Advertisement

ಪಾಕ್‌ನ ಉಗ್ರ ಸುಳ್ಳಿಗೆ ನೆರವು ಕಟ್‌ :ಟ್ರಂಪ್‌

08:31 AM Jan 06, 2018 | |

ವಾಷಿಂಗ್ಟನ್‌: ಉಗ್ರರ ಸದೆಬಡಿಯುವುದಾಗಿ ಹೇಳಿ ನೆರವು ಪಡೆದು, ದ್ವಿಮುಖ ನೀತಿ ಅನುಸರಿಸುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭದ್ರತಾ ನೆರವು ಸ್ಥಗಿತಗೊಳಿಸಿ ಬರೆ ಎಳೆದಿದ್ದಾರೆ.

Advertisement

ಅಫ್ಘಾನಿಸ್ತಾನದ ತಾಲಿಬಾನ್‌ ಉಗ್ರರು ಮತ್ತು ಹಕ್ಕಾನಿ ನೆಟ್‌ವರ್ಕ್‌ನ ಉಗ್ರರ ದಮನ ವಿಚಾರದಲ್ಲಿ ಪಾಕಿಸ್ತಾನ ಇಬ್ಬಗೆ ನೀತಿ ಅನುಸರಿಸುತ್ತಿದೆ
ಎಂದು ಆರೋಪಿಸಿರುವ ಅಮೆರಿಕ, ಇದರಿಂದಾಗಿಯೇ ಇನ್ನು ಮುಂದೆ ವಾರ್ಷಿಕವಾಗಿ ನೀಡುತ್ತಿದ್ದ 1.5 ಬಿಲಿಯನ್‌ ಡಾಲರ್‌(7 ಸಾವಿರ ಕೋಟಿರೂ.) ನೆರವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಟ್ರಂಪ್‌ ಆಡಳಿತದ ಈ ಕಟು ನಿರ್ಧಾರದಿಂದಾಗಿ ಪಾಕಿಸ್ತಾನಕ್ಕೆ ಇನ್ನು ಮುಂದೆ ಅಮೆರಿಕದ ಕಡೆಯಿಂದ
ಯಾವುದೇ ರೀತಿಯ ಶಸ್ತ್ರಾಸ್ತ್ರಗಳು ಸಿಗುವುದಿಲ್ಲ. ಜತೆಗೆ, ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುವವರೆಗೂ ನಾವು ಯಾವುದೇ ರೀತಿಯ ಅನುದಾನ ನೀಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದೆ.

2018ರ ಹೊಸ ವರ್ಷದ ದಿನದಂದೇ, ಉಗ್ರರ ದಮನಕ್ಕಾಗಿ ಪಾಕಿಸ್ತಾನಕ್ಕೆ ತಾನು ನೀಡಬೇಕಿರುವ ಎಲ್ಲಾ ಅನುದಾನಗಳನ್ನು ಸ್ಥಗಿತಗೊಳಿಸುವುದಾಗಿ
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವಿಟರ್‌ ನಲ್ಲಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ, 2016ರ ಆರ್ಥಿಕ ವರ್ಷದಲ್ಲಿ ವಿದೇಶಿ ಮಿಲಿಟರಿ ಹೂಡಿಕೆ
(ಎಫ್ಎಂಎಫ್) ಯೋಜನೆಯಡಿ ಪಾಕಿಸ್ತಾನಕ್ಕೆ ಅಮೆರಿಕದಿಂದ ಬರಬೇಕಿದ್ದ 255 ಮಿಲಿಯನ್‌ ಡಾಲರ್‌ (ಅಂದಾಜು 1,600 ಕೋಟಿ ರೂ.)
ಗಳನ್ನು ಜ. 2ರಂದು ಅಮೆರಿಕ ತಡೆಹಿಡಿಯಿತು.

ಇದೀಗ, ಸಮ್ಮಿಶ್ರ ಬೆಂಬಲ ನಿಧಿ (ಸಿಎಸ್‌ಎಫ್) ಒಪ್ಪಂದದಡಿಯಲ್ಲಿ ಪಾಕಿಸ್ತಾನಕ್ಕೆ 2017ರಲ್ಲಿ ನೀಡಬೇಕಿದ್ದ 900 ಮಿಲಿಯನ್‌ ಡಾಲರ್‌ (ಸುಮಾರು 5,700 ಕೋಟಿ ರೂ.)ಗಳಿಗೂ ಅಮೆರಿಕ ಕತ್ತರಿ ಹಾಕಿರುವುದಾಗಿ ಪ್ರಕಟಿಸಿದೆ. ಹೀಗಾಗಿ, ಒಟ್ಟಾರೆಯಾಗಿ, 1.15 ಬಿಲಿಯನ್‌ ಅಮೆರಿಕನ್‌
ಡಾಲರ್‌ಗಳಷ್ಟು(ಅಂದಾಜು 7290 ಕೋಟಿ ರೂ.) ಅನುದಾನವನ್ನು ನಿಲ್ಲಿಸಲು ಅಮೆರಿಕ ನಿರ್ಧರಿಸಿದೆ. 

ಹಫಿಜ್‌ ಪ್ರಕರಣಕ್ಕೆ ಸಂಬಂಧವಿಲ್ಲ: ಇದೇ ವೇಳೆ, ಮುಂಬೈ ದಾಳಿಯ ಪ್ರಮುಖ ಸಂಚು ಕೋರ, ಉಗ್ರ ಹಫಿಜ್‌ ಸಯೀದ್‌ ವಿರುದ್ಧ ಕ್ರಮ ಕೈಗೊಂಡಿಲ್ಲ
ಅಥವಾ ಆತನನ್ನು ಗೃಹಬಂಧನದಿಂದ ಬಿಡುಗಡೆ ಮಾಡ ಲಾಗಿದೆ ಎಂಬ ಕಾರಣಕ್ಕೆ ಹಣಕಾಸು ನೆರವು ಸ್ಥಗಿತಗೊಳಿಸಿಲ್ಲ ಎಂದಿದೆ. ಆದರೆ, ಈ ನೆರವು
ಸ್ಥಗಿತಕ್ಕೆ ಪ್ರಮುಖ ಕಾರಣ, ಇತ್ತೀಚೆಗಷ್ಟೇ ಪಾಕ್‌ ಸೇನೆ ಹಕ್ಕಾನಿ ನೆಟ್‌ವರ್ಕ್‌ನ ಉಗ್ರನೊಬ್ಬನನ್ನು ಬಂಧಿಸಿತ್ತು. ತಮ್ಮ ವಶಕ್ಕೆ ಕೊಡುವಂತೆ ಅಮೆರಿಕ
ಕೇಳಿತ್ತು. ಆದರೆ ಪಾಕ್‌ ಇದನ್ನು ತಳ್ಳಿಹಾಕಿತ್ತು. ಇದರಿಂದ ಸಿಟ್ಟಿಗೆದ್ದಿ ರುವ ಅಮೆರಿಕ ನೆರವು ಸ್ಥಗಿತದ ನಿರ್ಧಾರ ತೆಗೆದು ಕೊಂಡಿದೆ ಎಂದು ಹೇಳಲಾಗಿದೆ.

Advertisement

ಪಾಕ್‌ ಇನ್ನಷ್ಟು ಸನಿಹ ಎಂದ ಚೀನಾ ಪತ್ರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಕಿಸ್ತಾನದ ವಿರುದ್ಧ ಕಿಡಿ ಕಾರುತ್ತಿರುವುದು ಹೆಚ್ಚುತ್ತಿರುವಂತೆಯೇ ಚೀನಾಗೆ ಪಾಕ್‌ ಇನ್ನಷ್ಟು ಹತ್ತಿರವಾಗುತ್ತಿದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. ಇರಾನ್‌ನ ಛಬಹಾರ್‌ ಬಂದರಿನ ಸಮೀಪ ಇರುವ ಪಾಕಿಸ್ತಾನದ
ಜಿವಾನಿ ಸೇನಾ ನೆಲೆಯನ್ನು ಚೀನಾ ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದೂ ವರದಿ ಮಾಡಲಾಗಿದೆ. ಜಿವಾನಿ ಸೇನಾ ನೆಲೆಯು ಮುಂಬೈ ಕರಾವಳಿಗೂ ಸಮೀಪದಲ್ಲಿದೆ. ಅಲ್ಲದೆ ಉಭಯ ದೇಶಗಳ ವಹಿವಾಟಿನಲ್ಲಿ ಚೀನಾ ಕರೆನ್ಸಿಯನ್ನೇ ವಿನಿಮಯ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ.

ಮುಂದೇನಾಗುತ್ತೋ ಕಾದು ನೋಡಿ: ಪಾಕ್‌
ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯಿಸಿ ರುವ ಪಾಕಿಸ್ತಾನ, “”ಅಮೆರಿಕದ ಈ ಏಕ ಪಕ್ಷೀಯ ನಿರ್ಧಾರ ಭಯೋತ್ಪಾದನೆ ದಮನದ ಬಗ್ಗೆ ಎರಡೂ ದೇಶಗಳು (ಅಮೆರಿಕ ಹಾಗೂ ಪಾಕಿಸ್ತಾನ) ಹೊಂದಿದ್ದ ಸಾಮಾನ್ಯ ಗುರಿಗಳ ಮೇಲೆ ಖಂಡಿತ ಪ್ರಭಾವ ಬೀರುತ್ತದೆ. ಮುಂದೆ ಕಾಲವೇ ಇದಕ್ಕೆ ಉತ್ತರ ಹೇಳುತ್ತದೆ” ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪುಷ್ಟಿ ನೀಡುವಂತೆ ಉಗ್ರವಾದದ ವಿರುದ್ಧ ನಿಖರ ಧ್ವನಿಯೆತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಭದ್ರತಾ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಈ ಸಂಬಂಧ ಮೊದಲೇ ಸುಳಿವು ನೀಡಿದ್ದ ಅಮೆರಿಕ ನುಡಿದಂತೆ ನಡೆದುಕೊಂಡ ಹಿನ್ನೆಲೆಯಲ್ಲಿ ಚೀನಾವೂ ಗುಟುರ್‌ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next