂಬದ ನಿಕಟ ವಿಶ್ವಾಸಿ, ಸ್ವಂತ ನಿಲುವಿನಿಂದ ಚಿಂತನೆ ನಡೆಸದ, ಕೆಲಸ ಮಾಡದ ವ್ಯಕ್ತಿ ಅವರು.

ಇತರ ಎಲ್ಲ ಕಡೆಗಳಲ್ಲಿರುವಂತೆಯೇ ಕರ್ನಾಟಕದಲ್ಲೂ ಹಣ ಸಂಗ್ರಹದಲ್ಲಿ ವಿಶೇಷವಾಗಿ ನಾವು ಹಿಂದೆ ನಿರ್ಲಕ್ಷಿಸಿದ್ದ ಸಮು ದಾಯಗಳತ್ತ ಒಲವು ತೋರುವಲ್ಲಿ ವ್ಯಸ್ತವಾಗಿವೆ. ಈಗ ಹಿಂದೂ ಮಠಗಳ ಬಗ್ಗೆ ನೆನಪಾಗಿರುವುದಕ್ಕೆ ಇದೇ ಕಾರಣ. ಅಲ್ಲದೆ ಕುಮಾರಸ್ವಾಮಿಯವರದ್ದು ಅತ್ಯಂತ ಧರ್ಮಭೀರು ಕುಟುಂಬ; ಈ ವಿಷಯದಲ್ಲಿ ಅದು ಬಿಜೆಪಿ ನಾಯಕರನ್ನು ಕೂಡ ಹಿಂದಿಕ್ಕಿದೆ.

ರಾಜಕೀಯ ವೀಕ್ಷಕರ ಪ್ರಕಾರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳಾದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಒಳಜಗಳಗಳು ನಡೆಯುತ್ತಿವೆ; ಈ ಜಗಳ ಉಳಿದೆಲ್ಲ ವಿಷಯಗಳಿಗಿಂತಲೂ ಹೆಚ್ಚಾಗಿ ಮುಂಬರುವ ಲೋಕಸಭಾ ಚುನಾವಣೆಗಾಗಿ ಹಣ ಸಂಗ್ರಹಿಸುವುದಕ್ಕೇ ಸಂಬಂಧಿಸಿದೆ. ಪಕ್ಷಗಳು ಈಗ ಹಣದ ಚೀಲಗಳ ಹಿಂದೆ ಬಿದ್ದಿವೆ. ಅಧಿಕಾರದಲ್ಲುಳಿಯಬೇಕಿದ್ದರೆ ಹಣಬೇಕು; ಶಾಸಕರನ್ನು ಸಂತೋಷ ಪಡಿಸಬೇಕಿದ್ದರೆ ಹಣಬೇಕು. ಶಾಸಕರನ್ನು ಸಂತುಷ್ಟಗೊಳಿಸುವ ವಿಷಯದಲ್ಲಿ ಹೊಸದೇನೂ ಮಾಡಿಲ್ಲ. ಎಂಎಲ್‌ಗ‌ಳಿಗೆ ಅನಧಿಕೃತ ಹಣ ಬಟವಾಡೆಯ ವಿದ್ಯಮಾನವನ್ನು ನಾನು ಮೊದಲಿಗೆ ನೋಡಿದ್ದು ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ. ರಾಜ್ಯದ ಪ್ರಮುಖ ಪಕ್ಷಗಳಲ್ಲಿ ಹಣ ಧಾರಾಳವಾಗಿ ಹರಿಯುತ್ತಿದೆ. ಅವುಗಳ ಧನಸಂಗ್ರಹ ವ್ಯೂಹಕ್ಕೆ ಪ್ರಾಯೋಜಕತ್ವ ಒದಗಿಸುವ ಜನರು ಬಹುಸಂಖ್ಯೆಯಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ತಮ್ಮ ಶಾಸಕರನ್ನು ಲಕ್ಷುರಿ ರೆಸಾರ್ಟ್‌ಗಳಲ್ಲಿ ಆಸರೆ ಪಡೆಯು ವಂತೆ ಮಾಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಇದೇ ಕಾರಣ. ನಮ್ಮ ರಾಜಕೀಯ ಪಕ್ಷಗಳು ತಮ್ಮ ಶಾಸಕರುಗಳನ್ನು ಮುಂದಿನ ಬಾರಿ ಅವರು ನಿಷ್ಠೆ ಬದಲಿಸದಂತೆ ಮಾಡಲು ಅವರನ್ನು ವಿದೇಶಕ್ಕೆ ರವಾನಿಸಿದರೂ ಅಚ್ಚರಿಯಲ್ಲ. ದುರದೃಷ್ಟವಶಾತ್‌ ನಮ್ಮ ಗೌರವಾನ್ವಿತ ಶಾಸಕರಿಂದ (ಹಿಂದಿನ ವಿಧಾನ ಸಭೆಯ ಶಾಸಕರಿಂದ ಎನ್ನಿ) ರಾಜ್ಯಸಭೆಗೆ ಕಳುಹಿಸಲ್ಪಟ್ಟಿದ್ದ ಸದಸ್ಯರೊಬ್ಬರು ಈಗ ಲಂಡನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ; ಭಾರತಕ್ಕೆ ಗಡೀಪಾರಾಗುವ ಅಪಾಯವನ್ನು ತಪ್ಪಿಸಿಕೊಳ್ಳಲು ಏನಕೇನ ಪ್ರಯತ್ನಿಸುತ್ತಿದ್ದಾರೆ. ಸಂಸತ್ಸದಸ್ಯರನ್ನು ದಕ್ಷಿಣಾಫ್ರಿಕದ ಸ್ವಂತ ರೆಸಾರ್ಟ್‌ಗೆ ವಿಹಾರ ಯಾತ್ರೆ ನಡೆಸಿ ಖ್ಯಾತಿ ಪಡೆದಿದ್ದವರು ಈ ವ್ಯಕ್ತಿ.

Advertisement

ಕಳೆದ 35 ವರ್ಷಗಳ ಅವಧಿಯ ರಾಜಕೀಯ ಶಾಸಕರ ಕೊರಳಿಗೆ ಮಾರುಕಟ್ಟೆ ಬೆಲೆಯ ಚೀಟಿ ಜೋತು ಬಿದ್ದಿರುವುದನ್ನು ಕಂಡಿದೆ. 1983ರಲ್ಲಿ ನಡೆದ “ಮೊಯಿಲಿ ಟೇಪ್‌ ಹಗರಣ’ವನ್ನು ನೆನಪಿಸಿಕೊಳ್ಳಿ. ಅಂದೆಲ್ಲ ಒಬ್ಬ ಶಾಸಕನನ್ನು 2 ಲ. ರೂ.ಗಳಿಗೆ ಕೊಳ್ಳಬಹುದಿತ್ತು. ಇಂದು ಈ ದರ ಕೋಟಿ ರೂ.ಗಳಿಗೇರಿದೆ. ಈಗಂತೂ 50 ಕೋ. ರೂ.ಗಳಿಗೇರಿದೆ. 1983ರ ನವೆಂಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕಾಂಗ್ರೆಸ್‌ ಸಂಸದರಾದ ವೀರಪ್ಪ ಮೊಯಿಲಿ ಅವರು, ಪಕ್ಷೇತರ ಶಾಸಕ ಸಿ. ಭೈರೇಗೌಡರಿಗೆ, ಆಗಿನ ಜನತಾಪಾರ್ಟಿ ಸರಕಾರದಿಂದ ಕಾಂಗ್ರೆಸ್‌ಗೆ ನಿಷ್ಠೆ ಬದಲಿಸಿಕೊಳ್ಳುವುದಕ್ಕಾಗಿ 2 ಲಕ್ಷ ರೂ. ಪಾವತಿಸಿದ್ದರೆಂಬ ಆಪಾದನೆ ಕೇಳಿಬಂದಿತ್ತು. ಇಂದಿನ ಪಕ್ಷಾಂತರದ ಆಟಕ್ಕೆ ಸಲ್ಲುವ ಮೊತ್ತದೆದುರು ಈ ಎರಡು ಲಕ್ಷ ರೂಪಾಯಿ ಕೇವಲ “ಕಡ್ಲೆಪುರಿ’ ಕಾಸು. ಆ ದಿನಗಳಲ್ಲಿ ಕೋಲಾರ ಜಿಲ್ಲೆಯ ವೇಮಗಲ್‌ನ ಶಾಸಕರಾಗಿದ್ದ ಭೈರೇಗೌಡ ಅಷ್ಟೇನೂ ಖ್ಯಾತರಲ್ಲದ ರಾಜಕಾರಣಿ. ಆದರೆ ಮೊಯಿಲಿಯವರೊಂದಿಗೆ ನಡೆದ ಆ ಪಕ್ಷಾಂತರ ಸಂಬಂಧಿ ಸಂಭಾಷಣೆಯನ್ನು ಟೇಪ್‌ ರೆಕಾರ್ಡರ್‌ನಲ್ಲಿ ಧ್ವನಿ ಮುದ್ರಿಸಿ ಕೊಳ್ಳುವಷ್ಟು ಬುದ್ಧಿವಂತಿಕೆ ಅವರಲ್ಲಿತ್ತು. ಹೆಚ್ಚಿನವರಿಗೆ ಗೊತ್ತಿಲ್ಲದ ಸಂಗತಿಯೆಂದರೆ ಅವರು ಕೆಲಕಾಲ ಸಿಪಿಎಂಗೆ ಸೇರ್ಪಡೆಗೊಂಡಿದ್ದರು. ಮುಂದೆ ದೊಡ್ಡದಾಗಿ ಬೆಳೆದರು; ಪ್ರಭಾವ ಬೆಳೆಸಿಕೊಂಡರು; ಮಂತ್ರಿಯಾದರು. ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಆರ್‌.ಜಿ. ದೇಸಾಯಿಯವರ ನೇತೃತ್ವದ ತನಿಖಾ ಆಯೋಗ ಮೊಯಿಲಿ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸಿ, ಆ ಟೇಪಿನಲ್ಲಿದ್ದುದು ಮೊಯಿಲಿ ಮತ್ತು ಭೈರೇಗೌಡರ ಧ್ವನಿಗಳೇ ಅಲ್ಲವೆಂದು ವರದಿ ನೀಡಿ, ಮೊಯಿಲಿಯವರನ್ನು ದೋಷಮುಕ್ತರನ್ನಾಗಿಸಿತ್ತು. ಮೊಯಿಲಿ ಮುಂದೆ ಕೇಂದ್ರ ಸಚಿವರಾದರು. ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥರೂ ಆದರು. ದೇಸಾಯಿ ಆಯೋಗದ ವರದಿಯಿಂದ ತ್ರಿಮೂರ್ತಿಗಳ ನೇತೃತ್ವದ ಸರಕಾರಕ್ಕೆ (ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡ ಹಾಗೂ ಎಸ್‌.ಆರ್‌. ಬೊಮ್ಮಾಯಿ) ಇರುಸುಮುರುಸಾಯಿತು. ನೆನಪಿಸಿಕೊಳ್ಳಬೇಕಾದ ಇನ್ನೊಂದು ಅಂಶವೆಂದರೆ ಮೊಯಿಲಿ ಟೇಪ್‌ ಹಗರಣ ನಡೆದುದು ಪಕ್ಷಾಂತರ ಕಾಯ್ದೆ ಜಾರಿಗೊಳ್ಳುವುದಕ್ಕೆ ಮೊದಲು. ಇಂದು ಈ ಕಾಯ್ದೆಯೆಂದರೆ, ಬಂಡಾಯ ಕಾಂಗ್ರೆಸ್‌ ಶಾಸಕರಿಗೆ ಅಸಡ್ಡೆ.

ಕರ್ನಾಟಕದ ರಾಜಕೀಯ ಈಗ ತನ್ನ ವೃತ್ತವನ್ನು ಪೂರ್ಣ ಗೊಳಿಸಿದಂತಾಗಿದೆ. ಈಗ ಮೊಯಿಲಿಯವರ ಸ್ಥಾನದಲ್ಲಿ ಬಿ.ಎಸ್‌. ಯಡಿಯೂರಪ್ಪ ನಿಂತಿದ್ದಾರೆ. ಕಥೆ ಅದೇ – ಟೇಪ್‌ ಹಾಗೂ ಆಡಿಯೋ ಕ್ಲಿಪ್‌ ಹಗರಣ. ಯಡಿಯೂರಪ್ಪ ಅವರು ಮೊಯಿಲಿ ಯವರಂತೆ ಮಾಡಲಿಲ್ಲ. ಪಕ್ಷಾಂತರಕ್ಕೆ ಮನವೊಲಿಸುವ ಪ್ರಯತ್ನದ ಅಂಗವಾಗಿ ಜೆಡಿಎಸ್‌ ಶಾಸಕ ಶರಣ ಗೌಡ ಅವರ ಪುತ್ರನನ್ನು ಭೇಟಿ ಮಾಡಿದ್ದು ನಿಜ ಎಂದು ಒಪ್ಪಿಕೊಳ್ಳುವ ಧೈರ್ಯ ತೋರಿದ್ದಾರೆ. ಈ ಆಡಿಯೋ ಕ್ಲಿಪ್‌ನ ಚಿತ್ರಕಥೆ ಮುಖ್ಯಮಂತ್ರಿ ಕುಮಾರಸ್ವಾಮಿ ಯವರದೇ ಎಂದು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಆರೋಪಿಸಿದ್ದಾರಾದರೂ ಈ “ಹಗರಣ’ಕ್ಕೆ ಸಂಬಂಧಿಸಿದ ಬಾಧಕ ಗಳನ್ನು ಅವರು ಎದುರಿಸಲೇಬೇಕಾಗುತ್ತದೆ. ಸುಪ್ರೀಂ ನ್ಯಾಯ ಮೂರ್ತಿಗಳನ್ನು ಹಾಗೂ ವಿಧಾನ ಸಭಾಧ್ಯಕ್ಷರನ್ನು ನಿಭಾಯಿಸುತ್ತೇವೆ ಎಂಬಂಥ ಮಾತುಗಳು ಟೇಪಿನಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಗರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ತಪಾಸಣೆಗೆ ಅಥವಾ ನ್ಯಾಯಾಂಗೀಯ ತನಿಖೆಗೆ ಒಪ್ಪಿಸುವ ಸಾಧ್ಯತೆಯಿದೆ.

ನಮ್ಮ ಎಂ.ಎಲ್‌.ಎ.ಗಳ “ಮಾರಾಟ ದರ’ ಬೆಂಗಳೂರು ಹಾಗೂ ಇತರ ನಗರಗಳಲ್ಲಿನ ರಿಯಲ್‌ ಎಸ್ಟೇಟ್‌ ಬೆಲೆಯಂತೆಯೇ ವಿಪರೀತ ಏರಿಕೆ ಕಂಡಿದೆಯಾದರೂ, ಇದೇ ಪ್ರಮಾಣದಲ್ಲಿ ಈ ಶಾಸಕರ ಅಥವಾ ಸಂಸತ್ಸದಸ್ಯರುಗಳ ಕಾರ್ಯ ಸಾಮರ್ಥ್ಯದ ಗುಣಮಟ್ಟವೂ ವೃದ್ಧಿಯಾ ಗಿದೆಯೇ ಎಂದು ಅಚ್ಚರಿಪಡಬೇಕಾದ ಪಾಡು ನಮ್ಮದಾಗಿದೆ. ಇಂಥ ಸಾಧ್ಯತೆ ಕಡಿಮೆಯೆಂದೇ ಹೇಳಬೇಕು. ಯಾಕೆಂದರೆ ನಮ್ಮ ವಿಧಾನಮಂಡಲದ ಉಭಯ ಸದನಗಳು ಕಲಾಪಕ್ಕೆ ಸಿದ್ಧವಾಗುವುದೇ ಅಪರೂಪ. ನಮ್ಮ ಶಾಸಕರನ್ನು ಇಂದು ಯಾವ ಮಾನದಂಡದಿಂದ ಅಳೆಯಲಾಗುತ್ತಿದೆ? ಅವರ “ವಿಧಾನ ಮಂಡಲೇತರ” ಚಟುವಟಿಕೆಗಳ ಮೂಲಕ; “ಸಂಕಷ್ಟ’ದಲ್ಲಿರುವ ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಹೇಗೆ ನೆರವಾಗುತ್ತಾರೆ ಎನ್ನುವುದರ ಮೂಲಕ, ಅಥವಾ “ಸರಿಯಾದ’ ಕಂಟ್ರಾಕ್ಟರ್‌ಗೆ ಸರಕಾರದ ಕಾಮಗಾರಿಗಳನ್ನು ಹೇಗೆ ದಕ್ಕಿಸಿಕೊಡುತ್ತಾರೆ ಎನ್ನುವುದರ ಮೂಲಕ ಅಥವಾ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರದೇ ಹಣವನ್ನು ಅವರ (ಶಾಸಕರ) ನಿಧಿಯಿಂದ ಸ್ವಂತ ಜೇಬಿನ ಹಣವೆನ್ನುವ ರೀತಿಯಲ್ಲಿ ತೆಗೆದು ಖರ್ಚು ಮಾಡಿ ತೋರಿಸುವಲ್ಲಿ ಹೇಗೆ ಸಫ‌ಲರಾಗು ತ್ತಾರೆನ್ನುವುದರ ಮೂಲಕ. ಎಂ.ಪಿ., ಎಂ.ಎಲ್‌.ಎ. ಸ್ಥಳೀಯ ಅಭಿವೃದ್ಧಿ ನಿಧಿ ರೂಪದಲ್ಲಿ ಹಣ ಒದಗಿಸುವ ಕ್ರಮವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆಯಾದರೂ, ಅಧಿಕಾರಿಗಳ ವರ್ಗಾ ವಣೆಯ ವಿಷಯದಲ್ಲಿ ರಾಜಕೀಯ ಪ್ರಭಾವ ಬಳಸುವುದನ್ನು ಕರ್ನಾಟಕ ಸರಕಾರದ ಆದೇಶವೊಂದರ ಮೂಲಕ ನಿಷೇಧಿಸಲಾಗಿದೆ ಎಂಬ ಸತ್ಯವನ್ನು ಯಾರೂ ಈ ಶಾಸಕರು ಹಾಗೂ ಸಂಸದರಿಗೆ ಇದುವರೆಗೂ ತಿಳಿಸುವ ಗೋಜಿಗೆ ಹೋದಂತಿಲ್ಲ.

40ಕ್ಕೂ ಹೆಚ್ಚು ಮಠಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಇತರ ಜಾತಿ ಸಂಘಟನೆಗಳಿಗೆ 70 ಕೋ. ರೂ.ಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಘೋಷಿಸಿದ್ದು ದೊಡ್ಡ ಸುದ್ದಿಯಾಗಿ ಪ್ರಕಟ/ಪ್ರಸಾರವಾಗಿದೆಯಾದರೂ ಈ ಮೊತ್ತ ನಿಜಕ್ಕೂ ತೀರಾ ಅಲ್ಪ ಪ್ರಮಾಣದ್ದು ಎಂದೇ ಹೇಳಬೇಕು. ಬಜೆಟ್‌ನ ಗಾತ್ರ 2.34 ಲಕ್ಷ ಕೋಟಿ ರೂ.ಗಳು. ಸರಕಾರದ ಸಹಾಯಧನವನ್ನು ದುರುಪ ಯೋಗಿಸಿಕೊಂಡು ಶಿಕ್ಷಕರನ್ನು ಶೋಷಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಭಾಷೆ-ಸಂಸ್ಕೃತಿಯ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ಖಾಸಗಿ ಸಂಘಟನೆಗಳಿಗೆ ಕೋಟಿಗಟ್ಟಲೆ ಹಣವನ್ನು ಧನಸಹಾಯದ ಹೆಸರಿನಲ್ಲಿ ಸರಕಾರ ಖರ್ಚು ಮಾಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.

ಈ ಹಿಂದೆ ಹಿಂದೂ ಮಠಗಳು ಹಾಗೂ ಮಂದಿರಗಳ ಕೃಷಿ ಭೂಮಿಯನ್ನು ಜಾತ್ಯತೀತ ನೀತಿ ಹಾಗೂ ಸಮಾಜವಾದದ ಹೆಸರಿನಲ್ಲಿ ಕಿತ್ತುಕೊಂಡ ತನ್ನ ಕೃತ್ಯದ (ಮೈತ್ರಿ ಸರಕಾರದ ಸಹಭಾಗಿಯಾಗಿರುವ) ಕಾಂಗ್ರೆಸ್‌ ಪಕ್ಷ ಇಂದು ಪಶ್ಚಾತ್ತಾಪ ಪಡುತ್ತಿದೆಯೇನೋ. ಆದಾಯ ಮೂಲದ ಕೊರತೆಯಿಂದ ಹಾಗೂ ಭಕ್ತಾಭಿಮಾನಿಗಳ ಪೋಷಣೆಯ ಕೊರತೆಯಿಂದ ಬಳಲುತ್ತಿರುವ ಮಠ-ಮಂದಿರಗಳಿಗೆ ಸರಕಾರ ನೆರವು ನೀಡಬೇಕಾಗುತ್ತದೆಂಬ ಮಾತನ್ನು ಹೇಳಲೇಬೇಕಾಗುತ್ತದೆ. ಈ ರೀತಿಯ ಹಣ ಒದಗಣೆಯಲ್ಲಿ “ತಾತ್ಕಾಲಿಕ ಅನುದಾನ’ವೆಂಬಂಥ ಕ್ರಮಗಳನ್ನು ಸರಕಾರ ಕೈ ಬಿಡಬೇಕು; ಆರ್ಥಿಕ ಅನುಕೂಲತೆಯಿರುವ ಮಠ-ಮಂದಿರಗಳಿಗೆ ಹಣ ನೀಡಲು ಮುಂದಾಗಬಾರದು. ಸರಕಾರದ ರಾಜಕೀಯ ಸಿದ್ಧಾಂತ ಏನೇ ಇರಲಿ, ಹಣದ ಕೊರತೆ ಹಾಗೂ ಸಾರ್ವಜನಿಕ ನೆರವಿನ ಕೊರತೆಯಿರುವಂಥ ಅರ್ಹ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ನೆರವಿನ ಹಸ್ತ ಚಾಚಬೇಕು. ಕ್ರೈಸ್ತ ಅಭಿವೃದ್ಧಿ ನಿಗಮ (ಕ್ರಿಶ್ಚಿಯನ್‌ ಡೆವಲಪ್‌ಮೆಂಟ್‌ ಕಾರ್ಪೊರೇಶನ್‌)ಕ್ಕೆ 200 ಕೋ. ರೂ. ಅನುದಾನ ಘೋಷಿಸಿರುವುದನ್ನು ಗಮನಿಸಿದರೆ 2011-12ರ ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದ್ದ ಕ್ರೈಸ್ತ ಅಭಿವೃದ್ಧಿ ಪರಿಷತ್‌ (ಕ್ರಿಶ್ಚಿಯನ್‌ ಡೆವೆಲಪ್‌ಮೆಂಟ್‌ ಪರಿಷತ್‌)ನ ಕಥೆ ಏನಾಯಿತು ಎಂಬ ಪ್ರಶ್ನೆ ಮೂಡಿಯೇ ಮೂಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next